ನೀವು ಎಂದಾದರೂ ಎಷ್ಟು ಕಷ್ಟಪಟ್ಟರು ಕೈಯಲ್ಲಿ ಹಣ ಉಳಿಯುತ್ತಿಲ್ಲ ಎಂದು ಚಿಂತಿಸಿದ್ದಿರಾ..?. ಈ ಸಾರಿ ಕಡಿಮೆ ಖರ್ಚು ಮಾಡಿ ಸ್ವಲ್ಪ ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ಅನಾವಶ್ಯಕ ಖರ್ಚಿನ ತುರ್ತಿಗೆ ಒಳಗಾದ ಅನುಭವ ಇದ್ಯಾ?. ಹಾಗಾದ್ರೆ ಇಲ್ಲಿದೆ ಅವುಗಳಿಗೆ ಔಷಧಿ.
ಮನುಷ್ಯ ಬದುಕು ಸರಾಗವಾಗಿ ನಡೆಸಲು ಬದುಕಿನಲ್ಲಿ ಹಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಣದ ಉಳಿತಾಯ, ಹೂಡಿಕೆ ಮತ್ತು ನಿರ್ವಹಣೆಯಲ್ಲಿ ಹಿಡಿತ ಸಾಧಿಸಿದರೆ ಬದುಕು ನಿಜಕ್ಕೂ ಸುಲಭ ಎನಿಸುತ್ತದೆ. ಹಾಗಾದರೆ ಈ ಹಣದ ಉಳಿತಾಯ ಹೇಗೆ ಮಾಡೋದು ಇಲ್ಲಿದೆ ಉತ್ತರ.
ನೀವು ಪ್ರತಿ ತಿಂಗಳು ಮಾಡಿದ ಖರ್ಚು ವೆಚ್ಚಗಳ ಪಟ್ಟಿ ಮಾಡಿ, ತಿಂಗಳ ಕೊನೆಯಲ್ಲಿ ಅದನ್ನು ಕೂಲಂಕಷವಾಗಿ ಪರಿಶೀಲಿಸಿ. ನಿಜಕ್ಕೂ ಅಗತ್ಯ ವಸ್ತುಗಳಿಗೆ ಹಣ ವ್ಯಯ ಮಾಡಿದ್ದೀರಾ ಪರೀಕ್ಷಿಸಿ. ಅನಗತ್ಯ ಖರ್ಚು ಕಂಡರೆ ಮಂದಿನ ದಿನಗಳಲ್ಲಿ ಅವು ಹೆಚ್ಚಾಗದಂತೆ ಗಮನ ಹರಿಸಿ.
ನಾವು ನಮ್ಮ ಸಂಪತ್ತನ್ನು ರಾತ್ರೋರಾತ್ರಿ ವೃದ್ಧಿಸಲು ಸಾಧ್ಯವಿಲ್ಲ. ನೀವು ನಿಯಮಿತವಾಗಿ ಪಡೆಯುವ ಆದಾಯದ ಸ್ವಲ್ಪ ಭಾಗವನ್ನು ಹೂಡಿಕೆ ಮಾಡಿ. ಪ್ರತಿ ಬಾರಿ ನಿಮ್ಮ ಆದಾಯ ಹೆಚ್ಚಾದಾಗ, ಹೂಡಿಕೆಯ ಮೊತ್ತವನ್ನು ಪ್ರಮಾಣಾನುಗುಣವಾಗಿ ಅಥವಾ ಅದಕ್ಕಿಂತ ಹೆಚ್ಚಿಗೆ ಹೆಚ್ಚಿಸಿಕೊಳ್ಳಿ. ಇದು ಹಣ ಉಳಿತಾಯಕ್ಕೆ ಒಂದು ಒಳ್ಳೆಯ ಆಯ್ಕೆಯಾಗಿದೆ.
50-30-20 ನಮ್ಮ ಜೀವನದಲ್ಲಿ ಹಣ ಉಳಿತಾಯಕ್ಕೆ ಒಂದು ಉತ್ತಮ ಸೂತ್ರ. ನಿಮ್ಮ ಆದಾಯಕ್ಕೆ ಅನುಗುಣವಾಗಿ, ಆದಾಯದ 50% ಅಗತ್ಯಗಳಿಗೆ ಖರ್ಚು ಮಾಡಿ. ಉಳಿತಾಯ ಮತ್ತು ಹೂಡಿಕೆಗಳಿಗೆ ಕನಿಷ್ಠ 20% ಅನ್ನು ನಿಗದಿಪಡಿಸಿ ಮತ್ತು 30% ಅನ್ನು ನಿಮ್ಮ ಆಸೆಗಳಿಗಾಗಿ ಮೀಸಲಿಡಿ.
ನೀವು ದುಬಾರಿಯಾದ ವಸ್ತು ಏನನ್ನಾದರೂ ಖರೀದಿಸಲು ನಿರ್ಧರಿಸಿದ ಕ್ಷಣದಲ್ಲಿ ಮಾಲ್‌ಗೆ ಹೋಗಬೇಡಿ ಅಥವಾ ಆನ್‌ಲೈನ್ ಮೊರೆ ಹೋಗಬೇಡಿ. ನಿಮಗೆ ಅದು ಅಗತ್ಯವಿದ್ದರೆ ಮತ್ತು ನೀವು ಅದನ್ನು ನಿಭಾಯಿಸಬಹುದೇ ಎಂದು ಮೌಲ್ಯಮಾಪನ ಮಾಡಿಕೊಂಡ ಮೇಲೆ. ಹೆಚ್ಚು ಸೂಕ್ತವಾದ ಉತ್ಪನ್ನವನ್ನು ಆಯ್ಕೆಮಾಡುವ ಮೊದಲು ವಿವಿಧ ಆಯ್ಕೆಗಳನ್ನು ಪರಿಶೀಲಿಸಿ. ಯೋಜಿತ ಖರೀದಿಯ ಬಗ್ಗೆ ಯೋಚಿಸಿ.
ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳಿಂದ ದೂರವಿರಿ. ಏಕೆಂದರೆ ಅನಗತ್ಯ ಆಕರ್ಷಣೆಗೆ ನೀವು ಗುರಿಯಾಗುವ ಸಾಧ್ಯತೆ ಹೆಚ್ಚು. ಇದು ನಿಮ್ಮನ್ನು ಹಣಕಾಸಿನ ವಿಷಯವಾಗಿ ಇಕ್ಕಟ್ಟಿಗೆ ಸಿಲುಕಿಸಬಹುದು.
ನಿಮ್ಮ ಅತ್ಯುತ್ತಮ ಹೂಡಿಕೆ “ನೀವು”. ನಿಮ್ಮ ಜ್ಞಾನ, ನಿಮ್ಮ ಕೌಶಲ್ಯದ ಮೇಲೆ ನಿಮ್ಮ ಹಣಕಾಸಿನ ಅಂಶವನ್ನು ಹೆಚ್ಚು ಹೂಡಿಕೆ ಮಾಡಿ. ಸ್ವ-ಆರೈಕೆ, ಆತ್ಮ ವಿಶ್ವಾಸ ಮತ್ತು ತೃಪ್ತಿಗಾಗಿ ಹಣವನ್ನು ಖರ್ಚು ಮಾಡಿ. ಏಕೆಂದರೆ ಇವು ನಿಮ್ಮ ಮನಸ್ಥಿತಿಯ ಮೇಲೆ ಅಧಿಕ ಪರಿಣಾಮ ಬೀರುತ್ತವೆ. ಹಾಗೆ ನಿಮ್ಮ ಒತ್ತಡದ ಬದುಕಿನಲ್ಲಿ ಪರೋಕ್ಷವಾಗಿ ನಿಮ್ಮ ಆದಾಯ ಹಾಗೂ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ.
ಅನಿರೀಕ್ಷಿತ ಆರೋಗ್ಯ-ಸಂಬಂಧಿತ ವೆಚ್ಚಗಳಿಗಾಗಿ ನಿಮ್ಮನ್ನು ಮತ್ತು ನಿಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕವರ್ ಮಾಡಲು ಸೂಕ್ತವಾದ ವೈದ್ಯಕೀಯ ವಿಮಾ ಪಾಲಿಸಿಯನ್ನು ಪಡೆದುಕೊಳ್ಳಿ. ಏಕೆಂದರೆ ಆರೋಗ್ಯ ವಿಮಾ ಪಾಲಿಸಿಯಿಲ್ಲದೆ, ಗಂಭೀರವಾದ ಅನಾರೋಗ್ಯ, ಅಪಘಾತ ಅಥವಾ ಆಸ್ಪತ್ರೆಗೆ ದಾಖಲು ನಿಮ್ಮ ಆರ್ಥಿಕತೆಯನ್ನು ದುರ್ಬಲಗೊಳಿಸಬಹುದು. ದೈಹಿಕ ಮತ್ತು ಮಾನಸಿಕ ಅನಾನುಕೂಲತೆಯ ಹೊರತಾಗಿ, ನೀವು ಆರ್ಥಿಕ ಪ್ರಕ್ಷುಬ್ಧತೆಯನ್ನು ಸಹ ಅನುಭವಿಸಬೇಕಾಗುತ್ತದೆ.
ಈ ಮೇಲಿನವು ನಮ್ಮ ಹಣ ಉಳಿತಾಯಕ್ಕೆ ಇರುವ ಉತ್ತಮ ಮಾರ್ಗ ಸೂಚಿಗಳು. ಇವುಗಳನ್ನು ಹೊರತುಪಡಿಸಿ, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ, FD, RD, ಪಾಲಿಸಿಗಳ ಮೇಲೆ ಹೂಡಿಕೆ ಮತ್ತು ಉಳಿತಾಯ ಖಾತೆ ತೆರೆಯುವುದು ಹಣ ಉಳಿತಾಯಕ್ಕೆ ಉತ್ತಮ ಸಲಹೆಗಳಾಗಿವೆ.