Home » “ಭಾರತದಲ್ಲಿ ಉತ್ತಮ ಪ್ರತಿಭೆಗಳಿಗೆ ಕೊರತೆ ಇಲ್ಲ, ಆದರೆ ದೇಶ ಮಾತ್ರ ಸಾಕಷ್ಟು ಅಭಿವೃದ್ಧಿಹೊಂದಿಲ್ಲ” – ಜಪಾನ್‌ ಪ್ರಜೆ

“ಭಾರತದಲ್ಲಿ ಉತ್ತಮ ಪ್ರತಿಭೆಗಳಿಗೆ ಕೊರತೆ ಇಲ್ಲ, ಆದರೆ ದೇಶ ಮಾತ್ರ ಸಾಕಷ್ಟು ಅಭಿವೃದ್ಧಿಹೊಂದಿಲ್ಲ” – ಜಪಾನ್‌ ಪ್ರಜೆ

by manager manager

ಒಬ್ಬ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ನ ಅನುಭವ

ಇತ್ತೀಚೆಗೆ ಜಪಾನಿನ ಪ್ರಜೆಯಾಗಿರುವ ನನ್ನ ಸಹೋದ್ಯೋಗಿಯನ್ನು ಬೆಂಗಳೂರಿನಲ್ಲಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆತ ನಮ್ಮ ಕಂಪೆನಿಯ ಒಂದು ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದ. ಆತನನ್ನ ಏರ್ ಪೋರ್ಟ್‌ ನಿಂದ ಕರೆದುಕೊಂಡು ಬರುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ಆತನನ್ನು ಎದುರುಗೊಂಡು, ಇಬ್ಬರೂ ಪರಿಚಯಿಸಿಕೊಳ್ಳುವ ಉಪಚಾರ ನಡೆದು, ನಮ್ಮ ಕಾರಿನಲ್ಲಿ ಕುಳಿತು ಅಲ್ಲಿಂದ ಹೊರಟೆವು. ಕಡಿಮೆ ಅಂದರೂ ಎರಡು ಘಂಟೆಯ ಪ್ರಯಾಣ. ಅವನನ್ನು ಹೀಗೆಯೇ ಮಾತಿಗೆಳೆದೆ. ಮೊದಲೇ ಜಪಾನಿಗರು ಶಿಸ್ತಿಗೆ, ಕಾರ್ಯಕ್ಷಮತೆಗೆ ಹೆಸರುವಾಸಿ. ಕಾಯಕವೇ ಕೈಲಾಸ ಅಂತ ಹುಟ್ಟಿನಿಂದಲೇ ಕಲಿತುಕೊಂಡವರು. ಮೊದಮೊದಲು ಸ್ವಲ್ಪ ರಿಸರ್ವ್‍ಡ್ ಟೈಪ್ ಅಸಾಮಿ ಅಂತ ಅನಿಸಿದರೂ ಕ್ರಮೇಣ ಮಾತುಕತೆಗೆ ತೆರೆದುಕೊಂಡ. ಕಂಪೆನಿ ವಿಚಾರ, ಅಲ್ಲಿನ ಬೆಳವಣಿಗೆ ಇತ್ಯಾದಿ ವಿಷಯಗಳು ಬಂದವು. ಆಮೇಲೆ ವಿಚಾರಗಳು ದೇಶದಲ್ಲಿನ ಬೆಳವಣಿಗೆ, ರಸ್ತೆಗಳು, ಪರಿಸರ, ಸ್ವಚ್ಛತೆಯ ಬಗ್ಗೆ ಹೊರಳಿದವು. ಆತ, “ಭಾರತದಲ್ಲಿ ಉತ್ತಮ ಪ್ರತಿಭೆಗಳಿಗೆ ಏನೂ ಕೊರತೆ ಇಲ್ಲ ಆದರೆ ದೇಶ ಮಾತ್ರ ಸಾಕಷ್ಟು ಅಭಿವೃದ್ಧಿಹೊಂದಿಲ್ಲ” ಅಂತ ಅಂದ. ನನ್ನ ಸ್ವಾಭಿಮಾನ ಜಾಗೃತವಾಗಿ ಕೂಡಲೇ ನನ್ನಲ್ಲಿದ್ದ ಅಷ್ಟಿಷ್ಟು ಗೊತ್ತಿದ್ದ ಜ್ಞಾನವನ್ನು ಅವನ ಮುಂದೆ ಪ್ರದರ್ಶಿಸಲು ಹೋದೆ. ನಾನಂದೆ “ಸುಮಾರು ಹತ್ತನೇ ಶತಮಾನದವರೆಗೆ ಭಾರತ ಅತೀ ಅಭಿವೃದ್ಧಿ ಹೊಂದಿದ್ದ ದೇಶವಾಗಿತ್ತು, ಆದರೆ ಬಳಿಕ ಸುಮಾರು ಐನೂರು ವರುಷ ಮೊಘಲರ ಆಕ್ರಮಣ, ಆಮೇಲೆ ಸುಮಾರು ಮುನ್ನೂರು ವರುಷ ಪೋರ್ಚುಗೀಸ್, ಬ್ರಿಟೀಷ್ ಆಕ್ರಮಣದಿಂದಾಗಿ ನಮ್ಮ ಸಂಸ್ಕೃತಿ, ನಾಗರೀಕತೆಯೇ ನಾಶವಾಗಿ ಆಮೇಲೆ ಈಗ ಅಭಿವೃದ್ಧಿಹೊಂದದ ಸ್ಥಿತಿಯಲ್ಲಿದ್ದೇವೆ” ಅಂತ. ಇಷ್ಟು ಹೊತ್ತಿಗಾಗುವಾಗಲೇ ನಾವು ಬೆಂಗಳೂರಿನ ಟ್ರಾಫಿಕಲ್ಲಿ ಸಿಕ್ಕಿಹಾಕಿಕೊಂಡಿದ್ದೆವು. ಅದನ್ನು ನೋಡಿ ಅಂದ “ನೋಡು ನಮ್ಮ ರಾಜಧಾನಿ ಟೋಕಿಯೋದಲ್ಲಿ ಕೂಡಾ ಏರ್ ಪೋರ್ಟಿನಿಂದ ನಗರ ಕೇಂದ್ರಕ್ಕೆ ಬರಲು ನಮಗೆ ಅರ್ಧ ಗಂಟೆ ಸಾಕು.” ಆಗ ನಮ್ಮ ಕಾರು ಪಕ್ಕದಲ್ಲೇ ನಿಂತಿದ್ದ ಒಬ್ಬಾತ ಪಾನ್ ಮಸಾಲಾನೋ ಇನ್ನೇನೋ ತಿಂದು ಅಲ್ಲೇ ರಸ್ತೆಗೆ ಪಚಕ್ಕಂತ ಉಗುಳಿದ!! ಅವನನ್ನು ಗಮನಿಸುತ್ತಿದ್ದ ಈತ ನನ್ನೆಡೆಗೆ ನೋಡಿ “ನೋಡು ಆತ ರಸ್ತೆಯನ್ನು ಎಷ್ಟು ಗಲೀಜು ಮಾಡಿದ? ಇದನ್ನು ಮೊಘಲರು ನಿಮಗೆ ಐನೂರು ವರುಷಗಳ ಹಿಂದೆ ಕಲಿಸಿದ್ರಾ?” ಅಂತ ಕೇಳಿದ! ನನಗೆ ಏನೂ ಹೇಳಲು ತೋಚಲಿಲ್ಲ. ಅಷ್ಟೊತ್ತಾಗಲೇ ರಸ್ತೆಯ ಇನ್ನೊಂದು ಕಡೆಯಿಂದ ಒಬ್ಬ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ ಮುಂದೆ ಬಂದು ಅರ್ಧದಲ್ಲಿ ಸಿಕ್ಕಿಹಾಕಿಕೊಂಡ. ಅವನಿಂದಾಗಿ ಉಳಿದ ವಾಹನಗಳೂ ಸರಾಗ ಚಲಿಸದಂತಾಯಿತು. ಅದನ್ನ ನೋಡಿ ಈತ ಮತ್ತೊಮ್ಮೆ “ನೋಡು ಆತ ಸಂಚಾರ ನಿಯಮವನ್ನು ಪಾಲಿಸಿದೇ ಇದ್ದಿದ್ದರಿಂದಾಗಿ ಉಳಿದವರಿಗೂ ಹೋಗದಂತಾಯಿತು. ಇದ್ದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿ ಹೋಯ್ತು. ಇದೂ ಮುನ್ನೂರು ವರುಷ ಆಳಿದ ಬ್ರಿಟೀಷರು ಕಲಿಸಿದ ಪಾಠವೇ?” ಅಂತ ಕೇಳಿದ.. ನಾನಂತೂ ತಬ್ಬಿಬ್ಬಾಗಿದ್ದೆ. ಅವನು ನನ್ನ ಭುಜವನ್ನು ತಟ್ಟಿ ಹೇಳಿದ “ನೀವು ತಪ್ಪನ್ನು ಇನ್ನೊಬ್ಬರ ಮೇಲೆ ವರ್ಗಾಯಿಸುವುದರಲ್ಲಿ ನಿಸ್ಸೀಮರು. ನಿಮ್ಮ ಜನರಿಗೆ ನಾಗರೀಕತೆಯ ಪ್ರಜ್ಞೆಯಿಲ್ಲ. ನೀವು ನಿಯಮಗಳನ್ನು ಪಾಲಿಸುವುದಿಲ್ಲ, ನಿಮ್ಮ ಪರಿಸರವನ್ನು ಸ್ವಚ್ಛ ಇಟ್ಟುಕೊಳ್ಳಬೇಕೆಂಬ ಪರಿವೆಯೇ ಇಲ್ಲ. ಆದರೆ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತೀರಿ. ಹೋಗಲಿ ಬಿಡು, ಈಗ ನಿಮಗೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷವಾಯಿತು? ಎಪ್ಪತ್ತು? ನಮ್ಮನ್ನು ನೋಡು, 1945ರಲ್ಲಿ ಹಿರೋಶಿಮಾ ಮತ್ತು ನಾಗಸಾಕಿಯ ಮೇಲೆ ಬಿದ್ದ ಬಾಂಬಿನಿಂದ ನಮ್ಮ ಅರ್ಧದಷ್ಟು ದೇಶ ನಾಶವಾಗಿತ್ತು. ಅದಾಗಿ ಇಪ್ಪತ್ತು ವರ್ಷಗೊಳಗಾಗಿ ಎಲ್ಲವನ್ನು ಮತ್ತೆ ಅಭಿವೃದ್ಧಿಪಡಿಸಿ ಮತ್ತೆ ತಲೆ ಎತ್ತಿ ನಿಂತೆವು. ಆದರೆ ನೀವು ಎಪ್ಪತ್ತು ವರ್ಷವಾದರೂ ಇನ್ನೊಬ್ಬರನ್ನು ದೂಷಿಸುವುದರಲ್ಲೇ ಮಗ್ನರಾಗಿದ್ದೀರಿ.” ನನಗೆ ಅಪಮಾನವಾದಂತಾಯಿತು. ಅವನ ಮಾತಿಗೆ ನಿರುತ್ತರನಾಗಿ ಇಡೀ ಪ್ರಯಾಣವನ್ನು ಮೌನದಲ್ಲೇ ಕಳೆದೆ.

ಆದರೆ ಆತ ಹೇಳಿದ ಮಾತೇ ಮನಸ್ಸಿನಲ್ಲಿ ಗುಂಯ್ ಗುಟ್ಟುತ್ತಿತು. ಆತ ಹೇಳಿದ ಮಾತು ಸತ್ಯವಾಗಿತ್ತು. ನಾವು ನಮ್ಮದೇಶ, ಸಂಸ್ಕೃತಿ ಹಾಗೆ ಹೀಗೆ ಅಂತ ಬೊಗಳೆ ಬಿಡುತ್ತಿದೇವೆ. ಆದರೆ ನಮ್ಮ ಸಂಸ್ಕಾರ ಚೆನ್ನಾಗಿದ್ದರೆ ನಮ್ಮಲ್ಲಿ ಲಂಚ, ಭ್ರಷ್ಟಾಚಾರ, ಪರಿಸರ ಮಾಲಿನ್ಯ, ಪ್ರಕೃತಿ ನಾಶ ಇತ್ಯಾದಿ ಸಮಸ್ಯೆಗಳು ಯಾಕಿರಬೇಕಿತ್ತು ಅಲ್ಲವೇ. ಒಂದು ಚಿಕ್ಕ ಸ್ವಚ್ಚತೆ ಕಾಪಾಡೋ ವಿಷಯವನ್ನೇ ನಮಗೆ ಅನುಸರಿಸಲು ಸಾಧ್ಯವಾಗುತ್ತಾ ಇಲ್ಲ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು, ಪಾನ್ ತಿಂದು ಉಗುಳೋದು, ಅದರ ಪ್ಯಾಕೇಟನ್ನು ಎಲ್ಲೆಂದರಲ್ಲಿ ಎಸೆಯುವುದು, ನೀರಿನ ಪ್ಲಾಸ್ಟಿಕ್ ಬಾಟಲ್ ಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು, ಪ್ಲಾಸ್ಟಿಕ್ ಚೀಲಗಳನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಕುವುದು, ಎಲ್ಲೆಂದರಲ್ಲಿ ಶೌಚ ಮಾಡುವುದು, ಪರಿಸರವನ್ನು ಗಲೀಜುಮಾಡುವುದು ಇವುಗಳನ್ನೇ ನಮಗೆ ನಿಯಂತ್ರಣ ಮಾಡಲಿಕ್ಕಾಗದಿದ್ದರೆ ಮತ್ತೆ ಬೇರೆ ವಿಷಯಗಳ ಬಗ್ಗೆ ಮಾತಾಡಲು ನಮಗೆ ನೈತಿಕ ಹಕ್ಕು ಇದೆಯೇ? ನಮ್ಮ ದೇಶ ಅಭಿವೃದ್ಧಿ ಹೊಂದೋದಾದರೂ ಹೇಗೆ ಅಲ್ಲವೆ ಮಿತ್ರರೇ?

ಸೂಚನೆ: ಈ ಮಾಹಿತಿಯು ವಾಟ್ಸಾಪ್‌ನಲ್ಲಿ ಹರಿದಾಡುತ್ತ ಹೆಚ್ಚು ಸಂಚಲನ ಮೂಡಿಸಿತ್ತು. ಇನ್ನಷ್ಟು ಪ್ರಜ್ಞಾವಂತರಿಗೆ(ಹೆಚ್ಚು ಓದಿಕೊಂಡವರು, ಶಿಕ್ಷಣ ವಂಚಿತರು) ಈ ಮಾಹಿತಿಯನ್ನು ಹಂಚಲೇಬೇಕು ಎಂದು ಕನ್ನಡ ಅಡ್ವೈಜರ್ ಕಳಕಳಿ. ನಿಮಗೂ ಈ ಮಾಹಿತಿ ಇಷ್ಟವಾದಲ್ಲಿ ಸಾಮಾಜಿಕ ಜಾಲತಾಣದ ಐಕಾನ್‌ ಮೇಲೆ ಕ್ಲಿಕ್ ಮಾಡಿ ಶೇರ್ ಮಾಡಿ.

ಉತ್ತಮ ಅಲೋಚನೆಗಳು ಕಾರ್ಯರೂಪಕ್ಕೆ ಬಂದಾಗ ಮಾತ್ರ ಅವು ಉತ್ತಮ ಅಲೋಚನೆಗಳಾಗಿ ಉಳಿಯುತ್ತವೆ.

ಲೇಖಕರು – ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್

Source -ವಾಟ್ಸಾಪ್

You may also like