Home » ಬಿಟ್ಟು ಬಿಡದೆ ಕಾಡಿದ “ರಹಸ್ಥ”

ಬಿಟ್ಟು ಬಿಡದೆ ಕಾಡಿದ “ರಹಸ್ಥ”

by manager manager

 – ಮೈತ್ರಿ ಜಗ್ಗಿ (ಚಲನಚಿತ್ರ ನಟ)

Rahasta

ಸಿನಿಮಾ ಎಲ್ಲರೂ ಮಾಡ್ತಾರೆ, ಆದರೆ ಕಾಡೊಂತ ಸಿನಿಮಾಗಳನ್ನ ಮಾಡೋರು ಕೆಲವರು ಮಾತ್ರ. ನಾನು ಯಾಕೆ ಈ ಮಾತು ಹೇಳ್ತಾ ಇದಿನಿ ಅಂದ್ರೆ, ಸಿನಿಮಾ ಅನ್ನೋದು ನಮ್ಮ ಇಡಿ ಸಮಾಜವನ್ನ ಬದಲಾಯಿಸೋ ಒಂದು ದೊಡ್ಡ ಜವಾಬ್ದಾರಿಯನ್ನ ಹೊತ್ತಿರುತ್ತೆ. ಕಲಾತ್ಮಕ ಸಿನಿಮಾನೆ ಆಗ್ಲಿ ಕಮರ್ಷಿಯಲ್‌ ಸಿನಿಮಾನೆ ಆಗ್ಲಿ , ಪ್ರತಿ ಒಂದು ಸಿನಿಮಾನು ಸಮಾಜದ ಮೇಲೆ ಒಂದಲ್ಲಾ ಒಂದು ರೀತಿ ಪರಿಣಾಮ ಬೀರುತ್ತೆ‌‌.

ಸಿನಿಮಾ ಮೇಕರ್ಸ್ ಕೂಡ ನಮ್ಮ ಸಿನಿಮಾದಲ್ಲಿ ಒಂದು ಒಳ್ಳೆ ಮೇಸೆಜ್ ಇದೆ ಅಂತ ಹೇಳೋದು ಇವತ್ತಿನಲ್ಲಿ ತುಂಬಾ ಕಾಮನ್ ಡೈಲಾಗ್. ಆದರೆ ಆ ಮೇಸೆಜ್ ಎಷ್ಟರ ಮಟ್ಟಿಗಿದೆ , ಅದು ಸಿನಿಮಾ ನೋಡೋ ಪ್ರೇಕ್ಷಕರನ್ನ ಹೇಗೆ ಕಾಡುತ್ತೇ ಅನ್ನೊದು ತುಂಬಾ ಮುಖ್ಯ ಆಗಿರುತ್ತೇ.

ಇಂದಿನ ದಿನಗಳಲ್ಲಿ ಬರಿ ದೊಡ್ಡ ಸಿನಿಮಾಗಳು ಮಾತ್ರ ಈ ಕೆಲಸ ಮಾಡ್ತಿಲ್ಲ , ಕಿರು ಸಿನಿಮಾಗಳು ಕೂಡಾ ಪ್ರೇಕ್ಷಕರನ್ನ ಕಾಡೊ ಅಂತ ಸಿನಿಮಾಗಳನ್ನ ಮಾಡ್ತ ಇದಾರೆ. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ನನಗೆ ಬಿಟ್ಟು ಬಿಡದೆ ಕಾಡಿದಂತ ಕಿರು ಸಿನಿಮಾ “ರಹಸ್ಥ(‘Rahastha’)” “Finding oneself in solitude”.

“ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ.
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ.
ಎಲ್ಲರೊಳಗೊಂದಾಗು ಮಂಕುತಿಮ್ಮ”.

ರಹಸ್ಥ(‘Rahastha’) ಕಿರುಸಿನಿಮಾ ನೋಡಿದವರಿಗೆ  ಡಿ.ವಿ.ಜಿ ಅವರ ಈ ಸಾಲುಗಳು ನೆನಪಾಗುವುದಂತು ಗ್ಯಾರಂಟಿ.  ಹೌದು, ಈ ಸಾಲುಗಳ ಅರ್ಥ ಇಟ್ಟುಕೊಂಡೆ ಅನೇಕ ಸಿನಿಮಾಗಳು ಹಾಗೂ ಕಿರುಸಿನಿಮಾಗಳು ಬಂದಿವೆ, ಆದರೆ ಒಂದೇ ಸಂದೇಶವನ್ನ ಯಾವ ಯಾವ ನಿರ್ದೇಶಕ ಯಾವ ಯಾವ ರೀತಿಯಲ್ಲಿ ಹೇಳ್ತಾನೆ ಅನ್ನೋದು ಮುಖ್ಯವಾಗಿರುತ್ತೆ. ರಹಸ್ಥ ನಿರ್ದೇಶಕ  ‘ಎ. ಮನೋಜ್ ಕುಮಾರ್'(A Manoj Kumar) ಗೆದ್ದಿದ್ದು ಇಲ್ಲೇ.  ಈ ಸಂದೇಶವನ್ನ ಯಾವ ರೀತಿ ಕಟ್ಟಿಕೊಟ್ಟರೆ ಪ್ರೇಕ್ಷಕರಿಗೆ ಕಾಡುತ್ತದೆ ಎಂಬ ಅವರ ಯೋಚನ ಕ್ರಮ.

ಮನೋಜ್ ಕುಮಾರ್ ನಿರ್ದೇಶನದ ಶೈಲಿ ಅತ್ಯದ್ಭುತ.  ಜೀವನ, ಹಣ, ಮನುಷ್ಯನಲ್ಲಿರುವ ಕ್ರೂರತನ ಇವೆಲ್ಲದರ ನಡುವಿನ ಬಾಂಧವ್ಯ, ಇವೆಲ್ಲವನ್ನು ಮನೋಜ್ ಕುಮಾರ್ ಬಹಳ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.

Rahasta Review

ನನಗೆ ಸಿನಿಮಾ, ಕಿರುಸಿನಿಮಾಗಳನ್ನ ನೋಡೊದು ಅದರ ವಿಮರ್ಶೆ ಮಾಡೊದು ಬಹಳ ಖುಷಿ ಕೊಡುತ್ತೆ(ನನಗೆ ತಿಳಿದಷ್ಟು ನಾನು ವಿಮರ್ಶೆ ಮಾಡ್ತಿನಿ).  ರಹಸ್ಥ ಕಿರುಸಿನಿಮಾದ ಟ್ರೈಲರ್ ನೋಡಿ ಬಹಳ ಇಂಪ್ರೆಸ್ ಆಗಿತ್ತು, ಅದರಲ್ಲಿದ್ದ ಒಂದು ಕುತೂಹಲ ಅಂಶ ನನ್ನ ಸಿಕ್ಕಾಪಟ್ಟೆ ಕಾಡಿದಂತು ನಿಜ, ಅಯ್ಯೋ ಹೇಗಪ್ಪ ಮಾಡಿದ್ರು ಇದನ್ನ , ಇದು ಸಾಧ್ಯನಾ ? ಹೇಗಾದ್ರು ಸರಿ ಈ ಕಿರುಸಿನಿಮಾ ನೋಡ್ಲೆ ಬೇಕು ಅಂತ ಡಿಸೈಡ್ ಮಾಡಿದ್ದೆ. (ಅವತ್ತು ರಾತ್ರಿ ನನ್ ಹೆಂಡತಿಗೆ ಈ ಟ್ರೈಲರ್ ಬಗ್ಗೆ ಹೇಳಿ ಹೇಳಿ ಅವಳ ತಲೆ ತಿಂದಿದ್ದೆ.).

ರಹಸ್ಥ(‘Rahastha’) ಕಿರುಸಿನಿಮಾದ ಅಪ್ಡೇಟ್‌ ಕಾಯುತ್ತಿದ್ದ ನನಗೆ ಅದು ಪ್ರದರ್ಶನಕ್ಕೆ ಸಿದ್ದವಾಗಿ, ದಿನಾಂಕ ನಿಗದಿಯಾಗಿರೋದು ತಿಳಿತು. ಮಲ್ಲೇಶ್ವರಂನ ಎಸ್.ಆರ್.ವಿ  ಮಿನಿ ಥಿಯೇಟರ್ ನಲ್ಲಿ ಎರಡು ಪ್ರದರ್ಶನಗಳನ್ನ ಆಯೋಜಿಸಿದ್ರು, ಮೊದಲ ಪ್ರದರ್ಶನ 6:30 ಕ್ಕೆ ಮತ್ತು ಎರಡನೇ ಪ್ರದರ್ಶನ 7:30 ಕ್ಕೆ. ಮೊದಲ ಪ್ರದರ್ಶನ 6:30 ಕ್ಕೆ ಅಂದ್ರೆ ಶುರುವಾಗೊದು 6:45 ಅಥವಾ 7:00 ಆಗುತ್ತೆ ಅಂತ ಆರಾಮಾಗೆ ಹೋದೆ, (ಯಾಕೆಂದ್ರೆ ಎಷ್ಟೋ ಕಿರುಸಿನಿಮಾ ನೋಡೊಕೆ ಹೋದಾಗ ಹೀಗಾಗಿದ್ದು ಇದೆ.)  ನಾನು ತಲುಪಿದ್ದು 6:45 ಕ್ಕೆ, ಥಿಯೇಟರ್ ಬಳಿ ಹೋದೆ ಜನರ ಗುಂಪು ನಿಂತಿತ್ತು, ಥಿಯೇಟರ್ ಇರೋದು ಮೂರನೇ ಮಹಡಿಯಲ್ಲಿ , ನಾನು ಇದ್ದಿದ್ದು ನೆಲಮಹಡಿಯಲ್ಲಿ, ಜನರು ಸಾಲು ಸಾಲಾಗಿ ನಿಂತಿದ್ರು,  ನಾನು ಮನಸ್ಸಿನಲ್ಲೇ ನಕ್ಕಿದೆ , ಇನ್ನೂ ನಿಧಾನವಾಗಿ ಬರಬಹುದಿತ್ತು 6:30 ಅಂತ ಹಾಕಿ  6:45 ಆದರು ಬಿಟ್ಟಲ್ಲ ಅಂತ, ಸರಿ 7:00 ಆಯ್ತು 7:15 ಆಯ್ತು 7:30 ಆಯ್ತು ಒಳಗಡೆ ಬಿಡಲೇ ಇಲ್ಲ, ಅಷ್ಟರಲ್ಲಿ ಮೇಲಿನ ಮಹಡಿಯಿಂದ ಜನರು ಬರೋದಕ್ಕೆ ಶುರುವಾಯಿತು, ಆಗ ತಿಳಿತು, ನಾನು ಇಷ್ಟೊತ್ತು ನಿಂತಿದಿದ್ದು ಮೊದಲ ಪ್ರದರ್ಶನಕಲ್ಲ ಎರಡನೇಯ ಪ್ರದರ್ಶನಕ್ಕೆಂದು, ಅಂದರೆ ಮೊದಲ ಪ್ರದರ್ಶನ ಹೌಸ್ ಫುಲ್ ಆಗಿ ಸರಿಯಾಗಿ 6:30 ಕ್ಕೆ ಪ್ರದರ್ಶನ ಶುರುವಾಗಿತ್ತು. ತಿರುಗಿ ನನ್ನ ಹಿಂದೆ ನೋಡಿದ್ರೆ ಇನ್ನೂ ಎರಡು ಪ್ರದರ್ಶನಕ್ಕೆ ಆಗೋ ಅಷ್ಟು ಜನ ನಿಂತಿದ್ರು, ಹೌದು ಆ ದಿನ ಎರಡು ಪ್ರದರ್ಶನ ಇದ್ದ ರಹಸ್ಥ ಪ್ರೇಕ್ಷಕರು ತುಂಬಿದ್ದರಿಂದ ನಾಲ್ಕು ಪ್ರದರ್ಶನ ಕಂಡಿತು. ಕಿರುಸಿನಿಮಾಗಳನ್ನ ಯಾರು ನೋಡೊಕೆ ಹೋಗ್ತಾರೆ ಅನ್ನೊರಿಗೆ ಮನೋಜ್ ಕುಮಾರ್ ಬಾಗಿಲಲ್ಲೆ ಉತ್ತರ ಕೊಟ್ಟಿದ್ರು. ಒಂದು ಕಿರುಸಿನಿಮಾಗೆ ಇಷ್ಟೊಂದು ಪ್ರೇಕ್ಷಕರು ಬಂದಿದ್ದು ಕಂಡು ಖುಷಿ , ಆಶ್ಚರ್ಯ ಎರಡು ಆಯಿತು.

ಈಗ ನನಗೆ ಕುತೂಹಲ ಇನ್ನೂ ಹೆಚ್ಚಾಗಿತ್ತು, ‌ಬೇಗ ಒಳಗೆ ಹೋಗಿ ಸೀಟ್ ಮೇಲೆ ಕರ್ಛಿಪು ಹಾಕ್ಬೇಕು ಅಂತ ಯೋಚನೆ ಮಾಡ್ತಿದ್ದೆ. ಅಷ್ಟು ಜನರ ನಡುವೆ ಹೇಗೋ ಕಷ್ಟ ಪಟ್ಟು ಒಂದು ಸೀಟ್ ಹಿಡಿದು ಗಟ್ಟಿಯಾಗಿ ಕುಳಿತು ಬಿಟ್ಟೆ. ಹತ್ತು ನಿಮಿಷದ ನಂತರ ಸಿನಿಮಾ ಪ್ರಾರಂಭವಾಯಿತು, ಸಿನಿಮಾದ ಮೊದಲ ದೃಶ್ಯವೇ ಇದು ಕಿರುಸಿನಿಮಾವಲ್ಲ ಇದೊಂದು ದೊಡ್ಡ ಸಿನಿಮಾ ಎಂದೇನಿಸಿತು. 40 ನಿಮಿಷಗಳ ಕಾಲ ಮೂಖಸ್ತಬ್ದನಂತೆ ಸಿನಿಮಾವನ್ನು ವೀಕ್ಷಿಸಿದೆ. ನನಗೆ ಅನ್ಸಿದ್ದು ಒಂದೇ ‘ಸಿನಿಮಾ ಅಂದ್ರೆ ಮನೆ ಕಟ್ಟೊದಲ್ಲ, ತಾಜ್ ಮಹಲ್ ಕಟ್ಟೊದು’ ಅನ್ನೋ ಮಾತು ನಿರ್ದೇಶಕ ಮನೋಜ್ ಕುಮಾರ್ ಗೆ ಹೇಳಿ ಮಾಡಿಸಿದಾಗಿತ್ತು.

ಇಡಿ ರಹಸ್ಥ ಒಂದು ನಿಶ್ಯಬ್ದ ಪಯಣ (silent journey).  ಇಡಿ ಸಿನಿಮಾ ಮಾತು ಇರುವುದಿಲ್ಲ, ಅಲ್ಲದೇ ಇಡಿ ಸಿನಿಮಾದಲ್ಲಿರುವುದು ಒಬ್ಬನೇ ನಟ. ಒಂದು ಸಂಭಾಷಣೆ ಇರಲಿಲ್ಲ, ಒಬ್ಬನೇ ನಟ, ಹೇಗೆ 40 ನಿಮಿಷದ ಸಿನಿಮಾ ಮುಗಿಯಿತು ಅಂತ ಗೊತ್ತಾಗಲಿಲ್ಲ.

ಮನುಷ್ಯನ ಜೀವನಕ್ಕೆ ನಿಜವಾಗ್ಲು ಬೇಕಾಗಿರೋದು ಏನು ?  ಏಕೆ ಈ ಒಡೆದಾಟ , ಕಾದಟ , ಹಣದ ಮೇಲಿನ ಮೊಹ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಲ್ಲದೇ ಬದುಕಿರಲಾರ ಅನ್ನೊದನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕಿರುಸಿನಿಮಾದ ವಿಶೇಷ ಏನು ಗೊತ್ತಾ, ನಾನು ಆಗಲೇ ಹೇಳಿದ್ನಲ್ಲ ಟ್ರೈಲರ್ ನ ಒಂದು ಪಾಯಿಂಟ್ ನನ್ನ ಕುತೂಹಲಕ್ಕೆ ಬೀಳಿಸಿತು ಅಂತ ಅದು.

12,339,447 ಜನಸಂಖ್ಯೆ ಇರುವ ನಮ್ಮ ಬೆಂಗಳೂರು, ಒಬ್ಬ ಮನುಷ್ಯನು ಇಲ್ಲದೆ ಖಾಲಿ ಖಾಲಿಯಾಗಿ ಇರುತ್ತದೆ. ಒಮ್ಮೆ ಯೋಚಿಸಿ ನೋಡಿ ಹೇಗಿರುತ್ತೆ ಅಂತ,  ಇಂತಹ ಖಾಲಿ ಬೆಂಗಳೂರುನಲ್ಲಿ ಮನೋಜ್ ಕುಮಾರ್ ಸೃಷ್ಟಿಸಿರುವ ಪಾತ್ರ ಒಂಟಿಯಾಗಿ ಓಡಾಡುತ್ತದೆ, ಸಿನಿಮಾ ನೋಡೋ ಪ್ರೇಕ್ಷಕರ ಕಣ್ಣು ತೆರೆಸುತ್ತದೆ.
ಇಡಿ ಬೆಂಗಳೂರನ್ನ ಖಾಲಿ ಖಾಲಿಯನ್ನಾಗಿ ನೋಡೋಕೆ ಅದ್ಬುತವಾಗಿತ್ತು, ಹಾಲಿವುಡ್ ಸಿನಿಮಾ ಮೇಕಿಂಗ್ ನೋಡಿದಾಗಿತ್ತು. ನಮ್ಮ ಸ್ಯಾಂಡಲ್ ವುಡ್ ನಲ್ಲು ಇಂತಹ ಮೇಕಿಂಗ್ ಕೊಡಬಹುದಾದ ಪ್ರತಿಭೆಗಳಿದ್ದಾರೆ ಅಂತ ಇಡಿ ರಹಸ್ಥ ತಂಡ ಪ್ರೂವ್ ಮಾಡಿತ್ತು.

Rahasta Review 2

ಇನ್ನೂ ಸಿನಿಮಾಗೆ ಮತ್ತೊಂದು ಪ್ಲಸ್ ಪಾಯಿಂಟ್ , ‘ಸ್ವಾಮಿನಾಥನ್ ರಾಮಕೃಷ್ಣ’ ಅವರ ಸಂಗೀತ ನಿರ್ದೇಶನ. ಇಡಿ ಸಿನಿಮಾ ಸೈಲೆಂಟ್ ಆದ್ದರಿಂದ ಒದ್ದೊಂದು ದೃಶ್ಯಕ್ಕು  ಬಿ.ಜಿ.ಎಮ್ ತುಂಬಾ ಮುಖ್ಯವಾಗಿರುತ್ತೆ, ಪ್ರತಿ ದೃಶ್ಯವನ್ನು ಇನ್ನಷ್ಟೂ ಜೀವಂತವಾಗಿರಿಸಿದ್ದೆ ಇವರ ಸಂಗೀತ ನಿರ್ದೇಶನ. ನಿಜವಾಗಿಯೂ ಹೇಳಬೇಕೆಂದರೆ ಕನ್ನಡದ ‘ಹಾನ್ಸ್ ಜಿ಼ಮ್ಮರ್’ ಅನ್ಸಿಬಿಟ್ರು, ಯಾವ ಹಾಲಿವುಡ್ ಸಿನಿಮಾಗು ಕಡಿಮೆ ಇಲ್ಲದಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ರಹಸ್ಥದ ನಟ ‘ಉತ್ತಮ್ ಸ್ವರೂಪ್’ ಅದ್ಬುತವಾಗಿ ನಟಿಸಿದ್ದಾರೆ, ತಾನೊಬ್ಬನೆ ಇಡೀ ಸಿನಿಮಾದಲ್ಲಿ ನಟಿಸಿ ಗೆದ್ದಿದ್ದಾರೆ. ಇನ್ನೂ ಎಡಿಟಿಂಗ್ ಮತ್ತು ಕ್ಯಾಮೆರಾ ವರ್ಕ್ ಕೆಲಸ ಮಾಡಿದವರು ‘ಎರಿಕ್.ವಿ.ಜೆ’. ಇವರು ಕೂಡ ರಹಸ್ಥದ ಇನ್ನೊಂದು ಜೀವವಾಗಿ ಕೆಲಸ ಮಾಡಿದ್ದಾರೆ,  ಇಡಿ ಬೆಂಗಳೂರನ್ನ ಖಾಲಿ ಮಾಡಿದ್ದೆ ಇವರಂತೆ, ಅಂದರೆ ವಿ.ಎಫ್.ಎಕ್ಸ್ ಮಾಡಿದ್ದು ಕೂಡ ಇವರೆ‌. ಇಡಿ ಸಿನಿಮಾ ಯಾವ ಮಾತು ಕೇಳದ ನಮಗೆ  ‘ಕೌಶಿಕ್.ಜಿ‌.ಎನ್’. ಅವರ ಧ್ವನಿಯಲ್ಲಿ ಬಂದ ಹಾಡು ಕೇಳಿ ವ್ಹಾ ಎನ್ನಿಸಿತು.

ಸಿನಿಮಾದ ಕೊನೆಯಲ್ಲಿ ಬರುವ ಒಂದಷ್ಟು ಸಾಲುಗಳು,  ಸಿನಿಮಾಗು, ನೋಡುವ ಪ್ರೇಕ್ಷಕನಿಗು ತುಂಬಾ ಮುಖ್ಯವಾಗಿರುತ್ತೆ. ಆ ಸಾಲುಗಳಿಗೆ ಧ್ವನಿಯಾಗಿದ್ದು ಕಿರುತೆರೆ ನಟ ‘ವಿವೇಕ್ ಸಿಂಹ’ ಅವರು.  ಪ್ರತಿ ಪ್ರೇಕ್ಷಕರ ಒಳಗೆ ಅವರ ಧ್ವನಿ ಪ್ರವೇಶ ಮಾಡುವಂತಿತ್ತು, ಹಾಗೆ ಅವರ ಮಾತಿನಲ್ಲಿ ಬಂದ ಆ ಸಾಲುಗಳು ನನ್ನನ್ನ ಕಾಡೊಕೆ ಶುರುಮಾಡಿತ್ತು. ಸಿನಿಮಾದ ಕ್ಲೈಮಾಕ್ಸ್ ನಲ್ಲಿ ನಿರ್ದೇಶಕ ಮನೋಜ್ ಕುಮಾರ್ ಪ್ರೇಕ್ಷಕರಿಗೆ ಏನು ಹೇಳ್ತಾ ಇದಾರೆ ಅನ್ನೊದು ಅರ್ಥ ಅಗೋದೆ ಈ ಕೊನೆ ಸಾಲುಗಳಲ್ಲಿ.

ಎಷ್ಟೊಂದು ಮೌಲ್ಯ ಅಮೂಲ್ಯಗಳನ್ನ ಇಟ್ಟಿಕ್ಕೊಂಡು ಮಾಡಿರುವ ಈ ಕಿರುಸಿನಿಮಾದ ನಿರ್ದೇಶಕರನ್ನ ನೋಡಿ, ಅವರನ್ನ ಮನಸಾರೆ ಹೊಗಳಬೇಕು ಎನ್ನುವ ಆಸೆ ಜಾಸ್ತಿಯಾಗಿ, ಜನರನ್ನ ತಳ್ಳಾಡಿಕೊಂಡು ಅವರೆದುರಿಗೆ ನಿಂತು , ಒಂದು ಗಟ್ಟಿ ಅಪ್ಪುಗೆ ಕೊಟ್ಟು, ನೀವು ಸಿನಿಮಾ ಮಾಡಿಲ್ಲ , ಕೆತ್ತಿದ್ದಿರಾ ಎಂದು ಹೇಳಿ ಕೆಳಗೆ ಇಳಿಯುತ್ತಿದ್ದಂತೆ, ದಾರಿಯೇ ಇಲ್ಲದಾಗೆ ಮತ್ತೊಂದು ಪ್ರದರ್ಶನಕ್ಕೆ ಜನ ಕಾಯುತ್ತ ನಿಂತಿದ್ದರು.

ನನ್ನ ಜೀವನದಲ್ಲಿ ನಾನು ಎಷ್ಟೋ ಸಿನಿಮಾ, ಕಿರು ಸಿನಿಮಾಗಳನ್ನ ನೋಡ್ಬಹುದು , ಆದರೆ ಅವತ್ತು ಅದೇನೊ‌ ಗೊತ್ತಿಲ್ಲ ಅಂದು ನೋಡಿದ ಆ ರಹಸ್ಥ ಸಿನಿಮಾ, ನನ್ನ ಇವತ್ತಿಗು ಬಿಟ್ಟು ಬಿಡದೆ ಕಾಡುತ್ತೆ. ಒಂದು ಸಲ ಯಾವಾಗಾದ್ರು ಸಮಯ ಮಾಡ್ಕೊಂಡು ರಹಸ್ಥ ನೋಡಿ, ನಿಮ್ಗು ಈ ರಹಸ್ಥ ಹೀಗೆ ಕಾಡುತ್ತೆ..                        

‘Rahastha’ a kannada short film was directec by A Manoj Kumar. This amazing short film was released recently.’Rahastha ‘ short film review was here written by Mytri Jaggi(Cinema Artist)

You may also like