Home » ಮ್ಯೂಚುವಲ್ ಫಂಡ್ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಅವುಗಳ ವಿಧಗಳು ಯಾವುವು?

ಮ್ಯೂಚುವಲ್ ಫಂಡ್ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಅವುಗಳ ವಿಧಗಳು ಯಾವುವು?

by manager manager

ಹಣ ಉಳಿಸೋ ತಂತ್ರ ಯಾರಿಗೆ ಬೇಡ. ಒಂದಿಷ್ಟು ಕೂಡಿಸಿ ಭಾಗಿಸಿ ನಾವು ತಿಂಗಳ ಸಂಬಳದಲ್ಲಿ ಸ್ವಲ್ಪ ಮುರಿದು, ಭವಿಷ್ಯದ ಕನಸಿಗೋ / ನಷ್ಟಕ್ಕೊ ತೆಗೆದಿಡೋದು ಸಹಜ ಅಲ್ವಾ. ಮನೆಯ ಹೆಂಗಸರು ದಿನಸಿ ಡಬ್ಬಿಯಲ್ಲಿ ಖಾತೆ ತೆರೆದರೆ ಪುರುಷರು ಚೀಟಿ ವ್ಯವಹಾರ ಚಿಟ್ ಫಂಡ್ ಗಳಲ್ಲಿ ತೊಡಗಿಸುತ್ತಾರೆ. ಈ ಎರಡರಲ್ಲೂ ಆದಾಯಕ್ಕಿಂತ ಅಪಾಯ ಹೆಚ್ಚು. ಹೆಂಗಸರಿಟ್ಟ ಡಬ್ಬಿ ಗಂಟು ಯಾವುದೇ ಲಾಭವಿಲ್ಲದೆ ಸಾಂಸಾರಿಕ ಅಗತ್ಯಗಳಿಗೆ ಮುಗಿದರೆ, ಚೀಟಿ ಚಿಟ್ ಫಂಡ್ ಗಳಂತಹ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ ದಿವಾಳಿಯಾದವರೆ ಹೆಚ್ಚು. ಇನ್ನು ಬ್ಯಾಂಕ್ ಉಳಿತಾಯ ಖಾತೆ, ಎಫ್ ಡಿ, ಆರ್ ಡಿ ಗಳಲ್ಲಿ ಸಿಗೋ ಬಡ್ಡಿ ಕಡಿಮೆ. ಹಾಗಾದರೆ ನಮ್ಮಲ್ಲಿರುವ ಹಣ ಸುರಕ್ಷಿತವಾಗಿ ಇರಿಸಿ ಲಾಭಗಳಿಸೊ ಮಾರ್ಗ ಯಾವುದು. ಇಲ್ಲಿದೆ ಉತ್ತರ.

ಮ್ಯೂಚುವಲ್ ಫಂಡ್. ಸದ್ಯ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಸುದ್ದಿಯಲ್ಲಿರುವ ವಿಷಯ. ಇಲ್ಲಿ ಇಂತಿಷ್ಟು ಹಣ ಸುರಕ್ಷಿತವಾಗಿ ಇರಿಸಿ, ಇಂತಿಷ್ಟು ಬಡ್ಡಿ ನೀಡಿ ನಮ್ಮ ಹಣಕ್ಕೆ ಇನ್ನಷ್ಟು ಜೋಡಿಸಿ ನಾವು ಮತ್ತಷ್ಟು ಲಾಭ ಗಳಿಸೋ ಒಂದು ಪ್ಲಾಟ್ಫಾರ್ಮ್ ಇದು. ಹಾಗಾದರೆ ಈ ಮ್ಯೂಚುವಲ್ ಫಂಡ್ ಅಂದ್ರೆ ಏನು? ಅದು ಹೇಗೆ ಕೆಲಸ ಮಾಡುತ್ತೆ ? ಎಂಬ ವಿವರ ಇಲ್ಲಿದೆ ನೋಡಿ.

ಮ್ಯೂಚುವಲ್ ಫಂಡ್. ಎಂದರೇನು?
ಮೊದಲಿಗೆ ಮ್ಯೂಚುವಲ್ ಎಂದರೆ ಏನು ಎಂದು ನೋಡುವುದಾದರೆ ಒಂದು ಗುಂಪು ಒಂದು ಗುಂಪಿನ ಜನ ತಮ್ಮಲಿ ಇರುವ ಒಂದಿಷ್ಟು ಹಣವನ್ನ ಸೇರಿಸಿ ಒಂದೆಡೆ ಹೂಡಿಕೆ ಮಾಡುತ್ತಾರೆ. ಆ ಹಣವನ್ನ ಒಬ್ಬ ಫಂಡ್ ಮ್ಯಾನೇಜರ್ ಒಟ್ಟು ಮಾಡಿ, ಯಾವುದಾದರೂ ಒಂದು ಕಂಪನಿಯಲ್ಲಿ ಹೂಡಿಕೆ ಮಾಡುತ್ತಾನೆ. ಈ ಹೂಡಿಕೆಯಿಂದ ಬಂದ ಲಾಭದಲ್ಲಿ ತಾನು ಶೇ 1% ರಿಂದ 3% ವರೆಗೆ ಕಮಿಷನ್ ಇಟ್ಟುಕೊಂಡು ಬಂದ ಮಿಕ್ಕ ಲಾಭದಲ್ಲಿ ಹೂಡಿಕೆದಾರರಿಗೆ ಇಂತಿಷ್ಟು ಬಡ್ಡಿಯೊಂದಿಗೆ ಮರು ಪಾವತಿಸಲಾಗುವುದು. ಈ ಹೂಡಿಕೆ ತಂತ್ರವನ್ನೇ ಮ್ಯೂಚುವಲ್ ಫಂಡ್ ಎನ್ನುವುದು ಮತ್ತು ಇದನ್ನು ಸಾಮೂಹಿಕ ಹೂಡಿಕೆ ಎಂದು ಸಹ ಕರೆಯಬಹುದು

ಮ್ಯೂಚುವಲ್ ಫಂಡ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಒಂದಿಷ್ಟೂ ವ್ಯಕ್ತಿಗಳು ತಮ್ಮ ಸಂಬಳ ಅಥವಾ ತಮ್ಮ ಆದಾಯದಲ್ಲಿ ತಿಂಗಳಿಗೆ ಇಂತಿಷ್ಟು ಎಂಬಂತೆ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ಅ ಹೂಡಿಕೆಯ ಒಟ್ಟಾರೆ ಮೊತ್ತವನ್ನು ಫಂಡ್ ಮ್ಯಾನೇಜರ್ ಉತ್ಪಾದಕ ಕಂಪನಿಗಳು ಮೇಲೆ ಬಂಡವಾಳವಾಗಿ ಹಾಕುತ್ತಾರೆ. ಇವುಗಳ ಒಟ್ಟಾರೆ ಉತ್ಪಾದನೆಯ ಬಳಿಕ ಬಂದ ಲಾಭ ನಷ್ಟ ಎರಡರಲ್ಲೂ ಪಾಲು, ಮೂಲ ಹೂಡಿಕೆದಾರನ ಬೊಕ್ಕಸ ಸೇರುತ್ತದೆ. ಇಲ್ಲಿ ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾದ ಇನ್ನೊಂದು ವಿಷಯ ಎಂದರೆ ನಮ್ಮ ಹೂಡಿಕೆ ಹಣಕ್ಕೆ ಸಿಗುವ ಬಡ್ಡಿ, ಫಂಡ್ ಮ್ಯಾನೇಜರ್ ಉತ್ಪಾದಕ ಕಂಪನಿಗಳ ಮೇಲೆ ಹೂಡಿದ್ದ ಬಂಡವಾಳ ಮತ್ತು ಅ ಉತ್ಪಾದಕ ಅಂದಿನ ಮಾರುಕಟ್ಟೆ ಬೆಲೆಗೆ ತಕ್ಕಂತೆ ನೀಡಲಾಗುತ್ತದೆ. ನಮ್ಮಲ್ಲಿ ಹಣದುಬ್ಬರ ನಿರ್ದಿಷ್ಟವಾಗಿ ನಿಗದಿಯಲ್ಲಿ ಇಲ್ಲದ ಕಾರಣ ನಮ್ಮ ಬಂಡವಾಳಕ್ಕೆ ಸಿಗುವ ಲಾಭವು ಪ್ರತಿ ಭಾರಿಯೂ ಬದಲಾಗುತ್ತಲೇ ಇರುತ್ತದೆ. ಹಾಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಪ್ರಯೋಜನವೆಂದರೆ ಷೇರುಗಳನ್ನು ಯಾವಾಗ ಖರೀದಿಸಬೇಕು ಅಥವಾ ಮಾರಾಟ ಮಾಡಬೇಕು ಎಂದು ಯೋಚಿಸಬೇಕಾಗಿಲ್ಲ, ಏಕೆಂದರೆ ಈ ಕೆಲಸವನ್ನು ಫಂಡ್ ಮ್ಯಾನೇಜರ್ ಮಾಡುತ್ತಾನೆ

ಮ್ಯೂಚುವಲ್ ಫಂಡ್ ನ ವಿಧಗಳು
ಸ್ವತ್ತುಗಳ ವರ್ಗ ಮತ್ತು ರಚನೆಯ ಆಧಾರದ ಮೇಲೆ ನಾವು ಮ್ಯೂಚುವಲ್ ಫಂಡ್‌ಗಳನ್ನು ವಿಂಗಡಿಸಬಹುದು. ಈ ರೀತಿಯ ಮ್ಯೂಚುವಲ್ ಫಂಡ್ಗಳಲ್ಲಿ ಒಂದು ಅಥವಾ ಹೆಚ್ಚಿನ ಸ್ವತ್ತುಗಳ/ಕಂಪನಿ ಗಳ ಷೇರುಗಳ ಮೇಲೆ ಹೂಡಿಕೆ ಮಾಡಲಾಗುತ್ತದೆ. ಅಂದರೆ, ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಠೇವಣಿ ಮಾಡಿದ ಹಣವನ್ನು ಯಾವುದಾದರೂ ಒಂದು ಅಥವಾ ಹೆಚ್ಚಿನ ಸ್ಥಳಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಆಸ್ತಿ ವರ್ಗದ ಆಧಾರದ ಮೇಲೆ ನಾವು ಮ್ಯೂಚುವಲ್ ಫಂಡ್‌ಗಳನ್ನು ಹಲವಾರು ಭಾಗಗಳಾಗಿ ವಿಂಗಡಿಸಬಹುದು.

ಸಾಲ ನಿಧಿಗಳು (Debits Funds): ಇವು ಸ್ಥಿರ ಆದಾಯ ನೀಡುವ ನಿಧಿಗಳಾಗಿವೆ. ಸಾಲ ನಿಧಿಗಳು ವಾಣಿಜ್ಯ ಪತ್ರ, ಖಜಾನೆ ಬಿಲ್‌ಗಳು, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಇತರ ಅನೇಕ ಹಣ ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುತ್ತವೆ.

ಗಿಲ್ಟ್ ಫಂಡ್ (Gilt Fund): ಇವು ತಮ್ಮ ಹಣವನ್ನು ಸರ್ಕಾರಿ ಭದ್ರತೆಗಳಲ್ಲಿ ಮಾತ್ರ ಹೂಡಿಕೆ ಮಾಡುತ್ತವೆ. ಸರ್ಕಾರಕ್ಕೆ ಹಣ ನೀಡುವುದರಿಂದ, ಈ ರೀತಿಯ ಸಾಲ ನಿಧಿಯಲ್ಲಿ ಯಾವುದೇ ರಿಸ್ಕ್‌ ಇರುವುದಿಲ್ಲ ಮತ್ತು ಇಲ್ಲಿ ಸರ್ಕಾರಿ ಸೇವೆಗಳಲ್ಲಿ ಹೂಡಿಕೆ ಯಾಗಿ ಹಣ ಸಲ್ಲಿಸುರುವುದರಿಂದ ನಮ್ಮ ಹಣಕ್ಕೆ ಭದ್ರತೆ ಮತ್ತು ಸುರಕ್ಷೆ ಎರಡು ಇರುತ್ತದೆ.

ಲಿಕ್ವಿಡ್‌ ಫಂಡ್‌ (Liquid Funds) : ಇಲ್ಲಿ ಹೂಡಿಕೆಯಾದ ಹಣದ ಮರು ಪಾವತಿಗಾಗಿ ಅರ್ಜಿ ಸಲ್ಲಿಸಿದ 24 ಗಂಟೆಗಳ ಒಳಗೆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇವು ಸಾಲ ನಿಧಿ ವಿಭಾಗದಲ್ಲಿ ಕಡಿಮೆ ಆದಾಯ ನೀಡುತ್ತವೆ ಆದರೆ ಹೆಚ್ಚು ಸುರಕ್ಷಿತವಾಗಿರುತ್ತವೆ.
ಬೇಕಾದರೆ ನೀವು ಕನಿಷ್ಟ 3 ದಿನಗಳ ಅವಧಿಗೆ ಲಿಕ್ವಿಡ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಗರಿಷ್ಟ 91 ದಿನಗಳವರೆಗೆ ಈ ಫಂಡ್ ನ ಸೆಕ್ಯುರಿಟಿಗಳು ಮುಕ್ತಾಯವನ್ನು ಹೊಂದಿರುತ್ತವೆ. ಇವು ಧೀರ್ಘ ಕಾಲಿಕಾ ಹೂಡಿಕೆ ಅಲ್ಲ ಮತ್ತು ಲಿಕ್ವಿಡ್ ಫಂಡ್‌ಗಳು ಉಳಿತಾಯ ಖಾತೆಗಳು ಮತ್ತು ಬ್ಯಾಂಕ್ ಎಫ್‌ಡಿಗಳಿಗೆ ಉತ್ತಮ ಬದಲಿ ಪರ್ಯಾಯವಾಗಿದೆ.

ಈಕ್ವಿಟಿ ಫಂಡ್‌ಗಳು (Equity Funds) : ಮ್ಯೂಚುವಲ್ ಫಂಡ್‌ಗಳಲ್ಲಿ ಅತ್ಯಂತ ಜನಪ್ರಿಯ ನಿಧಿ ಇದು. ಇದು ಷೇರು ಮಾರುಕಟ್ಟೆ ಆಧಾರಿತ ಹೂಡಿಕೆ ಆಗಿರುವುದರಿಂದ ಇಲ್ಲಿ ರಿಸ್ಕ್‌ ಹೆಚ್ಚು ಮತ್ತು ಆದಾಯವು ಹೆಚ್ಚು. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ, ಫಂಡ್ ಮ್ಯಾನೇಜರ್ ಸಂಪೂರ್ಣ ಹೂಡಿಕೆಯನ್ನು ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸುತ್ತಾರೆ. ಈ ಪರಿಯ ಫಂಡ್ ಗಳನ್ನು ಲಾರ್ಜ್‌ ಕ್ಯಾಪ್‌ (ಬೃಹತ್‌ ಬಂಡವಾಳ), ಮಿಡ್‌ ಕ್ಯಾಪ್‌ (ಮಧ್ಯಮ ಬಂಡವಾಳ), ಮಲ್ಟಿಕ್ಯಾಪ್‌ (ಬಹು ಬಂಡವಾಳ) ಮತ್ತು ಸ್ಮಾಲ್‌ ಕ್ಯಾಪ್‌ (ಸಣ್ಣ ಬಂಡವಾಳ) ನಿಧಿಗಳಾಗಿ ವಿಂಗಡಿಸಲಾಗಿದೆ.

ಲಾರ್ಜ್‌ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ವಿಸ್ತಾರವಾದ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುತ್ತವೆ. ಹಾಗಾಗಿ ಇಲ್ಲಿ ರಿಟರ್ನ್ಸ್ ಕಡಿಮೆ ಆದರೆ, ರಿಟರ್ನ್ಸ್ ಸ್ಥಿರವಾಗಿರುತ್ತದೆ. ಸಣ್ಣ ಮತ್ತು ಮಿಡ್‌ಕ್ಯಾಪ್ ಫಂಡ್‌ಗಳಿಗಿಂತ ಲಾರ್ಜ್‌ ಕ್ಯಾಪ್ ಫಂಡ್‌ಗಳು ಕಡಿಮೆ ರಿಸ್ಕ್‌ ಹೊಂದಿರುತ್ತವೆ. ಮಿಡ್ ಕ್ಯಾಪ್ ಕಂಪನಿಯು ಮಧ್ಯಮ ಬಂಡವಾಳ ಹೊಂದಿರುವ ಕಂಪನಿಯಾಗಿದೆ.

ಇನ್ನೂ ಸ್ಮಾಲ್‌ ಕ್ಯಾಪ್‌ ಕಂಪನಿಗಳು ಮಾರುಕಟ್ಟೆಯಲ್ಲಿ ಹೊಸ ವ್ಯವಹಾರ ಆರಂಭಿಸಿವೆ. ಇವುಗಳಲ್ಲಿ ಆದಾಯ ಉತ್ತಮವಾಗಿದೆ. ಆದರೆ ಅದಕ್ಕೆ ತಕ್ಕಂತೆ ರಿಸ್ಕ್‌ ಕೂಡ ಹೆಚ್ಚು. ಹಾಗೇ ಮಲ್ಟಿಕ್ಯಾಪ್‌, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಈ ವರ್ಗವು ಬಹಳ ಜನಪ್ರಿಯವಾಗಿದೆ. ಈ ನಿಧಿಯು ಲಾರ್ಜ್‌ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಸ್ಥಿರ ಅನುಪಾತದಲ್ಲಿ ಹೂಡಿಕೆ ಮಾಡುತ್ತದೆ.
ಇವುಗಳ ಹೊರತಾಗಿ, ಫ್ಲೆಕ್ಸಿ ಕ್ಯಾಪ್ ಫಂಡ್‌ಗಳು (Flexi Cap Funds), ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ಗಳು (ELSS) ಮತ್ತು ಹೈಬ್ರಿಡ್ ಫಂಡ್‌ಗಳು (Hybrid Funds) ಇತ್ಯಾದಿ ಮ್ಯೂಚುವಲ್‌ ಫಂಡ್‌ಗಳಾಗಿವೆ.