Home » ಬೆಂಗಳೂರಿನಿಂದ ಪಾಂಡಿಚೇರಿಗೆ ಕಾರಿನಲ್ಲಿ ಪ್ರವಾಸ: ಪ್ರಕೃತಿ ಮಧ್ಯೆಯ ಈ ಮಾರ್ಗ ಸೂಕ್ತ

ಬೆಂಗಳೂರಿನಿಂದ ಪಾಂಡಿಚೇರಿಗೆ ಕಾರಿನಲ್ಲಿ ಪ್ರವಾಸ: ಪ್ರಕೃತಿ ಮಧ್ಯೆಯ ಈ ಮಾರ್ಗ ಸೂಕ್ತ

by manager manager

ಬೆಂಗಳೂರು ಉದ್ಯೋಗದಾತರ ಸ್ವರ್ಗ. ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಹೆಸರಾದ ಬೆಂಗಳೂರು ಅನೇಕ ಮಲ್ಟಿ-ನ್ಯಾಷನಲ್‌ ಕಂಪನಿಗಳ ಕೇಂದ್ರವಾಗಿದ್ದು, ಹಲವು ಬಗೆಯ ಉದ್ಯೋಗಾವಕಾಶಗಳನ್ನು ನೀಡಿವೆ. ಮನರಂಜನೆಗೆ ಇಲ್ಲಿ ಯಾವುದೇ ಕೊರತೆಯಿಲ್ಲ. ವೀಕೆಂಡ್, ರಜೆಗಳು ಬಂತೆಂದರೆ ತೀವ್ರವಾದ ಒತ್ತಡ ಜೀವನದಿಂದ ಹೊರಬರಲು ಇಲ್ಲಿನ ನಿವಾಸಿಗಳು ಹಾತುರರಾಗಿರುತ್ತಾರೆ. ವೀಕೆಂಡ್ ಮಜಾ ಮಾಡಲು ಬಯಸುವವರಿಗಾಗಿಯೇ, ಕಾರಿನಲ್ಲಿ ಸುಂದರವಾದ ಪ್ರಕೃತಿ ಮಧ್ಯದಲ್ಲಿ ಲಾಂಗ್ ಡ್ರೈವ್ ಮಾಡಬೇಕು ಎಂದು ಕೊಂಡವರಿಗಾಗಿಯೇ ಬೆಂಗಳೂರಿನಿಂದ ಪಾಂಡಿಚೇರಿಗೆ ಸುಂದರವಾದ ಪ್ರವಾಸಿ ಮಾರ್ಗವಿದೆ.

ರಜೆಯನ್ನು ಕಳೆಯಲು ತಮಿಳುನಾಡಿನ ಪಾಂಡಿಚೇರಿ ಅತ್ಯುತ್ತಮ ಪ್ರವಾಸಿ ತಾಣ. ಬಂಗಾಳದ ಸಮುದ್ರದ ಅಡಿಯಲ್ಲಿ ಬರುವ ಪಾಂಡಿಚೇರಿ ಪೂರ್ವದ ಗೋವಾ ಎಂದರೆ ತಪ್ಪಾಗಲಾರದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಏಳು ವರ್ಷಗಳ ನಂತರ ಫ್ರೆಂಚ್ ಆಡಳಿತದಿಂದ ಪಾಂಡಿಚೇರಿ ಮುಕ್ತಿ ಪಡೆದರು ಸಹ, ಅವರ ಸಾಂಸ್ಕೃತಿಕ ಪ್ರಭಾವ ಪ್ರವಾಸಿಗರನ್ನು ಸೆಳೆಯುವ ಶ್ರೀಮಂತಿಕೆಯನ್ನು ಹಾಗೆ ಉಳಿಸಿಕೊಂಡಿದೆ. ಬೆಂಗಳೂರಿನಿಂದ ಪಾಂಡಿಚೇರಿಗೆ ಪ್ರವಾಸ ಹೋಗಲು ರೈಲು, ವಿಮಾನ, ಬಸ್ಸು, ಕ್ಯಾಬ್‌ಗಳು, ಬೈಕ್‌, ಕಾರು ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಬಹುಸಂಖ್ಯಾತ ಪ್ರವಾಸಿಗರು ಹಗಲು ವೇಳೆಯ ರಸ್ತೆ ಪ್ರಯಾಣಕ್ಕೆ ಆಧ್ಯತೆ ನೀಡುತ್ತಾರೆ.

ಫ್ರೆಂಚ್ ವಸಾಹತು ನಗರವಾದ ಪಾಂಡಿಚೇರಿ ಪ್ರವಾಸಿಗರಿಗೆ ಹಲವು ಐತಿಹಾಸಿಕ ಸ್ಮಾರಕಗಳು ಮತ್ತು ವಾಸ್ತುಶಿಲ್ಪಗಳನ್ನು ಮಾತ್ರವಲ್ಲದೇ ಗತಕಾಲದ ವೈಭವ ನೋಟವನ್ನು ನೀಡುತ್ತದೆ. ಸುಂದರವಾದ ಬೀಚ್‌ಗಳು, ಬಗೆಬಗೆಯ ತಿನಿಸುಗಳಿಗೆ ಪ್ರಸಿದ್ಧಿ.

ಪಾಂಡಿಚೇರಿಗೆ ಪ್ರವಾಸ ಕೈಗೊಳ್ಳಲು ಯಾವ ಸಮಯ ಅತ್ಯುತ್ತಮವಾದದು?

ಬೆಂಗಳೂರಿನಿಂದ ಪಾಂಡಿಚೇರಿಗೆ ಪ್ರವಾಸ ಹೋಗಲು ಅಕ್ಟೋಬರ್ ನಿಂದ ಮಾರ್ಚ್‌ ವೇಳೆ ಉತ್ತಮ ವಾತಾವರಣದ ಕಾರಣ ಅತ್ಯುತ್ತಮ ಎಂಬುದು ಹಲವರ ಅಭಿಪ್ರಾಯ. ಬೇಸಿಗೆ ಮತ್ತು ಶೀತಗಾಳಿ ಸಮಯದಲ್ಲಿ ರೋಡ್ ಟ್ರಿಪ್‌ ಸೂಕ್ತವಲ್ಲ ಎನ್ನುತ್ತಾರೆ ಹಲವರು. ಹಾಗೆ ಮಳೆಗಾಲವು ಸಹ ಪ್ರವಾಸಕ್ಕೆ ಉತ್ತಮ ಸಮಯವಲ್ಲ.

ಬೆಂಗಳೂರಿನಿಂದ ಪಾಂಡಿಚೇರಿಗೆ ರಸ್ತೆ ಮೂಲಕ ಪ್ರವಾಸ ಹೋಗಲು ಮೂರು ಪ್ರಮುಖ ಉತ್ತಮ ಮಾರ್ಗಗಳಿವೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 77 ಮೂಲಕ ಕೃಷ್ಣಗಿರಿ ಮಾರ್ಗವಾಗಿ ಪಲ್ಲಿಕೊಂಡ-ಅರನಿ-ತಿಂಡಿವನಂ ಮೂಲಕ ಪಾಂಡಿಚೇರಿಗೆ ಹೋಗುವವರು ಕಣ್ಮನ ತಣಿಸುವ ಸುಂದರ ಪ್ರಕೃತಿಯನ್ನು ನೋಡಬಹುದು. ದಟ್ಟವಾದ ನಿಸರ್ಗದ ಮಡಿಲಿನಲ್ಲಿ ಡ್ರೈವ್‌ ಮಾಡುತ್ತ ಹೋಗಬಹುದು. ವೀಕೆಂಡ್ ಮಜಾ ಮಾಡಲು ಬಯಸುವವರಿಗೆ ಈ ಮಾರ್ಗದಲ್ಲಿ ಪ್ರವಾಸ ಮಾಡಲು 7 ರಿಂದ 8 ಗಂಟೆಗಳ ಸಮಯ ಸಾಕಾಗುತ್ತದೆ.

ಬೆಂಗಳೂರಿನಿಂದ ಪಾಂಡಿಚೇರಿ ಪ್ರವಾಸ ಮಾರ್ಗದಲ್ಲಿ ಭೇಟಿ ನೀಡಬಹುದಾದ ಪ್ರಖ್ಯಾತ ಸ್ಥಳಗಳನ್ನು ಇಲ್ಲಿ ನೋಡೋಣ.

ಬೆಂಗಳೂರು – ಕೃಷ್ಣಗಿರಿ

ತಮಿಳುನಾಡಿನ ಕೃಷ್ಣಗಿರಿ ಪಟ್ಟಣಕ್ಕೆ ಬೆಂಗಳೂರಿನಿಂದ NH44 ಅಥವಾ NH48 ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣ ಮಾಡಬಹುದು. ಆದರೆ ಹೊಸೂರು ಮಾರ್ಗದ ರಾಜ್ಯ ಹೆದ್ದಾರಿ ಸಂಖ್ಯೆ 77 ರ ಮೂಲಕ ಹೋದರೆ ನಿಸರ್ಗದ ತಪ್ಪಲಿನಲ್ಲಿ ಚಲಿಸಬಹುದು. ಕೃಷ್ಣಗಿರಿ ಹಲವು ಸುಂದರ ತಾಣಗಳನ್ನು ಒಳಗೊಂಡಿದೆ. ಅವುಗಳಲ್ಲಿ ಕೃಷ್ಣಗಿರಿ ಅಣೆಕಟ್ಟು ಪ್ರವಾಸಿಗರು ತಮ್ಮ ಕುಟುಂಬದೊಂದಿಗೆ ಮತ್ತು ಸ್ನೇಹಿತರೊಡನೆ ಎಂಜಾಯ್‌ ಮಾಡಲು ಅತ್ಯುತ್ತಮ ಪಿಕ್ನಿಕ್ ತಾಣ. ಮತ್ತೊಂದು ಕೃಷ್ಣಗಿರಿ ಪಟ್ಟಣದಲ್ಲಿನ ಐತಿಹಾಸಿಕ ಕೋಟೆ. ಟ್ರೆಕ್ಕಿಂಗ್ ಪ್ರೇಮಿಗಳು ಈ ಸುಂದರ ಕೋಟೆಯನ್ನು ನೋಡಲು ಮರೆಯುವಂತಿಲ್ಲ.

ಕೃಷ್ಣಗಿರಿ – ಪಲ್ಲಿಕೊಂಡ

ಕೃಷ್ಣಗಿರಿ ನಂತರ NH48 ಮಾರ್ಗದಲ್ಲಿ 100 ಕಿ.ಲೋ ಮುಂದೆ ಸಾಗಿದರೆ 80 ನಿಮಿಷದಲ್ಲಿ ವೆಲ್ಲೊರ್ ಜಿಲ್ಲೆಯ ಪಲ್ಲಿಕೊಂಡ ತಲುಪಬಬಹುದು. ಈ ಸ್ಥಳ 14 ಕಿ.ಲೋ ಉದ್ದ ಮತ್ತು 350 ಮೀಟರ್ ಎತ್ತರದ ದೊಡ್ಡ ಅವಳಿ ಬೆಟ್ಟಗಳಿಂದ ಆವೃತ್ತವಾಗಿರುವುದನ್ನು ನೋಡಬಹುದು. ಇಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಬೇಕು ಎನ್ನುವವರು ವನಿಯಂಬಡಿ ಮತ್ತು ಅಗರಂ ಮಾರ್ಗದಲ್ಲಿ ಹೋಗುವ ಮೂಲಕ ದಟ್ಟವಾದ ಕಾಡು, ಘಾಟ್‌ಗಳ ನಡುವೆ ಚಲಿಸಿದರೆ ರೋಮಾಂಚನಕಾರಿ ಅನುಭವ ಪಡೆಯಬಹುದು.

ಪಲ್ಲಿಕೊಂಡ – ಅರನಿ

ಪಲ್ಲಿಕೊಂಡದಿಂದ ತಮಿಳುನಾಡು ರಾಜ್ಯ ಹೆದ್ದಾರಿ ಸಂಖ್ಯೆ 132 ಮೂಲಕ ಅರನಿ ತಲುಪಬಹುದು. ಅರನಿಯಲ್ಲಿನ ಸಂಪಗಿ ಪಿಚಂಡೇಶ್ವರಿ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ. ಕುಟುಂಬ ಸಮೇತ ಕಾರಿನಲ್ಲಿ ಪ್ರವಾಸ ಕೈಗೊಂಡವರು ಸಮಯವಿದ್ದಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಅರನಿ ಹತ್ತಿರವೇ ಇರುವ ತಿರುವಣ್ಣಾಮಲೈಗೆ ಭೇಟಿ ನೀಡಿದರೆ ಅಲ್ಲಿನ ಪ್ರಕೃತಿ ಸೊಬಗಿನಿಂದ ಕೂಡಿದ ರಮಣ ಮಹರ್ಷಿಗಳ ಆಶ್ರಮ ಮತ್ತು ಅರುಣಾಚಲಂ ಪರ್ವತ ಶ್ರೇಣಿಗಳನ್ನು ನೋಡಬಹುದು.

ಅರನಿ – ತಿಂಡಿವನಂ

ಅರನಿಯಿಂದ ತಮಿಳುನಾಡು ರಾಜ್ಯ ಹೆದ್ದಾರಿ ಸಂಖ್ಯೆ 4 ರ ಮಾರ್ಗವಾಗಿ ಚಲಿಸಿದರೆ 1 ಗಂಟೆ 30 ನಿಮಿಷದಲ್ಲಿ ತಿಂಡಿವನಂ ತಲುಪಬಹುದು. ಕಾರಿನಲ್ಲಿ ಪ್ರಯಾಣಿಸುವವರು ಸಮಯವಿದ್ದರೆ ತಿಂಡಿವನಂ ಸುತ್ತಮುತ್ತ ಭೇಟಿ ನೀಡಲು ಹಲವು ದೇವಸ್ಥಾನಗಳು ಇದ್ದು ನೋಡಬಹುದು.

ತಿಂಡಿವನಂ – ಪಾಂಡಿಚೇರಿ

ತಿಂಡಿವನಂನಿಂದ ಪಾಂಡಿಚೇರಿಗೆ 38 ಕಿ.ಲೋ ಅಂತರವಿದ್ದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 32 ರ ಮೂಲಕ 40 ನಿಮಿಷದೊಳಗೆ ತಲುಪಬಹುದು. ಪಾಂಡಿಚೇರಿಯಲ್ಲಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಆರೋವಿಲ್ ಬೀಚ್, ಪ್ರೋಮೆನೇಡ್ ಬೀಚ್, ಪ್ಯಾರಡೈಸ್ ಬೀಚ್, ಮಾಹೆ ಬೀಚ್, ಕಾರೈಕಲ್ ಬೀಚ್‌ ಪಾಂಡಿಚೇರಿಯಲ್ಲಿನ ಪ್ರಮುಖ ಬೀಚ್‌ಗಳು. ಸಮಯ ಕಡಿಮೆ ಇರುವವರು, ಎರಡು ದಿನಗಳ ಪ್ರವಾಸ ಮಾತ್ರ ಕೈಗೊಂಡಿರುವವರು ಯಾವುದಾದರೊಂದು ಬೀಚ್‌ ಮತ್ತು ಅರಬಿಂದೋ ಮತ್ತು ಅಮ್ಮಾ ಅಮೃತಾನಂದಮಯಿ ಆಶ್ರಮಗಳಿಗೆ ಭೇಟಿ ನೀಡಿ ಹಿಂದಿರುಗಬಹುದು.

ಪಾಂಡಿಚೇರಿಯಲ್ಲಿ ಫ್ರೆಂಚ್ ಕಾಲೋನಿ ಇದೆ. ಬಗೆ-ಬಗೆಯ ಆಹಾರ ಮತ್ತು ತಿಂಡಿ-ತಿನಿಸುಗಳಿಗೆ ತುಂಬಾ ಫೇಮಸ್. ಹಾಗೆ ಇಲ್ಲಿಗೆ ಭೇಟಿ ನೀಡಿದವರು ಸ್ಕೂಬಾ ಡೈವಿಂಗ್ ಮಜಾ ಮಾಡಬಹುದು.

ಮೇಲೆ ತಿಳಿಸಿದ ಮಾರ್ಗಗಳಲ್ಲಿ ಕಾರಿನಲ್ಲಿ ಕ್ರಮಿಸಿದರೆ ಸುಮಾರು 354 ಕಿ.ಲೋ ಪ್ರಯಾಣದಲ್ಲಿ ಬೆಂಗಳೂರಿನಿಂದ ಪಾಂಡಿಚೇರಿ ಮಧ್ಯೆ ಸುಂದರವಾದ ನಿಸರ್ಗ ಸೊಬಗನ್ನು ನೋಡುತ್ತ ಪ್ರವಾಸ ಮಾಡಬಹುದು. ಬೆಂಗಳೂರಿನಿಂದ ಪಾಂಡಿಚೇರಿಗೆ ಕನಿಷ್ಠ ಎರಡು ದಿನದ ಪ್ರವಾಸ ಕೈಗೊಂಡರೆ ಸ್ನೇಹಿತರೊಟ್ಟಿಗ ಆಗಲಿ ಅಥವಾ ಕುಟುಂಬದವರೊಂದಿಗೆ ಆಗಲಿ ಮನತಣಿವಷ್ಟು ಎಂಜಾಯ್ ಮಾಡಿ ವಾಪಸ್ಸು ಬರಬಹುದು.

You may also like