Home » ಸತ್ಯ ನುಡಿಯುವುದರಿಂದಲೇ ಜೀವನದಲ್ಲಿ ಸೋತು, ಗೆದ್ದ ಸತ್ಯ ಹರಿಶ್ಚಂದ್ರನ ಕತೆ ನಿಮಗೆ ಗೊತ್ತೇ?

ಸತ್ಯ ನುಡಿಯುವುದರಿಂದಲೇ ಜೀವನದಲ್ಲಿ ಸೋತು, ಗೆದ್ದ ಸತ್ಯ ಹರಿಶ್ಚಂದ್ರನ ಕತೆ ನಿಮಗೆ ಗೊತ್ತೇ?

by manager manager

ಈಗಿನ ಕಾಲದಲ್ಲಿ ಸತ್ಯವನ್ನು ನುಡಿಯುವುದು ಬಹಳ ಕಷ್ಟ ನಾವು ಸಮಯಕ್ಕೆ ಅನುಸಾರವಾಗಿ ಕೆಲವು ಸುಳ್ಳುಗಳನ್ನು ಹೇಳುತ್ತ ಇರುತ್ತೇವೆ. ಆದರೆ ಎಷ್ಟೇ ಕಷ್ಟ ಬಂದರು ಸುಳ್ಳನ್ನು, ಮೋಸವನ್ನು ಮಾಡದೇ ಸತ್ಯವನ್ನೇ ಹೇಳಿ ಬದುಕುತ್ತ, ಎಷ್ಟೆ ತೊಂದರೆಗಳು ಬಂದರು ಅದನ್ನು ಮೆಟ್ಟಿ ನಿಂತು ಸತ್ಯವನ್ನೇ ನುಡಿಯುತ್ತ ಅದರಿಂದಲೇ ಜೀವನದಲ್ಲಿ ಸೋತು ಗೆದ್ದ, ಸತ್ಯ ಹರಿಶ್ಚಂದ್ರನ ಕತೆಯನ್ನು ಕೇಳಿ ನಮ್ಮ ಜೀವನದಲ್ಲಿ ಸ್ವಲ್ಪವಾದರೂ ಅವನ ಆದರ್ಶಗಳನ್ನು ಅಳವಡಿಸಿಕೊಂಡರೇ ತುಂಬ ಒಳ್ಳೆಯ ಕೆಲಸಗಳಾಗುತ್ತವೆ ಎಂಬ ಕಾರಣಕ್ಕೆ ಈ ಲೇಖನ.
ಇಕ್ಷ್ವಾಕು ವಂಶದ ದೊರೆ ರಾಜ ಹರಿಶ್ಚಂದ್ರ ಸತ್ಯಪಾಲನೆಗಾಗಿ ಹೆಸರಾದವನು. ತಂದೆ ಸೂರ್ಯ ವಂಶದ ದೊರೆ ತ್ರಿಶಂಕು, ತಾಯಿ ಸತ್ಯವ್ರತೆಯ ಮಗ ಮುಂದೆ ಸತ್ಯ ಹರಿಶ್ಚಂದ್ರನೆಂದು ಪ್ರಸಿದ್ಧಿ ಪಡೆದನು. ಅಯೋಧ್ಯಾ ಪಟ್ಟಣದಲ್ಲಿ ಹರಿಶ್ಚಂದ್ರನೆಂಬ ಮಹಾರಾಜ ಇದ್ದನು. ಇವನು ದೈವಭಕ್ತ, ಸತ್ಯವಂತ. ಹರಿಶ್ಚಂದ್ರನಿಗೆ ಚಂದ್ರಮತಿಯೆಂಬ ರಾಣಿಯೂ ಲೋಹಿತಾಶ್ವನೆಂಬ ಮಗನೂ ಇದ್ದರು.

ಒಂದು ಕತೆಯ ಪ್ರಕಾರ ಒಂದು ದಿನ ಹರಿಶ್ಚಂದ್ರ ಭೇಟೆಯಾಡಲು ಕಾಡಿಗೆ ಹೋಗಿದ್ದ. ಆ ಸಮಯದಲ್ಲಿ ಮಹಿಳೆಯ ಅಳುವಿನ ಶಬ್ಧವು ಕೇಳಿಸಿತು. ಅವನು ಅದೇ ಶಬ್ಧವನ್ನು ಹಿಂಬಾಲಿಸಿ ಹುಡುಕಿಕೂಂಡು ಹೋದಾಗ ಅಲ್ಲಿ ವಿಶ್ವಾಮಿತ್ರನ ಆಶ್ರಮ ಸೇರಿದ. ಆ ಸಮಯದಲ್ಲಿ ವಿಶ್ವಾಮಿತ್ರನ ತಪಸ್ಸು ಬಂಗವಾಯ್ತು. ವಿಶ್ವಾಮಿತ್ರ ಕೋಪಗೊಂಡ ತಕ್ಷಣ ಹರಿಶ್ಚಂದ್ರ ಅವನನ್ನು ಸಮಾಧಾನ ಮಾಡಲು ತನ್ನ ರಾಜ್ಯವನು ಬಿಟ್ಟುಕೊಡಲು ಸತ್ಯ ಮಾಡಿದ. ಆದರೆ ರಾಜ್ಯದ ಜೊತೆಗೆ ದಕ್ಷಿಣೆ ಕೊಡಲು ಕೇಳಿದ, ಅದಕ್ಕೆ ಹರಿಶ್ಚಂದ್ರ ಒಪ್ಪಿದ. ಆದರೆ ಎಲ್ಲಾ ಕಳೆದು ಕೊಂಡಿರುವ ಕಾರಣ ಅವನ ಹತ್ತಿರ ದಕ್ಷಿಣೆಯಾಗಿ ಕೊಡುವುದಕ್ಕೆ ಏನು ಇರುವುದಿಲ್ಲ.

ಇನ್ನೊಂದು ಕತೆಯ ಪ್ರಕಾರ ಒಂದು ದಿನ ವಸಿಷ್ಠ ಹಾಗೂ ವಿಶ್ವಾಮಿತ್ರರೆಂಬ ಮುನಿಗಳಿಗೆ ವಾದ ಹತ್ತಿತು. ‘ಭೂಲೋಕದಲ್ಲಿ ಸತ್ಯವನ್ನು ಪಾಲಿಸುವ ರಾಜರೇ ಇಲ್ಲ’ ಎಂದರು ವಿಶ್ವಾಮಿತ್ರ. ಅದಕ್ಕೆ ವಸಿಷ್ಠರು ‘ಹರಿಶ್ಚಂದ್ರ ತನ್ನ ಸರ್ವಸ್ವ ಹೋದರೂ ಸತ್ಯ ಬಿಡುವುದಿಲ್ಲ’ ಎಂದು ವಾದಿಸಿದರು. ‘ಅದನ್ನು ಪರೀಕ್ಷಿಸುತ್ತೇನೆ’ ಎಂದು ವಿಶ್ವಾಮಿತ್ರ ಅಯೋಧ್ಯೆಯ ಬಳಿಯ ತಪೋವನವನ್ನು ಹೊಕ್ಕರು. ಅಲ್ಲಿ ಮಾತಂಗಿಯರೆಂಬ ಚಂಡಾಲಕನ್ಯೆಯರನ್ನು ಸೃಷ್ಟಿಸಿ, ಕಾಡಿಗೆ ಬಂದ ಹರಿಶ್ಚಂದ್ರನ ಮುಂದೆ ಅವರು ನರ್ತಿಸುವಂತೆ ಮಾಡಿದ. ನಾಟ್ಯಕ್ಕೆ ಮೆಚ್ಚಿ: ‘ನಿಮಗೇನು ಬೇಕು ಕೇಳಿ. ಕೊಡುತ್ತೇನೆ ಎಂದ ಹರಿಶ್ಚಂದ್ರ. ‘ನೀನು ನಮ್ಮನ್ನು ಮದುವೆಯಾಗಬೇಕು’ ಎಂದರು ಮಾತಂಗಿ ಕನ್ಯೆಯರು. ಏಕಪತ್ನೀವ್ರತಸ್ಥನಾದ ಹರಿಶ್ಚಂದ್ರ ಅದಕ್ಕೊಪ್ಪಲಿಲ್ಲ. ಆಗ ಅಲ್ಲಿಗೆ ಬಂದ ವಿಶ್ವಾಮಿತ್ರ: ‘ನೀನು ಮಾತಿಗೆ ತಪ್ಪುವ ಹಾಗಿಲ್ಲ. ಆ ಕನ್ಯೆಯರನ್ನು ಮದುವೆ ಆಗದಿದ್ದರೆ, ಒಂಟೆಯ ಮೇಲೆ ನಿಂತು ನಾಣ್ಯವೊಂದನ್ನು ಎಸೆದರೆ ಅದು ಎಷ್ಟು ದೂರ ಹೋಗುವುದೋ ಅಷ್ಟು ಹಣವನ್ನು ಕೊಡಬೇಕು. ಕೊಡುತ್ತೀಯಾ?’ ಎಂದು ಕೇಳಿದ. ಸತ್ಯವಂತ ಹರಿಶ್ಚಂದ್ರ ಅದಕ್ಕೆ ಒಪ್ಪಿದ. ತನ್ನ ರಾಜ್ಯವನ್ನೆಲ್ಲಾ ವಿಶ್ವಾಮಿತ್ರನಿಗೆ ದಾನ ಮಾಡಿದ. ಆದರೂ ಹಣ ಸಾಲಲಿಲ್ಲ. ‘ನಲವತ್ತೆಂಟು ದಿನಗಳಲ್ಲಿ ಅದನ್ನು ಸಂಪಾದಿಸಿ ಕೊಡುತ್ತೇನೆ’ ಎಂದು ಪತ್ನಿ ಪುತ್ರರೊಡನೆ ಕಾಶಿಗೆ ಹೊರಟ. ಹರಿಶ್ಚಂದ್ರನಿಂದ ಹಣ ವಸೂಲಿ ಮಾಡಿಕೊಂಡು ಬರಲು ನಕ್ಷತ್ರಿಕನೆಂಬುವವನನ್ನು ಅವನ ಜೊತೆಗೆ ವಿಶ್ವಾಮಿತ್ರ ಕಳುಹಿಸಿದರು.

ರಾಜವಂಶದಲ್ಲಿ ಹುಟ್ಟಿದ ಹರಿಶ್ಚಂದ್ರ, ಚಂದ್ರಮತಿ ದಾರಿಯಲ್ಲಿ ಪಡಬಾರದ ಕಷ್ಟಗಳನ್ನು ಅನುಭವಿಸಿದರು. ಕಾಶಿ ಪಟ್ಟಣ ತಲುಪಿದೊಡನೆ ಹರಿಶ್ಚಂದ್ರ ‘ನನ್ನ ಹೆಂಡತಿ ಮಕ್ಕಳನ್ನು ಯಾರಾದರೂ ಖರೀದಿಸಿ ಹಣಕೊಡಿ’ ಎಂದು ಪೇಟೆಯಲ್ಲಿ ನಿಂತು ಕೂಗಿದ. ಬ್ರಾಹ್ಮಣನೊಬ್ಬ ಚಂದ್ರಮತಿಯನ್ನೂ ಲೋಹಿತಾಶ್ವನನ್ನೂ ಖರೀದಿಸಿದರು. ಅನಂತರ ಹರಿಶ್ಚಂದ್ರ ತನ್ನನ್ನು ಸ್ಮಶಾನದ ಒಡೆಯನಾದ ವೀರಬಾಹುವಿಗೆ ಮಾರಿಕೊಂಡು ಹಣವನ್ನು ನಕ್ಷತ್ರಿಕನಿಗೆ ಕೊಟ್ಟ. ಇತ್ತ ಚಂದ್ರಮತಿ ಬ್ರಾಹ್ಮಣನ ಮನೆಯಲ್ಲಿ ಕೂಲಿಯಾಗಿ ದುಡಿದಳು. ಒಂದು ದಿನ ಲೋಹಿತಾಶ್ವ ಬ್ರಾಹ್ಮಣನ ಮಕ್ಕಳೊಂದಿಗೆ ಪೂಜೆಗೆ ಹೂವು ತರಲು ಹೊರಟು ‘ಅಮ್ಮ, ಬೇಗ ಬರುತ್ತೇನೆ’ ಎಂದು ಹೇಳಿ ಹೋದ. ಆದರೆ ಕಾಡಿನಲ್ಲಿ ಸರ್ಪ ಕಚ್ಚಿ ಲೋಹಿತಾಶ್ವ ಮರಣ ಹೊಂದಿದ. ಅವನ ಸ್ನೇಹಿತರು ಓಡಿ ಬಂದು ಚಂದ್ರಮತಿಗೆ ವಿಷಯ ತಿಳಿಸಿದರು. ಆ ತಾಯಿ ಅಳುತ್ತಾ ಸತ್ತ ಮಗನನ್ನು ಎತ್ತಿಕೊಂಡು ಸ್ಮಶಾನಕ್ಕೆ ಹೋದಳು. ಅಲ್ಲಿ ಹರಿಶ್ಚಂದ್ರ ಕಾವಲುಗಾರನಾಗಿದ್ದ. ಅವನಿಗೆ ಚಂದ್ರಮತಿಯ ಗುರುತು ಸಿಗಲಿಲ್ಲ. ‘ಮಗುವಿನ ಅಂತ್ಯಕ್ರಿಯೆ ಮಾಡಬೇಕಾದರೆ ಹಣ ಕೊಡಬೇಕು’ ಎಂದ ಹರಿಶ್ಚಂದ್ರ. ‘ನಾನು ಇನ್ನೊಬ್ಬರ ಮನೆಯಲ್ಲಿ ಕೂಲಿ ಮಾಡುವವಳು ನನ್ನ ಹತ್ತಿರ ಹಣವೆಲ್ಲಿದೆಯಪ್ಪ? ದಯಮಾಡಿ ಮಗುವಿನ ಅಂತ್ಯಕ್ರಿಯೆ ಮಾಡಲು ಬಿಡು’ ಎಂದು ಬೇಡಿಕೊಂಡಳು ಚಂದ್ರಮತಿ. ಹರಿಶ್ಚಂದ್ರ ಒಪ್ಪಲಿಲ್ಲ. ಆಗ ಚಂದ್ರಮತಿ, ‘ಲೋಹಿತಾಶ್ವ, ಚಕ್ರವರ್ತಿ ಹರಿಶ್ಚಂದ್ರನ ಮಗನಾಗಿ ಹುಟ್ಟಿ ನಿನಗೆ ಈ ಗತಿ ಬಂದಿತಲ್ಲ ಎಂದು ಅಳತೊಡಗಿದಳು. ಆಗ ಹರಿಶ್ಚಂದ್ರನಿಗೆ ಹೆಂಡತಿಯ ಮತ್ತು ಮಗನ ಗುರುತು ಸಿಕ್ಕಿತು. ಅದರೆ ಅವನು ಕರ್ತವ್ಯದಿಂದ ವಿಮುಖನಾಗುವ ಆಗಿರಲಿಲ್ಲ. ಚಂದ್ರಮತಿ ಬ್ರಾಹ್ಮಣನಲ್ಲಿ ಹಣ ಬೇಡಿ ತರುವೆನೆಂದು ಹೊರಟಳು. ದಾರಿಯಲ್ಲಿ ಕಾಶೀರಾಜನ ಮಗು ಸತ್ತಂತೆ ಬಿದ್ದಿತ್ತು. ಚಂದ್ರಮತಿ ಅದಕ್ಕೆ ಉಪಚಾರ ಮಾಡುತ್ತಿದ್ದಾಗ ರಾಜದೂತರು ಬಂದು ‘ನೀನು ರಾಜನ ಮಗನನ್ನು ಕೊಲೆ ಮಾಡಿದ್ದೀಯ ಎಂದು ರಾಜನಲ್ಲಿಗೆ ಕರೆದೊಯ್ದರು. ‘ಇವಳ ತಲೆ ಕತ್ತರಿಸಿ ಹಾಕಿ’ ಎಂದು ರಾಜ ಆಜ್ಞಾಪಿಸಿದ. ರಾಜದೂತರು ಅವಳನ್ನು ಸ್ಮಶಾನಕ್ಕೆ ಕರೆತಂದು ಹರಿಶ್ಚಂದ್ರನಿಗೆ ಅವಳ ತಲೆ ಕಡಿಯುವಂತೆ ಹೇಳಿದರು. ‘ಜನ್ಮ ಜನ್ಮಾಂತರಗಳಲ್ಲೂ ಹರಿಶ್ಚಂದ್ರನೇ ಪತಿ ಆಗಲಿ’ ಎಂದು ಚಂದ್ರಮತಿ ತಲೆಬಾಗಿದಳು.

ಇನ್ನೇನು ಹರಿಶ್ಚಂದ್ರ ಕೊಡಲಿಯಿಂದ ಅವಳ ಕತ್ತಿಗೆ ಹೊಡೆಯಬೇಕು, ಆಗ ವಿಶ್ವಾಮಿತ್ರ ಅವನ ಕೈ ಹಿಡಿದು ತಡೆದು ‘ನಿಲ್ಲು ನಿಲ್ಲು, ಹರಿಶ್ಚಂದ್ರ’ ಎಂದು ಕೂಗಿದ. ಆಗ ಕಾಶೀರಾಜನ ಕುವರ ಮೇಲೆದ್ದ. ‘ಅಮ್ಮ, ಎಲ್ಲಿರುವೆ?’ ಎನ್ನುತ್ತಾ ಲೋಹಿತಾಶ್ವನೂ ಮೇಲೆದ್ದ. ಚಂದ್ರಮತಿ ಮಗನನ್ನು ಅಪ್ಪಿಕೊಂಡಳು. ಆಗ ಸ್ವರ್ಗದಿಂದ ದೇವೇಂದ್ರ, ನಾರದ, ವಸಿಷ್ಠರು ಭೂಮಿಗಿಳಿದು ಬಂದರು. ಹರಿಶ್ಚಂದ್ರ ಎಲ್ಲರಿಗೂ ನಮಿಸಿದ. ದೇವೇಂದ್ರ ‘ನಿನ್ನ ಪಂದ್ಯವೇನಾಯ್ತು ವಿಶ್ವಾಮಿತ್ರ?’ ಎಂದು ಕೇಳಿದ. ವಿಶ್ವಾಮಿತ್ರ ‘ನಾನು ಸೋತೆ ದೇವೇಂದ್ರ. ಹರಿಶ್ಚಂದ್ರನಿಗೆ ಅವನ ರಾಜ್ಯವನ್ನು ಮಾತ್ರವಲ್ಲದೆ ನನ್ನ ತಪಸ್ಸಿನ ಫಲವನ್ನೂ ಕೊಡುತ್ತೇನೆ’ ಎಂದ. ಮುಂದೆ ಹರಿಶ್ಚಂದ್ರನು ಪತ್ನಿ-ಪುತ್ರರ ಸಮೇತನಾಗಿ ಅಯೋಧ್ಯಾ ನಗರಕ್ಕೆ ತೆರಳಿ ಬಹುಕಾಲ ಸುಖದಿಂದ ರಾಜ್ಯಭಾರ ಮಾಡಿದ.
ಇಷ್ಟೆಲ್ಲ ಘಟನೆಯಲ್ಲಿ ಹರಿಶ್ಚಂದ್ರನನ್ನು ಎಷ್ಟೇಲ್ಲ ನೋವನ್ನು, ಕಷ್ಟಗಳನ್ನು ಅನುಭವಿಸಿದರು ತನ್ನ ಕರ್ತವ್ಯ ಪಾಲನೆ, ಮತ್ತು ಸತ್ಯನಿಷ್ಠತೆಯನ್ನು ಬಿಡಲಿಲ್ಲ, ಅದಕ್ಕೆ ಅನುಗುಣವಾಗಿ ಅವನ ಹೆಂಡತಿ ಮತ್ತು ಪುತ್ರನು ಕೂಡ. ಪತಿ ನಿಷ್ಠತೆ ಮತ್ತು ತಂದೆಯ ವಾಕ್ಯ ಪರಿಪಾಲನೆಯನ್ನು ಮಾಡಿದ ಚಂದ್ರಮತಿ ಮತ್ತು ಲೋಹಿತಾಶ್ವನು ಕೂಡ ಇಲ್ಲಿ ತಂದೆಯಷ್ಟೇ ಸತ್ಯದ ಪರಿಪಾಲನೆಯಲ್ಲಿ ತೊಡಗಿ ಇಡೀ ಭೂಮಂಡಲಕ್ಕೆ ಸತ್ಯದ ದರ್ಶನವನ್ನು ಮಾಡಿಸಿದರು.