Home » ತಿಪ್ಪೆ ಮಾಡುವ ಮುನ್ನ.. ನೀವು ತಲೆಗಾಕಿಕೊಳ್ಳಬೇಕಾದ ವಿಷಯವಿದು!

ತಿಪ್ಪೆ ಮಾಡುವ ಮುನ್ನ.. ನೀವು ತಲೆಗಾಕಿಕೊಳ್ಳಬೇಕಾದ ವಿಷಯವಿದು!

by manager manager

ಇಂದು ಊರು ಬಿಟ್ಟು ಹೊಲದ ಹತ್ತಿರ ಹೆಚ್ಚು ಮನೆ ಕಟ್ಟಿಕೊಳ್ಳುವವರು ಹೆಚ್ಚಾಗಿದ್ದಾರೆ. ತಮ್ಮ ತಮ್ಮ ಅನುಕೂಲಕ್ಕಾಗಿ ಈ ರೀತಿ ಮನೆ ಕಟ್ಟಿಕೊಳ್ಳುವವರು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಹಲವರು ಮನೆ ಮುಂದೆಯೇ, ಹಿಂದೆಯೇ ಅಥವಾ ತುಂಬಾ ಹತ್ತಿರದಲ್ಲಿಯೇ ಸುತ್ತಾ ಮುತ್ತಾ ತಿಪ್ಪೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ.

ಆದರೆ ಮನೆ ಸುತ್ತಮುತ್ತ ತೀರ ಹತ್ತಿರದಲ್ಲಿ ತಿಪ್ಪೆ ಮಾಡಲೇಬಾರದು. ಈಗಾಗಲೇ ಹಲವರು ಈ ರೀತಿ ಮನೆ ಪಕ್ಕದಲ್ಲೇ ತಿಪ್ಪೆ ಮಾಡಿದ್ದರೇ ಮೊದಲು ಅದನ್ನು ದೂರ ಸಾಗಿಸಿ ಬಿಡಿ ಅಥವಾ ಹೊಲಕ್ಕೆ ಚೆಲ್ಲಿ ಬಿಡಿ. ಹಾಗೆ ತಿಪ್ಪೆ ಮಾಡುವ ಮುನ್ನ ನೀವು ಈ ಕೆಳಗೆ ನೀಡಿರುವ ಹಲವು ಉಪಯುಕ್ತ ಮಾಹಿತಿಗಳನ್ನು ತಿಳಿದಿರಲೇಬೇಕು.

– ವಾಸಿಸುವ ಮನೆಯಿಂದ ಅಥವಾ ಕೊಟ್ಟಿಗೆಗೆ ಬಹು ದೂರವಾಗಿ ತಿಪ್ಪೆ ಮಾಡುವುದು ಮನೆಯವರ ಆರೋಗ್ಯ ದೃಷ್ಟಿಯಿಂದ ಉತ್ತಮ. ಕಾರಣ ಹೆಚ್ಚು ಸೊಳ್ಳೆ, ಅದರಲ್ಲೂ ಮಳೆಗಾಲದಲ್ಲಿ ತಿಪ್ಪೆ ಮನೆ ಪಕ್ಕದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ತೊಂದರೆ ಅನುಭವಿಸಬೇಕಾಗುತ್ತದೆ.

– ತಿಪ್ಪೆ ಮಾಡುವ ಸ್ಥಳದಲ್ಲಿ ಮೊದಲು ಹೊಂಗೆ, ಬೇವು ಅಥವಾ ಚೆರ್ರಿ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿರಿ. ಇವುಗಳ ನೆರಳಲ್ಲಿ ತಿಪ್ಪೆ ಮಾಡಿ.

– ಕೊಟ್ಟಿಗೆಯಲ್ಲಿ ಸಗಣಿ, ಗಂಜಲ ನಿಲ್ಲದಂತೆ ಹರಿದು ಹೋಗಲು ನೆಲಕ್ಕೆ ಚಪ್ಪಡಿಗಳನ್ನು ಹಾಕಿಸಿರಿ. ಇಳಿಜಾರು ಇರುವಂತೆ ವ್ಯವಸ್ಥೆ ಮಾಡಿರಿ.

– ಸಾಧ್ಯವಾದರೆ ಪ್ರತಿದಿನ ಬೇಲಿಯಲ್ಲಿ ಬೆಳೆದಿರುವ ಗ್ಲಿರಿಸೀಡಿಯಾ ಗೊಬ್ಬರದ ಗಿಡದ ಸೊಪ್ಪು ತಂದು ಕೊಟ್ಟಿಗೆಯಲ್ಲಿ ಹಾಕಿ. ಇದು ಸಿಗದಿದ್ದರೇ ತಂಗಡಿ ಸೊಪ್ಪು ಹಾಕಿ. ದನಕರು, ಎಮ್ಮೆಗಳಿಗೆ ಮಲಗಲು ಮೃದುವಾಗಿರುತ್ತದೆ.

– ಮರುದಿನ ಬೆಳಿಗ್ಗೆ ಹೊತ್ತಿಗೆ ದನಕರುಗಳ ತೊಪ್ಪೆ(ಸಗಣಿ) ಮತ್ತು ಗಂಜಲ ಎರಡು ಮಿಶ್ರವಾಗಿ ಉತ್ತಮ ಗೊಬ್ಬರವಾಗುತ್ತದೆ.

– ಪ್ರತಿದಿನ ಕೊಟ್ಟಿಗೆ ಕಸವನ್ನು ಮತ್ತು ಗೊಂತಿನಲ್ಲಿ ಉಳಿದ ಮೇವನ್ನು ತಿಪ್ಪೆಗೆ ಹಾಕಿದ ನಂತರ ಸ್ವಲ್ಪ ಪ್ರಮಾಣದಲ್ಲಿ ಮಣ್ಣನ್ನು ಅದರ ಮೇಲೆ ಹರಡಿ. ಹೀಗೆ ಮಾಡುವುದರಿಂದ ಆ ಕಸವು ಬೇಗ ಕೊಳೆಯಲು ಅನುಕೂಲವಾಗುತ್ತದೆ.

– ತಿಪ್ಪೆ ಗೊಬ್ಬರ ನಿಮ್ಮ ಹೊಲಕ್ಕೆ ಉತ್ತಮ ಸತ್ವವನ್ನು ನೀಡಬೇಕು, ಉತ್ಕೃಷ್ಟವಾಗಿರಬೇಕು ಎಂದರೆ ರಾಕ್ ಫಾಸ್ಟೇಟ್, ಬೇವು, ಕಡಲೆ, ಹರಳು, ಹೊಂಗೆ ಯಾವುದಾದರೂ ಹಿಂಡಿಯನ್ನು ಎರಡು ವಾರಗಳಿಗೊಮ್ಮೆ ತಿಪ್ಪೆ ಮೇಲೆ ಹರಡಿ.

– ರಾತ್ರಿ ಉಳಿದ ಅನ್ನ, ಸಾರು ಮತ್ತು ಇತರೆ ಆಹಾರ ಪದಾರ್ಥಗಳನ್ನು ನೀವು ಬಳಸದೇ ಹಾಗೂ ದನಕರುಗಳಿಗೆ ತಿನ್ನಿಸದೇ ಇದ್ದಲ್ಲಿ ಅಂತಹ ಆಹಾರವನ್ನು ತಿಪ್ಪೆಗೆ ಹಾಕಿ. ಚರಂಡಿಗೆ ಬಿಸಾಡಬೇಡಿ.

ತಿಪ್ಪೆ ಗೊಬ್ಬರ ಹೆಚ್ಚು ಸತ್ವವನ್ನು ಪಡೆಯಬೇಕಾದರೆ ಈ ಕೆಳಗಿನ ಸಲಹೆಗಳನ್ನು ಫಾಲೋ ಮಾಡಿ

– ಜೈವಿಕಗೊಬ್ಬರಗಳಾದ ನೀಲಿ ಹಸಿರು ಪಾಚಿ, ಸುಡೊಮಾನಸ್, ಅಜೋಸ್ಪಿರಲ, ಅಜೋಲಾ, ಆಸ್ಪರಾಲಿಜಸ್ ಗಳನ್ನು ತಿಪ್ಪೆಗೆ ಸೇರಿಸಿ.

– ಒಂದು ಕೆಜಿ ಬೆಲ್ಲವನ್ನು ಒಂದು ಬಿಂದಿಗೆಗೆ ಹಾಕಿ ಕರಗಿದ ನಂತರ ತಿಪ್ಪೆ ಮೇಲೆ ಎಲ್ಲಾ ಕಡೆ ಹಾಕಿ.

– ತಿಪ್ಪೆ ಗರಿಷ್ಠ 4 ಅಡಿ ಎತ್ತರವಾದ ನಂತರ ಕೆರೆಯ ಗೋಡು ಸಿಕ್ಕಲ್ಲಿ ಅದರ ಮೇಲೆ ಹಾಕಿ. ನಂತರ ಮೂರು ನಾಲ್ಕು ತಿಂಗಳಲ್ಲಿ ನಿಮಗೆ ಉತ್ಕೃಷ್ಟ ಸಾವಯವ ಗೊಬ್ಬರ ದೊರೆಯುತ್ತದೆ.

– ಚೆರ್ರಿ ಗಿಡಗಳನ್ನು ಹಾಕುವುದರಿಂದ ಅವು ಬೇಗ ಬೆಳೆಯುತ್ತವೆ. ಕೆನಾಪಿ ಬೇಗ ಹರಡುತ್ತದೆ. ನೆರಳು ಸೃಷ್ಟಿಯಾಗುತ್ತದೆ. ಜತೆಗೆ ಹೆಚ್ಚು ಹಣ್ಣು ಬಿಡುತ್ತವೆ. ಇವನ್ನು ತಿನ್ನಲು ಪಕ್ಷಿಗಳು ಬರುವುದರಿಂದ ಮರದ ಮೇಲೆ ಕುಳಿತು ಹಣ್ಣು ತಿನ್ನುವ ಪಕ್ಷಿಗಳು ತಿಪ್ಪೆ ಮೇಲೆ ಹಿಕ್ಕೆ ಹಾಕುತ್ತವೆ. ಇದರಿಂದ ತಿಪ್ಪೆಯಲ್ಲಿರುವ ಸೂಕ್ಷ್ಮಾಣು ಜೀವಿಗಳ ಅಭಿವೃದ್ದಿಯಾಗಿ ತಿಪ್ಪೆಯ ಪ್ರಮಾಣ ಮತ್ತು ಉತ್ತಮ ಸಾವಯವ ಗೊಬ್ಬರ ಎರಡು ಹೆಚ್ಚಾಗುತ್ತದೆ.

You may also like