Home » First Amendment Act 1951: ಭಾರತ ಸಂವಿಧಾನದ ಮೊದಲ ತಿದ್ದುಪಡಿಯ ರೋಚಕ ಸ್ಟೋರಿ

First Amendment Act 1951: ಭಾರತ ಸಂವಿಧಾನದ ಮೊದಲ ತಿದ್ದುಪಡಿಯ ರೋಚಕ ಸ್ಟೋರಿ

by manager manager

ಭಾರತ ಸಂವಿಧಾನ: ಪ್ರಪಂಚದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ. 395 ವಿಧಿಗಳು, 22 ಭಾಗಗಳ ಮತ್ತು 12 ಶೆಡ್ಯೂಲ್ ಗಳ ಮಹಾಪೂರ. ಭಿಕ್ಷುಕನಿಂದ ಧನಿಕನವರೆಗೂ ಒಂದೇ ವಿಧದ ನ್ಯಾಯ ನೀಡಿ, ಸರ್ವಧರ್ಮ ಸಮನ್ವಯತೆಯನ್ನು ಸಾರುವ ಗ್ರಂಥವಿದು. ನಮ್ಮ ಸಂವಿಧಾನ ಭಾರತೀಯ ಪ್ರತಿ ನಾಗರಿಕರಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹಬಾಳ್ವೆಯನ್ನು ಬೋಧಿಸುವುದಲ್ಲದೆ, ಆಯಾ ಕಾಲಕ್ಕೆ ತಕ್ಕಂತೆ ಆಯಾ ಕಾನೂನು ವಿಷಯವಾಗಿ ಪ್ರಶ್ನೆ ಉದ್ಭವಿಸಿದಾಗ ಅಗತ್ಯನ್ವಯ ತಿದ್ದುಪಡಿ ಮಾಡುವ ಅವಕಾಶವನ್ನು ನೀಡಿದೆ. ಅದರನ್ವಯ ಇದುವರೆಗೂ 105 ತಿದ್ದುಪಡಿಗಳಾಗಿವೆ. ಆದರೆ ಸಂವಿಧಾನ ಮೊದಲು ತಿದ್ದುಪಡಿಯಾಗಿದ್ದು ಯಾವಾಗ ಮತ್ತು ಯಾಕೆ ಎಂಬ ಮಾಹಿತಿ ನಿಮಗೆ ತಿಳಿದಿದೆಯೇ? ಇಲ್ಲ ಅಂದ್ರೆ ಅ ಐತಿಹಾಸಿಕ ಘಟನೆಯ ಕುರಿತ ಸಂಗತಿಗಳು ಇಲ್ಲಿವೆ ನೋಡಿ.

1950 ಜನವರಿ 26 ಸಂವಿಧಾನ ಜಾರಿಗೊಂಡ ದಿನ. ಜಾರಿಗೊಂಡ ಹದಿನಾರು ತಿಂಗಳಲ್ಲಿ ಸಂವಿಧಾನಕ್ಕೆ ಮತ್ತೊಂದಿಷ್ಟು ಹೊಸ ರೂಪುರೇಷೆ ನೀಡಿ ಅದರ ಘನತೆಗೆ ಚ್ಯುತಿ ಬಾರದ ರೀತಿ ನಿಯಮಗಳನ್ನ ರೂಪಿಸಲಾಯಿತು. ಅದುವೇ ಜವಾಹರ್ ಲಾಲ್ ನೆಹರುರವರು ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ಜಾರಿಯಾದ “Constitution Act of 1951”. ಹೌದು ಇದು ಸಂವಿಧಾನಕ್ಕೆ ನೀಡಿದ ಮೊದಲ ತಿದ್ದುಪಡಿ. ಸಂವಿಧಾನ ಅನುಷ್ಠಾನಗೊಂಡು ವರ್ಷ ಕಳೆಯುವಷ್ಟರಲ್ಲಿ ಭಾರತೀಯ ಪ್ರಜೆಗೆ ಸಿಗುತ್ತಿದ್ದ ಮೂಲಭೂತ ಹಕ್ಕುಗಳ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಶ್ನೆಗಳು ಏಳುತ್ತಿದ್ದ ಸಮಯವದು. ಆ ಸಮಯದಲ್ಲಿ ಅಂದಿನ ಪ್ರಧಾನಿ ನೆಹರು ಸಂವಿಧಾನದ ಮೊದಲ ತಿದ್ದುಪಡಿಯ ಅಂಕಿತಕ್ಕೆ ಎಲ್ಲ ಸಿದ್ಧತೆ ನಡೆಸಿ ಮೇ 10, 1951 ರಂದು ಸದನದಲ್ಲಿ ಮಸೂದೆ ಮಂಡಿಸಿ ತಾತ್ಕಾಲಿಕ ಸಂಸತ್ತು ಏಕಸಭೆಯಲ್ಲಿ ಅದೇ ವರುಷ ಅಂದರೆ ಜೂನ್ 18 ರಂದು ತಿದ್ದುಪಡಿ ಅಂಗೀಕರಸಿ ಸಂವಿಧಾನಕ್ಕೆ ಒಂದಿಷ್ಟು ಹೊಸ ನಿಯಮಗಳನ್ನು ಸೇರ್ಪಡಿಸಿದ ದಿನಗಳವು. ಹಾಗೆ ಕಾಂಗ್ರೆಸ್ ಪಕ್ಷದ ಪ್ರಾಬಲ್ಯವಿರುವ ಮಧ್ಯಂತರ ಸರ್ಕಾರದಿಂದ ಜಾರಿಗೆ ಬಂದ ಭಾರತೀಯ ಸಂವಿಧಾನದ ಮೊದಲ ತಿದ್ದುಪಡಿ ಇದು. ವಿಶೇಷವಾಗಿ 15 ,19, 85, 87, 174, 176, 341, 342, 372, 376 ವಿಧಿಗಳ ತಿದ್ದುಪಡಿಯೊಂದಿಗೆ 31A, 31B ಮತ್ತು ಸೆಡ್ಯೂಲ್ 9 ಅನ್ನು ಸೇರ್ಪಡೆ ಮಾಡಲಾಯಿತು.

ಮೊದಲ ತಿದ್ದುಪಡಿಗೆ ಕಾರಣಗಳು ಮತ್ತು ಫಲಿತಾಂಶ
A) ಸಂವಿಧಾನ ಜಾರಿಗೊಂಡ ನಂತರದ ದಿನಗಳಲ್ಲಿ ಕ್ರಾಸ್ ರೋಡ್ಸ್ ನಿಯತಕಾಲಿಕೆ ಮದ್ರಾಸ್ ಸರ್ಕಾರ ಸೇಲಂ ಕಾರಾಗೃಹದಲ್ಲಿ ನಡೆಸಿದ್ದ ಗುಂಡಿನ ದಾಳಿಯಲ್ಲಿ 22 ಮಂದಿ ಸಮಾಜವಾದಿಗಳನ್ನು ಕೊಂದ ಕಾರಣವಾಗಿ ತೀವ್ರವಾಗಿ ಖಂಡಿಸಿ ತನ್ನ ನಿಯತಕಾಲಿಕೆಯಲ್ಲಿ ಪ್ರಕಟಿಸಿತು. ಇದಕ್ಕೆ ಉತ್ತರವಾಗಿ ಮದ್ರಾಸ್ ಸರ್ಕಾರ ನಿಯತಕಾಲಿಕೆಯ ಪ್ರಕಟಣೆಗೆ ನಿರ್ಬಂಧ ಏರಿತ್ತು. ಜೊತೆಗೆ 1950 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾದ ನಿರಾಶ್ರಿತರ ಒಳಹರಿವಿನ ಬಗ್ಗೆ ಸರ್ಕಾರವು ತೀವ್ರ ಟೀಕೆಗೆ ಒಳಗಾದಾಗ ವಾಕ್ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಅಗತ್ಯವು ಬಂದಿತು. ಹೀಗಾಗಿ ಮಾಧ್ಯಮಗಳಿಗೆ ಸೆನ್ಸಾರ್ ವಿಧಿಸಿತ್ತು. ಆದರೆ ನ್ಯಾಯಾಲಯಗಳು ಅದನ್ನು ಅಸಾಂವಿಧಾನಿಕವೆಂದು ಪರಿಗಣಿಸಿ, ಹೊಸ ಮಾರ್ಗಗಳನ್ನು ಹುಡುಕುವಂತೆ ಸರ್ಕಾರವನ್ನು ಒತ್ತಾಯಿಸಿತು. ಅದಕ್ಕೆ ಉತ್ತರವಾಗಿ ಸರ್ಕಾರ ವಿಧಿ 19(1)(a) ಅಡಿಯಲ್ಲಿ ಮೂರು ನಿರ್ಬಂಧಗಳನ್ನು ರೂಪಿಸಿ ಮಸೂದೆ ಜಾರಿ ಮಾಡಿತ್ತು. ಅವು ಸಾರ್ವಜನಿಕ ಸುವ್ಯವಸ್ಥೆ, ವಿದೇಶಿ ರಾಜ್ಯಗಳೊಂದಿಗೆ ಸ್ನೇಹ ಸಂಬಂಧಗಳ ಮತ್ತು ಅಪರಾಧಕ್ಕೆ ಪ್ರಚೋದನೆಗಳ ಮೇಲೆ ನಿರ್ಬಂಧ.

B) 1950 ರಲ್ಲಿ ಮದ್ರಾಸ್‌ನ ಕಾಲೇಜು ಪ್ರವೇಶಕ್ಕಾಗಿ 1927 ಮದ್ರಾಸ್ ಪ್ರಾಂತ್ಯ ಹೊರಡಿಸಿದ ಕೋಮು ಸರ್ಕಾರದ ಆದೇಶವನ್ನು ಆಧರಿಸಿದ ಜಾತಿ ಧರ್ಮದ ಮೇಲಿನ ಕೋಟಾ ವ್ಯವಸ್ಥೆಯನ್ನು ಚಾಲ್ತಿಯಲ್ಲಿ ಇರಿಸಿತ್ತು. ಇದನ್ನು ಪ್ರಶ್ನಿಸಿ ಮದ್ರಾಸ್ ರಾಜ್ಯ ವಿರುದ್ಧ ಚಂಪಕಂ ದೊರೈರಾಜನ್ ಮದ್ರಾಸ್ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ವಿಧಿ 226ರ ಅಡಿಯಲ್ಲಿ ದಾವೆ ಹೂಡಿದ್ದರು. ಇದರನ್ವಯ ರಾಜ್ಯವು ದುರ್ಬಲ ವರ್ಗದ ಜನರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಕಾಳಜಿಯಿಂದ ಉತ್ತೇಜಿಸಬೇಕು ಮತ್ತು ಸಾಮಾಜಿಕ ಅನ್ಯಾಯದಿಂದ ಅವರನ್ನು ರಕ್ಷಿಸಬೇಕು ಎಂದು ರಾಜ್ಯ ನೀತಿಯ ನಿರ್ದೇಶನ ತತ್ವದಂತೆ ವಿಧಿ 46 ರಲ್ಲಿ ನಿಗದಿಪಡಿಸಲಾಗಿದೆ. ಆದರೆ ಆರ್ಟಿಕಲ್ 15 ರಲ್ಲಿ ರಾಜ್ಯ ಜಾತಿ, ಜನಾಂಗ, ವರ್ಣ, ಧರ್ಮ, ಲಿಂಗ ಮತ್ತು ಹುಟ್ಟಿನ ಮೇಲೆ ತಾರತಮ್ಯ ಮಾಡಬಾರದು ಎಂಬ ನಿರ್ಣಯಕವಿದೆ. ಈ ವಿಷಯವಾಗಿ ಯಾವುದೆ ತಗಾದೆಗಳು ಉಂಟಾಗಬಾರದು ಹಾಗೂ ಯಾವುದೇ ಹಿಂದುಳಿದ ವರ್ಗದ ನಾಗರಿಕರ ಶೈಕ್ಷಣಿಕ, ಆರ್ಥಿಕ ಅಥವಾ ಸಾಮಾಜಿಕ ಪ್ರಗತಿಗಾಗಿ ರಾಜ್ಯವು ಮಾಡಬಹುದಾದ ಯಾವುದೇ ವಿಶೇಷ ನಿಬಂಧನೆಯನ್ನು ತಾರತಮ್ಯದ ಆಧಾರದ ಮೇಲೆ ಪ್ರಶ್ನಿಸದಿರುವ ಸಲುವಾಗಿ, ಆರ್ಟಿಕಲ್ 15(3) ಅನ್ನು ಸೂಕ್ತವಾಗಿ ಮೊದಲ ತಿದ್ದುಪಡಿಯಲ್ಲೇ ವರ್ಧಿಸಲಾಗಿದೆ.

C) 1950 ರ ಬಿಹಾರ ಪ್ರಾಂತ್ಯದ ಭೂ ಸುಧಾರಣೆ ಕಾಯ್ದಯ ಸೆಕ್ಷನ್ 1(3) ರ ಅಡಿಯಲ್ಲಿ ಅಲ್ಲಿನ ಪ್ರಮುಖ ಮೂರು ದೊಡ್ಡ ಜಮೀನ್ದಾರಿಗಳಿಗೆ ಸರ್ಕಾರ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಸೂಚನೆ ನೀಡಿತ್ತು. ಆದರೆ ಜಮೀನ್ದಾರ್ ಕಾಮೇಶ್ವರ್ ರವರು ಬಿಹಾರ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಧ್ವನಿ ಎತ್ತಿದರು. ಇದರ ಫಲವಾಗಿ ಆರ್ಟಿಕಲ್ 31A ಮತ್ತು 31B ಗಳನ್ನು ರೂಪಿಸಲಾಯಿತು. 31A ಸರ್ಕಾರಕ್ಕೆ ಒಬ್ಬ ವ್ಯಕ್ತಿಯ ಸ್ವತ್ತು/ ಭೂಮಿಯನ್ನು ಸಾರ್ವಜನಿಕ ಹಿತಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲು ಹಕ್ಕನ್ನು ನೀಡಿದರೆ 31B ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೆಲವು ನಿರ್ಣಯಗಳಲ್ಲಿ ನ್ಯಾಯಾಲಯದ ಮಧ್ಯಸ್ತಿಕೆಯ ಸ್ವಾತಂತ್ರ್ಯವನ್ನು ಮೊಟಕು ಗೊಳಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶೆಡ್ಯೂಲ್ 09 ಅನ್ನು ರಚಿಸಲಾಗಿದೆ. ವಿಧಿ 282 ಇದರ ಬಗ್ಗೆ ವಿವರಣೆ ನೀಡುತ್ತದೆ.

ಹಲವು ಟೀಕೆ ವಿರೋಧ ಹೋರಾಟಗಳ ಜೊತೆಗೆ. ಸ್ವಾತಂತ್ರ್ಯ ನ್ಯಾಯಾಂಗಕ್ಕೆ ಮಿತಿಯನಿಟ್ಟು. ಪರಿಪೂರ್ಣ ಸಂವಿಧಾನ ರಚನೆಗೆ ಪಣ ತೊಟ್ಟ ನೆಹರುರವರ ನೇತೃತ್ವದ ಸರ್ಕಾರ ಮೊದಲ ಚುನಾವಣೆಗೂ ಮುನ್ನ ಸಂವಿಧಾನದ ತಿದ್ದುಪಡಿಗೆ ಅಂಕಿತ ಹಾಕಿದ್ದು ನಿಜಕ್ಕೂ ರೋಚಕ.

You may also like