Home » ಪ್ರಕೃತಿ ಎಂಬ ಸ್ವರ್ಗ ಬಿಳಿಗಿರಿ ರಂಗನ ಬೆಟ್ಟ: ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಕೃತಿ ಎಂಬ ಸ್ವರ್ಗ ಬಿಳಿಗಿರಿ ರಂಗನ ಬೆಟ್ಟ: ಸಂಪೂರ್ಣ ಮಾಹಿತಿ ಇಲ್ಲಿದೆ

by manager manager

BR Hills – ಮೈಸೂರಿನಿಂದ 82 ಕಿ.ಮೀ. ಬೈಕ್‌ನಲ್ಲಿ ಹೋದರೆ 1-45 ಗಂಟೆಯಿಂದ 2-15 ಗಂಟೆ ಒಳಗೆ ತಲುಪಬಹುದು. ಬೆಟ್ಟಕ್ಕೆ ಹತ್ತಿರವಾಗುತ್ತಿದ್ದಂತೆ 10 ಕಿ.ಮೀ ನಷ್ಟು ದೂರವನ್ನು ಕಾಡಿನ ಒಳಗೆ ಗಾಡ್‌ಸೆಕ್ಷನ್‌ಗಳಲ್ಲಿ ಸಾಗಬೇಕಾಗುತ್ತದೆ. ಅಲ್ಲಿ ಗಾಡ್‌ಸೆಕ್ಷನ್‌ ತಿರುವುಗಳು ಇವೆ ವೇಗವಾಗಿ ಹೋದರೆ ಅಪಾಯ ಎಂಬ ಭಯಕ್ಕಿಂತ ಮಿಗಿಲಾಗಿ, ನಿಧಾನವಾಗಿ ಹೋದರೆ ಒಂದು ದಿನದ ಸಂಪೂರ್ಣ ಪ್ರಕೃತಿ ಚಿಕಿತ್ಸೆ ಉಚಿತವಾಗಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಲಾಭವೇ ಹೆಚ್ಚು.

ಹಚ್ಚ ಹಸಿರಿನ ನಡುವೆ ಬೈಕ್‌ನಲ್ಲಿ ಆ ತಂಪಾದ ಗಾಳಿಯನ್ನು ಸೀಳುತ್ತಹೋದಂತೆ ಬೈಕ್‌ ರೈಡಿನಲ್ಲಿ ಇರುವವರ ದೇಹದ ಬಿಸಿ ಬಹುಬೇಗ ಹಾರಿಹೋಗುತ್ತದೆ. ಪ್ರಕೃತಿಯ ಆ ಸೌಂದರ್ಯಕ್ಕೆ ಆ ಹಸಿರ ಸೊಬಗಿಗೆ ಮಾನಸಿಕ ಒತ್ತಡ ಮಾಯವಾಗುತ್ತದೆ. ಕಣ್ಣುಗಳು ಎಂದೂ ಅನುಭವಿಸಿದ ತಂಪನ್ನು ಪಡೆಯುತ್ತವೆ. ಬೆಟ್ಟ ಏರಿ ರಂಗನಾಥಸ್ವಾಮಿ ದೇವರ ಗುಡಿ ಹಿಂದೆ ಇರುವ ಕಲ್ಲು ಬಂಡೆಗಳ ಮೇಲೆ ಹೋಗಿ ಕುಳಿತು, ಜೋರಾಗಿ ಬೀಸುವ ಗಾಳಿಗೆ ವಿರುದ್ಧವಾಗಿ ಮುಖಹೊಡ್ಡಿ 10 ನಿಮಿಷ ಕಣ್ಣು ಮುಚ್ಚಿ ಧ್ಯಾನ ಮಾಡಿದರೆ ಆ ಅನುಭವವನ್ನು ಸುಲಭವಾಗಿ ಹೇಳಲು ಸಾಧ್ಯವೇ ಇಲ್ಲ.

ಕಾಡು, ಹಸಿರು, ಮರಗಿಡ ಇವೆಲ್ಲದರ ಮೌಲ್ಯ ತಿಳಿದಿರುವವರಿಗೆ, ಹಸಿರ ಸೊಬಗನ್ನು ಫೀಲ್‌ ಮಾಡುವವರಿಗೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಒಂದು ಎರಡೂ ದಿನದ ಪ್ರವಾಸ ಸಾಕಾಗುವುದೇ ಇಲ್ಲ. ಹಣ್ಣುಗಳ ಸೀಸನ್‌ನಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬಂದರಂತು ಅತೀ ಕಡಿಮೆ ಬೆಲೆಗೆ ಅಂದಿನ ದಿನವೇ ಕಿತ್ತ ಫ್ರೆಶ್ ನೇರಳೆ ಹಣ್ಣು, ಚಕ್ಕೋತ ಹಣ್ಣು, ಹಲಸಿನ ಹಣ್ಣು ಮತ್ತು ಇತರೆ ಹಣ್ಣುಗಳು ಸಿಗುತ್ತವೆ.

ಬಿಳಿಗಿರಿ ರಂಗನ ಬೆಟ್ಟದ ತಪ್ಪಲಿನಲ್ಲೇ 18 ಕಿ.ಮೀ ದೂರದಲ್ಲಿ ಇರುವ ಕೆ ಗುಡಿಯಲ್ಲಿ ಪ್ರಾಣಿಗಳನ್ನು ನೋಡಲು ಸಫಾರಿ ವ್ಯವಸ್ಥೆ ಇದೆ. ಅರಣ್ಯ ಇಲಾಖೆಯ ಜೀಪುಗಳಲ್ಲಿ 1 ಗಂಟೆ ಕಾಡಿನ ಒಳಗೆ ಸಫಾರಿ ಹೋಗಲು ಭಾರತೀಯರಿಗೆ ಮತ್ತು ವಿದೇಶಿಯರಿಗೆ ಒಬ್ಬರಿಗೆ ಒಂದೇ ಬೆಲೆ ರೂ.450. ಸಂಜೆ 6 ಗಂಟೆಗೆ ಸಫಾರಿ ಸೌಲಭ್ಯ ಕೊನೆ. BR Hills ನಿಂದ ಕೆ ಗುಡಿಗೆ ಹೋಗುವ ರಸ್ತೆಯಲ್ಲೇ ಕೆಲವೊಂದು ಕಡೆ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಆ ಸಮಯದಲ್ಲಿ ಜಾಗೃತಿಯಿಂದ ಸಂಚರಿಸಬೇಕು. ಸಂಜೆ 6 ಗಂಟೆಗೆ ಕೆ ಗುಡಿಯಲ್ಲಿರುವ ದೊಡ್ಡ ಮೈದಾನಕ್ಕೆ ಆನೆಗಳು ಬರುತ್ತವೆ. ಪ್ರವಾಸಿಗರು ನೋಡಬಹುದು. ಕೆಲವೊಮ್ಮೆ ಜಿಂಕೆಗಳು ಬರುತ್ತವೆ.

ಪ್ರವಾಸಿಗರಿಗೆ ಅತಿಥಿ ಗೃಹಗಳು

ಬಿಳಿಗಿರಿ ರಂಗನ ಬೆಟ್ಟ ಮತ್ತು ಕೆ ಗುಡಿ ಎರಡು ಕಡೆಗಳಲ್ಲೂ ಪ್ರವಾಸಿಗರು ಉಳಿದುಕೊಳ್ಳಲು ಅತಿಥಿ ಗೃಹಗಳು ಸರ್ಕಾರದ ಅಧೀನದವು ಮತ್ತು ಖಾಸಗಿ ಅತಿಥಿ ಗೃಹಗಳು ಇವೆ. ಬಿಳಿಗಿರಿ ರಂಗನ ಬೆಟ್ಟದಲ್ಲಿಯ ಸರ್ಕಾರಿ ಅಧೀನದ ಅತಿಥಿ ಗೃಹಗಳಲ್ಲಿ ಒಂದು ದಿನ ಉಳಿದುಕೊಳ್ಳಲು ರೂ.500 ಚಾರ್ಜ್‌ ಮಾಡಲಾಗುತ್ತದೆ. ಖಾಸಗಿ ಅತಿಥಿ ಗೃಹಗಳು ರೂ.1005, ರೂ.1500, ರೂ.2000 ಈ ರೀತಿ ಮೂರು ಬೆಲೆಯಲ್ಲಿ ಲಭ್ಯ.

ಬಿಳಿಗಿರಿ ರಂಗನ ಬೆಟ್ಟದಲ್ಲಿ ಮಧ್ಯಾಹ್ನದ ಪ್ರಸಾದ ಲಭ್ಯ(ಉಪಹಾರ)

ಬಿಳಿಗಿರಿ ರಂಗನ ಬೆಟ್ಟದಲ್ಲಿ ಭಕ್ತರಿಗೆ ಮಧ್ಯಾಹ್ನದ ವೇಳೆ 12-30 ಗಂಟೆಯಿಂದ 2-00 ವರೆಗೆ ಪ್ರಸಾದ ನೀಡಲಾಗುತ್ತದೆ(ಉಪಹಾರ).

ಶುದ್ಧ ಜೇನುತುಪ್ಪ ಲಭ್ಯ

ಕೆ.ಗುಡಿಯಲ್ಲಿ ಅಲ್ಲಿನ ಸ್ಥಳೀಯರು ಕಾಡಿನಲ್ಲಿ ಶೇಖರಿಸಿದ ಶುದ್ಧ ಜೇನುತುಪ್ಪ ಮತ್ತು ತಾಜಾ ನೇರಳೆ ಹಣ್ಣು ಲಭ್ಯ.

BR Hills Timings : ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ. (ಸಂಜೆ 6 ಗಂಟೆ ನಂತರ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗುವ ದಾರಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಣಿಗಳು ಮತ್ತು ಪ್ರವಾಸಿಗರ ಸುರಕ್ಷತೆ ಹಿತದೃಷ್ಟಿಯಿಂದ ಬಂದ್ ಮಾಡುತ್ತಾರೆ)

You may also like