Home » ಎಲ್ಲಾ ಸಮುದಾಯಗಳ ಭಾವನೆಗೆ ಸ್ಪಂದಿಸುವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಎಲ್ಲಾ ಸಮುದಾಯಗಳ ಭಾವನೆಗೆ ಸ್ಪಂದಿಸುವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by manager manager

ಹಾವೇರಿ: ನಿಮ್ಮ ಪ್ರೀತಿ ವಿಶ್ವಾಸದ ಮುಂದೆ ಯಾವುದು ದೊಡ್ಡದಲ್ಲ. ಎಲ್ಲಾ ಸಮುದಾಯಗಳ ಭಾವನೆಗೆ ಸರ್ಕಾರ ಸದಾ ಸ್ಪಂದಿಸುತ್ತದೆ. ನಿಮ್ಮ ಬೆಂಬಲಕ್ಕೆ ಶ್ರೇಯಸ್ಸು ತರುವ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಶಿಗ್ಗಾಂವ ತಾಲೂಕಿನ ಸಂತೆ ಮೈದಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಅವರು, ಈ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಯಾವುದೇ ಭೇದವಿಲ್ಲದೇ ಕ್ಷೇತ್ರದ ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು. ನೊಂದ, ತುಳಿತಕ್ಕೆ ಒಳಪಟ್ಟ ಜನರ ರಕ್ಷಣೆಗೆ ಸರ್ಕಾರ ಸದಾ ಸಿದ್ಧವಾಗಿರುತ್ತದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ವಿಸ್ತರಣೆಗಾಗಿ ಹೋರಾಟ ಮಾಡಿದವಳು ಅಲ್ಲ, ತನ್ನ ರಾಜ್ಯದ ಜನರಿಗಾಗಿ ಹೋರಾಟ ಮಾಡಿದಳು. ಆ ಹೋರಾಟದಲ್ಲಿ ಪ್ರತಿ ನಾಗರಿಕರು ಸೈನಿಕರಂತೆ ಹೋರಾಟ ಮಾಡಿದರು. ಅವರ ಹೋರಾಟ ನಮಗೆ ಸ್ಫೂರ್ತಿದಾಯಕವಾಗಬೇಕು. ಪ್ರತಿಯೊಬ್ಬರು ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದರು.

ಶಿಗ್ಗಾಂವ ಹಾಗೂ ಸವಣೂರು ದಾರ್ಶನಿಕರ ಬೀಡು. ಅವರ ಆದರ್ಶ, ಚಿಂತನೆಗಳ ಬೇರು ಈ ನಾಡಿನಲ್ಲಿದೆ. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಎಲ್ಲರೂ ಒಂದುಗೂಡಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದರು. ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ಅಲ್ಲದೇ ಮುಂದಿನ ದಿನಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಅನಾವರಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರಗೇಶ ನಿರಾಣಿ ಅವರು ಮಾತನಾಡಿ, ಮುಖ್ಯಮಂತ್ರಿಗಳು ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಜನವರಿ 14 ರಂದು ಹರಿಹರದಲ್ಲಿ ನೂತನವಾದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಮುದಾಯದ ಪದವೀಧರರು ಭಾಗವಹಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.

ಪೆಟ್ರೋಲ್, ಡಿಸೇಲ್‍ಗೆ ಪರ್ಯಾಯವಾಗಿ ಆತ್ಮ ನಿರ್ಭರ ಯೋಜನೆಯಡಿ ಏಷ್ಯಾ ಖಂಡದಲ್ಲಿಯೇ ಅತಿಹೆಚ್ಚು ಎಥೆನಾಲ್ ಉತ್ಪಾದನೆ ಮಾಡುವ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್, ಅರುಣಕುಮಾರ ಪೂಜಾರ, ವಿಧಾನ ಪರಿಷತ್ತ ಸದಸ್ಯ ಸೋಮಣ್ಣ ಬೇವಿನಮರ, ಮಾಜಿ ಸಂಸದ ಮಂಜುನಾಥ ಕುನ್ನುರು, ಮಾಜಿ ಸಚಿವ ವಿನಯ ಕುಲಕರ್ಣಿ ಇತರರು ಉಪಸ್ಥಿತರಿದ್ದರು.

ಕೋವಿಡ್‍ನಿಂದ ಮೃತರಾದ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರ ವಿತರಿಸಿದ ಸಿಎಂ

You may also like