Home » ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ “ಅಕ್ಕಮಹದೇವಿ”ಯ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ “ಅಕ್ಕಮಹದೇವಿ”ಯ ಬಗ್ಗೆ ನಿಮಗೆಷ್ಟು ಗೊತ್ತು?

by manager manager

ಅಕ್ಕಮಹಾದೇವಿ ಕನ್ನಡ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸಿಕೊಂಡ ಅಕ್ಕಮಹದೇವಿ ಚಿಕ್ಕ ವಯಸ್ಸಿನಲ್ಲೇ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ (ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ. ಅವಳ ಅಂಕಿತನಾಮ: “ಚೆನ್ನಮಲ್ಲಿಕಾರ್ಜುನ”

ಚಾಮರಸ ಕವಿಯ ಈ ಸಾಲುಗಳು ಮಹಾದೇವಿಯಕ್ಕ ಅದೆಷ್ಟು ಘನ ಶರಣೆಯಾಗಿದ್ದರು ಎಂಬುದಕ್ಕೆ ಕೈಗನ್ನಡಿಯಾಗಿದೆ. ಅಕ್ಕ ಜನ್ಮತಾಳಿದ್ದು ಶಿವಮೊಗ್ಗ ಜಿಲ್ಲೆಯ ಉಡುತಡಿ (ಉಡುಗಣಿ). ಅಕ್ಕನ ತಂದೆ ತಾಯಿಯ ಹೆಸರು ಓಂಕಾರ ಶಟ್ಟಿ ಮತ್ತು ಲಿಂಗಮ್ಮ. ಆಣಿಮುತ್ತಾಗಿ ಜನಿಸಿದ ಮಗುವಿಗೆ ಮಹಾದೇವಿ ಎಂಬ ನಾಮಕರಣವಾಯಿತು.

ಅಪ್ರತಿಮ ಸುಂದರಿಯಾದ ಅಕ್ಕಮಹಾದೇವಿಯ ಸೌಂದರ್ಯಕ್ಕೆ ಮಾರುಹೋದ ಕೌಶಿಕ ರಾಜ ಇವಳನ್ನು ವರಿಸಿದ. ಅಕ್ಕಮಹಾದೇವಿಗೆ ಲೌಕಿಕದಲ್ಲಿ ಆಸೆಯಿರಲೇ ಇಲ್ಲ. ಹೆತ್ತವರ ಒತ್ತಾಯಕ್ಕೆ ಮದುವೆಯೆಂಬ ವಿಧಿಗೆ ಕೊರಳೊಡ್ಡಿದವಳು ಈಕೆ. ಅದೊಂದು ದಿನ ಕೌಶಿಕ ರಾಜ ನೀನು ಉಟ್ಟಿರುವುದು ನನ್ನ ಬಟ್ಟೆ, ಧರಿಸಿರುವ ಆಭರಣಗಳು ನನ್ನವು, ತಿನ್ನುತ್ತಿರುವ ಅನ್ನ ನನ್ನದು ಎಂದು ಹೀಯಾಳಿಸಿದ್ದನ್ನೇ ಕಾರಣವಾಗಿಟ್ಟುಕೊಂಡು, ತನ್ನ ಶರೀರದ ಮೇಲಿರುವ ಪ್ರತಿಯೊಂದು ವಸ್ತು-ವಿಷಯವನ್ನೂ ಕಳಚಿಟ್ಟು, ನಿರ್ವಾಣ ಶರೀರವನ್ನು ಸೊಂಪಾದ ತಲೆಕೂದಲುಗಳಿಂದ ಮುಚ್ಚಿಕೊಂಡು ಅರಮನೆಯಿಂದ ಹೊರನಡೆಯುತ್ತಾಳೆ. ಇದು ಅಕ್ಕಮಹಾದೇವಿಯ ಜೀವನದಲ್ಲಿ ಒಂದು ಅಗ್ನಿದಿವ್ಯಘಟನೆ. ಆಕೆ ವಿಚಾರಸ್ವಾತಂತ್ರ್ಯದ ಮಹಿಳೆ. ಗಂಡ ಮತ್ತು ವಿಚಾರಸ್ವಾತಂತ್ರ್ಯ ಈ ಎರಡು ಆಯ್ಕೆಗಳು ಆಹ್ವಾನವಾದಾಗ ಗಂಡನನ್ನು ಧಿಕ್ಕರಿಸಿ ವಿಚಾರಸ್ವಾತಂತ್ರ್ಯವನ್ನು ಆಯ್ದುಕೊಂಡುದು ಲೋಕದ ಇತಿಹಾಸದಲ್ಲಿಯೇ ಅಪರೂಪದ ಘಟನೆಯಾಗಿದೆ.

ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ ಮತ್ತು ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

  • ‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ’,
  • ‘ಬೆಟ್ಟದಾ ಮೇಲೊಂದು ಮನೆಯ ಮಾಡಿ , ಮೃಗಗಳಿಗೆ ಅಂಜಿದೊಡೆಂತಯ್ಯಾ’ ,
  • ‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು’
    ಮುಂತಾದ ವಚನಗಳು ಅವರ ಲೋಕಾನುಭವ, ಜ್ಞಾನ ಸಂಪನ್ನತೆ, ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ.

ವಚನ ಸಾಹಿತ್ಯವೆಂದಾಕ್ಷಣ ಪುರುಷರಲ್ಲಿ ಮೊದಲು ನೆನಪಾಗುವ ಹೆಸರು ಬಸವಣ್ಣನವರದ್ದು, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿಯದು. ಶರಣರ ಚರಿತ್ರೆಗೆ ಸಂಬಂಧಪಟ್ಟಂತೆ ಅನೇಕ ಅಸ್ಪಷ್ಟತೆಗಳು ಅಲ್ಲಲ್ಲಿ ಉಳಿದುಕೊಂಡಿದ್ದು, ಇದಕ್ಕೆ ಮಹಾದೇವಿಯಕ್ಕ ಹೊರತಲ್ಲ. 15ನೆಯ ಶತಮಾನದ ಪೂರ್ವದಲ್ಲಿ ಕಂಡು ಬರುವ ಅವಳ ಚರಿತ್ರೆ, ಆ ಬಳಿಕ ಪ್ರಭುದೇವರಂತೆ ವ್ಯತ್ಯಾಸಕ್ಕೆ ಗುರಿಯಾದಂತೆ ಕಾಣುತ್ತದೆ. ಈ ಕಾಲದಲ್ಲಿ ಮಹತ್ವ ಪಡೆದ ವಿರಕ್ತ ಸಂಪ್ರದಾಯ ವೈರಾಗ್ಯಕ್ಕೆ ಒಂದು ಕಡೆ ಪ್ರಭುವನ್ನು, ಇನ್ನೊಂದು ಕಡೆ ಅಕ್ಕಮಹಾದೇವಿಯನ್ನು ಚಿತ್ರಿಸಲು ತೊಡಗಿದುದೆ ಇದಕ್ಕೆ ಕಾರಣವೆಂದು ತೋರುತ್ತದೆ. ಹೀಗಾಗಿ ಹರಿಹರನಲ್ಲಿ ಬರುವ ಇವಳ ಚರಿತ್ರೆ ಪ್ರಭುಲಿಂಗ ಲೀಲೆ ಮತ್ತು ಈ ಪರಂಪರೆಯ ಸಾಹಿತ್ಯ ಕೃತಿಗಳಲ್ಲಿ ವ್ಯತ್ಯಾಸ ರೂಪವನ್ನು ಪಡೆದಿದೆ.

“ಚೆಂದನವ ಕಡಿದು ಕೊರೆದು ತೇದಡೆ ನೊಂದೆನೆಂದು ಕಂಪು ಬಿಟ್ಟಿತ್ತೆ?”,
“ಮನೆಮನೆ ತಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ”,
ಮೊದಲಾದ ವಚನಗಲ್ಲಿ ಈ ಅಂಶಗಳನ್ನು ಗುರುತಿಸಬಹುದಾಗಿದೆ. ತನ್ನ ಜೀವನದ ಉತ್ತರಾರ್ಧದಲ್ಲಿ ಆವಳು ಮಲ್ಲಿಕಾರ್ಜುನ ವಶವರ್ತಿಯಾಗಿ ಲೋಕವನೆಲ್ಲ ಸುತ್ತಿ, ಕಲ್ಯಾಣವೆಂಬ ಕೈಲಾಸದ ಕೀರ್ತಿ ಕೇಳಿ ಅಲ್ಲಿಗೆ ಪಯಣ ಬೆಳೆಸಿದಳು. ಹಾದಿಯುದ್ದಕ್ಕೂ ಕೀಡಿಗೇಡಿಗಳ ಹಿಂಸೆಯನ್ನು ಸಹಿಸುತ್ತಾ ಹಸಿವೆ, ತೃಷೆ, ಗಾಳಿ , ಮಳೆ. ಬಿಸಿಲು ಚಳಿಗಳನ್ನು ಭಂಗಿಸುತ್ತ ನಡೆದಳು.
ಅನುಭವ ಮಂಟಪದಲ್ಲಿ ಅವಳು ಎದುರಿಸಿದ ಪ್ರಶ್ನೆ, ಕೊಟ್ಟ ಉತ್ತರಗಳು ಅವಳ ಚಿಂತನೆಯ ಔನತ್ಯವನ್ನು ಸಾರುತ್ತವೆ. ಅಲ್ಲಿ ಪ್ರಭುದೇವ, ಬಸವಣ್ಣ, ಚೆನ್ನಬಸವಣ್ಣ ಮೊದಲಾದ ಮಹಾತ್ಮರ ಮಧ್ಯ ಎದ್ದುಕಾಣುವಂತೆ ಬದುಕಿದ ಅಕ್ಕಮಹಾದೇವಿ, ಅವಳೇ ಹೇಳುವಂತೆ

  • “ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ಭಾವಿಸಲು ಗಂಡುರೂಪ”
    ಎಂಬಂತೆ ವ್ಯಕ್ತಿತ್ವವನ್ನು ರೂಪಸಿಕೊಂಡಳು. ಅಲ್ಲಮಪ್ರಭುಗಳ ಪರೀಕ್ಷೆಯಲ್ಲಿ ಜಯ ಗಳಿಸಿ ಆಧ್ಯಾತ್ಮಸಾಗರದ ಅನಘ್ರ್ಯರತ್ನವಾಗಿ ಹೊರಹೊಮ್ಮಿದಳು. ಅಕ್ಕ ಚೆನ್ನಬಸವಣ್ಣ, ಸಿದ್ಧರಾಮರ ಪ್ರಶ್ನೆಗಳಿಗೆ ಉತ್ತರಿಸಿ ಅವರನ್ನೇ ಬೆರಗುಗೊಳಿಸಿದಳು.
    ಅಲ್ಲಮ ಪ್ರಭುಗಳು ಸಾಕಷ್ಟು ಪ್ರಶ್ನೆಗಳನ್ನ ಒಡ್ಡಿದರು. ಅಕ್ಕ ವಿಚಲಿತಳಾಗದೆ ದಿಟ್ಟ ನಿಲುವಿನಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಪರಿಶುದ್ಧ ಅಪರಂಜಿಯಾಗಿ ಬೆಳಗುತ್ತಾರೆ.

ಅಂಗ ಅಂಗನೆಯ ರೂಪವಲ್ಲದೆ,
ಮನವಸ್ತು ಭಾವದಲ್ಲಿ ಬೆಚ್ಚಂತಿರ್ಪುದು;
ಬಂದ ಕಥನದಲ್ಲಿ ಬಂದು ಹಿಂಗಿದೆಯಲ್ಲಾ ಅಕ್ಕ !
ಗುಹೇಶ್ವರ ಲಿಂಗದಲ್ಲಿ ಉಭಯನಾಮವಳಿದ ಎನ್ನಕ್ಕಾ ! –ಅಲ್ಲಮಪ್ರಭು

ಇದರ ಅರ್ಥ: ದೇಹ ಹೆಣ್ಣು ರೂಪದಿಂದಿರುವುದೇ ವಿನಾ ಹೆಣ್ಣುತನ ಆಕೆಯ ಅಂತರಂಗದಲ್ಲಿ ಇಲ್ಲವಾಗಿದೆ, ಜೀವನದ ಕೊನೆಯ ಗುರಿಯಾದ ಮುಕ್ತಿಯನ್ನು ಹೊಂದಬೇಕೆಂದು ಸಾಧನಾ ಪದವನ್ನ ಹಿಡಿದು, ಭಾವವನ್ನು ಗೆದ್ದು ಗುಹೇಶ್ವರ ಲಿಂಗದಲ್ಲಿ ನಾನು ನೀನೆಂಬ ಬೇದವಡಗಿ ಸಮರಸಳಾದ ಕಾರಣ, ನನಗೆ ಸಹ “ಅಕ್ಕ” ಆದರೆಂದು ಪ್ರಭುದೇವರು ಅಕ್ಕ ಮಹಾದೆವಿಯವನ್ನ ಹೊಗಳುತ್ತಾರೆ. ಯಾವಾಗ ಸ್ವತಃ ಅಲ್ಲಮರೆ “ಅಕ್ಕ” ನೆಂದೇ ಕರೆದರೋ ಇವರೆಗೆ ಮಹಾದೇವಿಯಾಗಿದ್ದವರು ಇಡೀ ಜಗತ್ತಿಗೆ “ಅಕ್ಕ” ಆದರು. ಜ್ಞಾನ ವೈರಾಗ್ಯ ದಿಂದ ಅಕ್ಕ ಮಹಾದೇವಿಯಾದರು.

ಅಕ್ಕ ಮಹದೇವಿಯ ಕೆಲವು ವಚನಗಳು
“ಹರನೆ, ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಿಸಿದ್ದೆ ನೋಡಾ !
ಹಸೆಯ ಮೇಲಣಮಾತ ಬೆಸಗೊಳ್ಳ ಲಟ್ಟಿದರೆ,
ಶಶಿಧರನ ಹತ್ತಿರಕ್ಕೆ ಕಳುಹಿದರೆಮ್ಮವರು
ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿ,
ಚೆನ್ನ ಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು.”

“ಪಚ್ಚೆಯ ನೆಲಗಟ್ಟು, ಕನಕದ ತೋರಣ,
ವಜ್ರದ ಕಂಭ, ಪವಳದ ಚಪ್ಪರವನಿಕ್ಕಿ
ಮದುವೆಯ ಮಾಡಿದರು; ನಮ್ಮರೆನ್ನ ಮದುವೆಯ ಮಾಡಿದರು.
ಕಂಕಣದ ಕ್ಯೆ ದಾರ ಸ್ಥಿರಸೇಸೆಯನಿಕ್ಕಿ ಚೆನ್ನಮಲ್ಲಿಕಾರ್ಜುನನೆಂಬ
ಗಂಡಗೆನ್ನ ಮದುವೆಯ ಮಾಡಿದರು.”

“ಗುರುವೆ ತೆತ್ತಿಗನಾದ. ಲಿಂಗವೇ ಮಧುವಳಿಗನಾದ.
ನಾನೆ ಮಧುವಳಿಗೆಯಾದೆನು, ಈ ಭುವನವೆಲ್ಲವರಿಯಲು
ಅಸಂಖ್ಯಾತರೆನಗೆ ತಾಯಿ ತಂದೆಗಳು,
ಕೊಟ್ಟರು ಪ್ರಭುವಿನ ಮನೆಗೆ ಸಾದ್ರುಶ್ಯವಪ್ಪ ವರನ ನೋಡಿ.
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯಾ ಪ್ರಭುವೇ”