Home » ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು? ಅದರಿಂದ ಫಲಗಳು ಏನು?

ಸ್ವರ್ಣಗೌರಿ ವ್ರತ ಹೇಗೆ ಮಾಡಬೇಕು? ಅದರಿಂದ ಫಲಗಳು ಏನು?

by manager manager

ಯಾವ ಹಬ್ಬಕ್ಕೂ ಇಲ್ಲದ ಒಂದು ವಿಶೇಷತೆ ಈ ಗೌರೀ ಗಣೇಶ ಹಬ್ಬಗಳಿಗಿವೆ. ಅದೇನೆಂದರೆ, ಆ ಜಗದಂಬಿಕೆಯಾದ, ಹರನ ನಲ್ಮೆಯ ಮಡದಿ ಪಾರ್ವತೀದೇವಿ ತಾನು ಸಡಗರದಿಂದ ತಾನಾಗಿಯೇ ನಮ್ಮ ಮನೆಗೆ ಬಂದಿರುತ್ತಾಳೆ. ಪಾರ್ವತೀ ದೇವಿ, ಈ ಭೂಮಿಯ ಒಡತಿ. ಸಮಗ್ರ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಈ ಶಂಕರನ ಪತ್ನಿಗೆ ಪೃಥ್ವೀ ಎಂದೂ ಹೆಸರಿದೆ. (ಪೃಥ್ವೀ ಎಂದರೆ ವ್ಯಾಪಿಸಿರುವವಳು ಎಂದರ್ಥ).

ಅರಸರೇ ತವರು ಮನೆಗ್ಹೋಗಿ ಬರುವೆ ಈ ವರ್ಷ ಗೌರಿವ್ರತ ಸೆಪ್ಟೆಂಬರ್ ೧೨ಕ್ಕೆ ಬಂದಿದೆ. ಈ ಸ್ವರ್ಣಗೌರಿ ವ್ರತವನ್ನು ಮಹಿಳೆಯರು ಹಬ್ಬವೆಂದೇ ಕರೆಯಲಾಗುವುದು. ಹೆಣ್ಣು ಮಕ್ಕಳು ಈ ಹಬ್ಬ ಮಾಡಿದರೆ ಗೌರಿ ಮಾತೆ ಸಕಲ ಸೌಭಾಗ್ಯ ನೀಡುತ್ತಾಳೆ ಎಂಬ ನಂಬಿಕೆ ಇದೆ.

ಹಿನ್ನಲೆ ಕತೆ :
ಗಣೇಶ ಗೌರೀವಲ್ಲಭ ನುಡಿಯುತ್ತಾನೆ, “ನೀ ಹೋದರೆ ನನ್ನನ್ನು ನೋಡಿಕೊಳ್ಳುವರ್ಯಾರು” ಎಂದು. “ಜಗದ ರಕ್ಷಣೆಯನ್ನು ಮಾಡುವ ನಿಮ್ಮನ್ನು ನಾನು ನೋಡಿಕೊಳ್ಳಬೇಕೆ, ಮೂರು ದಿನದ ಮಟ್ಟಿಗೆ ಕಳುಹಿಸಿಕೊಡಿ” ಎಂದು ಪ್ರಾರ್ಥಿಸುತ್ತಾಳೆ. ಅಲ್ಲಿಗೆ ಹೋದರೇ ಇಲ್ಲಿ ನನಗಾರುಂಟು ಚೆಲ್ವಕಂಗಳೆ ನೀ ತಿಳಿದು ಪೇಳೆ ಎಲ್ಲ ಯಾತಕ್ಕೆ ಸ್ವಾಮಿ ಮೂರು ದಿನವಿದ್ದು ಮ್ಮಲಡಿಯ ಸೇವೆಗೆ ತಿರುಗಿ ನಾ ಬರುವೆ ಆಗ ರುದ್ರದೇವರು, ಹೋಗಿ ಬಾ ಎಂದು ಹೇಳುವ ರುದ್ರದೇವರು, ತನ್ನ ಪ್ರೇಮದ ಮಡದಿಯ ಮೇಲಣ ಪ್ರೀತಿಯಿಂದಲೂ, ಅವಳಿಗೆ ತವರಿನ ಮೇಲೆ ಇರುವ ಅಭಿಮಾನವನ್ನು ತಿಳಿದಿದ್ದರಿಂದಲೂ ಮತ್ತೊಂದು ಮಾತನ್ನು ಹೇಳುತ್ತಾರೆ.

“ಮೂರು ದಿನ ಐದು ದಿನ ಮೀರಿದರೆ ಏಳುದಿನ ದಾರಿ ನೋಡುತಲಿರುವೆ ನೀರೆ ನೀ ಹೋಗೆಂದ ಕರಿಮುಖನ ಒಡಗೊಂಡು ಕರೆವುದಕೆ ನಾ ಬರುವೆ ಹಿರಿದುಪಚಾರವೇನುಂಟು ನೀ ತಿಳಿದು ಪೇಳೆ” ಮೂರು ದಿನ ಅಂತಷ್ಟೇ ಅಲ್ಲ, ಐದು ದಿನ ಅಥವಾ ಏಳು ದಿನವಾದರೂ ಇದ್ದು ಬಾ. ನೀ ಹೊರಡು, ನಾನು ಗಣಪತಿಯ ಸಮೇತನಾಗಿ ಬರುತ್ತೇನೆ, ನಿನ್ನನ್ನು ಕರೆದೊಯ್ಯಲು ಎಂದು ಹೇಳುತ್ತಾನೆ.

ಹೀಗೆ ಹೇಳಿ ವೃಷಭವನ್ನೇರಿ, ಪಾರ್ವತಿಯನ್ನೂ ಕೂಡಿಸಿಕೊಂಡು ಮಾವನ ಮನೆಗೆ ಮೇನಕೆ, ಹಿಮವಂತರ ಮನೆಗೆ ಬಿಟ್ಟು ಬರುತ್ತಾರೆ ರುದ್ರದೇವರು. ಹೆಂಡತಿಯನ್ನು ಬೀಳ್ಕೊಡುವಾಗ ವರಸಾಲಿಗ್ರಾಮದ ನರಸಿಂಹಮೂರ್ತಿಯ ಪರಮಹರಭಕ್ತರ ಮನೆಯೊಳಗಿದ್ದು ಸಿರಿಯ ಸಂಪತ್ತುಗಳ ವರವನೇ ನೀಡಿ ಸಡಗರದಿಂದ ನೀನೋಡಾಡಿ ಬೇಗ ಬಾರೇ ಎಂದು ಆದೇಶಿಸುತ್ತಾರೆ. ಸಾಲಿಗ್ರಾಮದ ಸಾನ್ನಿಧ್ಯವಿರುವ, ನರಸಿಂಹನನ್ನು ಅರ್ಥಾತ್ ಶ್ರೀಹರಿಯನ್ನು ಆರಾಧಿಸುವ ಶ್ರೇಷ್ಠ ಶಿವಭಕ್ತರ ಮನೆಯಲ್ಲಿ ನೀನಿದ್ದು ಅವರ “ಬಾಳ ಬಡತನವ ಬಿಡಿಸಿ ಐಶ್ವರ್ಯಗಳ ಕೊಟ್ಟು” ಬದುಕಿನ ಬವಣೆಗಳನ್ನು ಕಳೆದು, ಸಿರಿ ಸಂಪತ್ತುಗಳನ್ನು ಅವರಿಗೆ ಕರುಣಿಸಿ, ಪ್ರೀತಿಯ ಮಗಳಾಗಿ ಅವರ ಮನೆಯಲ್ಲಿ ಓಡಾಡಿಕೊಂಡು ನೀನು ಬೇಗ ಬಂದುಬಿಡು ಎಂದು ಭಕ್ತರಿಗೆ ವರಪ್ರದಳಾಗುವಂತೆ ತಿಳಿಸುತ್ತಾರೆ. (ಇದೇ ಕಾರಣಕ್ಕೆ ಸ್ವರ್ಣಗೌರಿಯ ವ್ರತದಂದು ಸಾಂಪ್ರದಾಯವನ್ನು ಬಲ್ಲ ಸ್ಮಾರ್ತರ ಮನೆಗಳಲ್ಲಿ ಮೊದಲಿಗೆ ನರಸಿಂಹರೂಪದ ಶ್ರೀಹರಿಗೆ ಪೂಜೆ ಸಲ್ಲಿಸಿ ಆ ಬಳಿಕ ಸ್ವರ್ಣಗೌರಿಯನ್ನು ಪೂಜಿಸುತ್ತಾರೆ) [ಗೌರಿ ಗಣೇಶ ಮೂರ್ತಿಗಳ ಸೊಬಗು ಸೌಂದರ್ಯ] ಆ ರುದ್ರದೇವರಿಗೆ ತನ್ನ ನಲ್ಮೆಯ ಮಡದಿ ಪಾರ್ವತಿಯ ಮೇಲೆ ಅದೆಷ್ಟು ಪ್ರೀತಿಯೆಂದರೆ ಅವಳನ್ನು ಕರೆತರಲು ಮಾರನೆಯ ದಿವಸವೇ ಗಣಪತಿಯನ್ನು ಕೊಟ್ಟು ಕಳುಹಿಸುತ್ತಾರೆ. ಹೀಗಾಗಿ ತೃತೀಯಾ ತಿಥಿಯಂದು ಗೌರೀ ಹಬ್ಬ.

ಅದರ ಮಾರನೆಯ ದಿವಸ ಚತುರ್ಥೀಯಂದು ಗಣಪತಿಯ ಹಬ್ಬ. ತಾಯಿಯ ಮನೆಗೆ ಮಗಳು ಬಂದಂತೆ, ಸಮಗ್ರ ಜಗತ್ತಿನ ತಾಯಿಯಾದ ಗೌರೀದೇವಿ ನಮ್ಮ ಮನೆಗೆ ಮಗಳಾಗಿ ಬರುತ್ತಾಳೆ. ಮನೆಗೆ ಬಂದ ನಮ್ಮ ಮಗಳು ಹೊರಡುವಾಗ ನಿಮ್ಮ ಮನೆ ಚೆನ್ನಾಗಿರಲಿ ಎಂದು ಹರಸಿದರೇ, ತವರು ಮನೆ ಸುಖ ಸಂತೋಷಗಳಿಂದ, ಸಿರಿ ಸಂಪತ್ತುಗಳಿಂದ ಕೂಡುತ್ತದೆ, ಅಂತಹುದರಲ್ಲಿ ಜಗತ್ಸ್ವಾಮಿನಿಯಾದ ಪಾರ್ವತೀದೇವಿ ಅನುಗ್ರಹ ಮಾಡಿದಲ್ಲಿ ನಾವು ಸಾತ್ವಿಕವಾದ ಸಂಪತ್ತಿನಿಂದ ಭರಿತರಾಗುತ್ತೇವೆ, ಸಾಧನೆಯ ಮಾರ್ಗದಲ್ಲಿ ನಡೆಯುತ್ತೇವೆ. ಹೀಗಾಗಿ, ಈ ಸ್ವರ್ಣಗೌರೀವ್ರತವನ್ನು ವಿನಾಯಕವ್ರತವನ್ನು ಅತ್ಯಂತ ಶ್ರದ್ಧೆಯಿಂದ ಮಾಡಬೇಕು. ಶುದ್ಧವಾದ ಕ್ರಮದಲ್ಲಿ ಮಾಡಬೇಕು.

ಶ್ರೀಹರಿ-ಗುರುಗಳು ಮೆಚ್ಚುವಂತೆ ಆಡಂಬರವಿಲ್ಲದೇ, ಭಕ್ತಿಯಿಂದ ಮಾಡಬೇಕು. ಮದುವೆಯಾಗಿ ಹೋಗಿ ಗಂಡನ ಮನೆಯನ್ನು ಬೆಳಗುತ್ತಿರುವ ಸಂತಸದ ಚಿಲುಮೆಯಾದ ಮಗಳು ಬಂದಾಗ ಎಷ್ಟು ಸಂತೋಷ ಸಡಗರ ಪಡುತ್ತೇವೆಯೋ ಅದರ ಸಾವಿರಪಟ್ಟು ಸಂತೋಷ ಸಡಗರದಿಂದ ನಾವು ಗೌರೀಹಬ್ಬವನ್ನು ಆಚರಿಸಬೇಕು. ಕಾರಣ, ಜಗದಂಬೆ ಮಗಳಾಗಿ ಬರುತ್ತಿದ್ದಾಳೆ, ವರಗೌರಿಯಾಗಿ ಬರುತ್ತಿದ್ದಾಳೆ. [ಗಣೇಶನನ್ನು ಒಲಿಸಿಕೊಳ್ಳಲು ೭ ವಿಧಾನಗಳು] ತೃತೀಯಾ ತಿಥಿಯೇ ಯಾಕೆ ಸ್ವರ್ಣಗೌರೀವ್ರತ? ಈ ಪ್ರಶ್ನೆಗೆ ಶ್ರೀ ವರಾಹದೇವರು ವರಾಹಪುರಾಣದಲ್ಲಿ ನಮಗೆ ಉತ್ತರ ನೀಡಿದ್ದಾರೆ.

ಪರಮಾತ್ಮ ಒಂದೊಂದು ತಿಥಿಯನ್ನು ಒಬ್ಬೊಬ್ಬ ದೇವತೆಗೆ ನೀಡಿದಾಗ ತನ್ನ ಪ್ರೀತಿಯ ತಂಗಿಯಾದ ಪಾರ್ವತಿಗೆ (ಪರಮಾತ್ಮನ ಯಜ್ಞ, ಕಪಿಲ ರೂಪಗಳಿಗೆ ಸತೀರೂಪದ ಗೌರೀದೇವಿ ತಂಗಿಯಾಗಬೇಕು. ಯಜ್ಞ ಮತ್ತು ಕಪಿಲನ ಅಮ್ಮಂದಿರು ಸತಿಯ ಅಮ್ಮ ಪ್ರಸೂತಿಯ ಅಕ್ಕಂದಿರು) “ಪ್ರಾದಾಂ ತೃತೀಯಾಂ ಪಾರ್ವತ್ಯೈ ಗಣೇಶಾಯ ಚತುರ್ಥಿಕಾಮ್” ತನ್ನ ತಂಗಿಯಾದ ಪಾರ್ವತಿಗೆ ತೃತೀಯಾ ತಿಥಿ ನೀಡಿದ ಕಾರಣಕ್ಕೇ, ಕಾರ್ತೀಕ ಶುದ್ಧ ತೃತೀಯಾದಂದು (ದೀಪಾವಳಿಯ ನಂತರ) ಅಣ್ಣತಮ್ಮಂದಿರು ಅಕ್ಕತಂಗಿಯರ ಮನೆಗೆ ಹೋಗಿ ಅವರ ಕೈಯಿಂದ ಮಾಡಿದ ಅಡಿಗೆಯನ್ನು ಉಂಡು ಅವರಿಗೆ ಉಡುಗೊರೆ ನೀಡಿ ಬರುತ್ತಾರೆ. ಒಟ್ಟಾರೆ ತೃತೀಯಾ ತಿಥಿ ಪಾರ್ವತೀದೇವಿಯ ಅಧೀನ. ಪ್ರತೀಮಾಸದ ತೃತೀಯಾದಂದೂ ಗೌರಿಯ ಆರಾಧನೆಯನ್ನು ವಿಶೇಷವಾಗಿ ಮಾಡಬೇಕು. ಭಾದ್ರಪದಮಾಸದ ತೃತೀಯಾದಂದು ಸ್ವರ್ಣಗೌರೀವ್ರತವನ್ನು ಆಚರಿಸಬೇಕು.

ಕೈಲಾಶ ವಾಸಿ ಪರಮೇಶ್ವರ ಪತ್ನಿ ಗೌರಿ ವರ್ಷಕೊಮ್ಮೆ ತನ್ನ ತವರಾದ ಭೂಮಿಗೆ ಬಂದು ಪೂಜೆ ಸ್ವೀಕರಿಸಿ ಬಾಗಿನ ಪಡೆದು ಪುತ್ರನ ಜತೆ ಕೈಲಾಶಕ್ಕೆ ಮರಳುತ್ತಾಳೆ ಎಂಬ ಕತೆಯಿದೆ.
ಸ್ವರ್ಣಗೌರಿ ವ್ರತ ಹೆಸರೇ ಸೂಚಿಸುವಂತೆ ಸ್ವರ್ಣ ಬಣ್ಣದಲ್ಲಿ ಹೊಳೆಯುವ ಗೌರಿಯ ಪೂಜಿಸುವುದು ಎಂದರ್ಥ.

• ಸ್ವರ್ಣಗೌರಿ ವ್ರತದ ವಿಧಿ ವಿಧಾನಗಳು : ಈ ದಿನ ಹೆಣ್ಣು ಮಕ್ಕಳು ಸ್ನಾನ ಮಾಡಿ, ಮಡಿಯುಟ್ಟು ದೇವರ ಕೋಣೆ ಅಥವಾ ಸ್ವರ್ಣಗೌರಿಯನ್ನು ಕೂರಿಸುವ ಸ್ಥಳವನ್ನು ರಂಗೋಲಿಯಿAದ ಅಲಂಕರಿಸಬೇಕು. ಒಂದು ಮಣೆ ಇಟ್ಟು ಅದರ ಮೇಲೆ ಹೊಸ ರವಿಕೆ ಬಟ್ಟೆ ಹಾಸಿ ಅದರ ಮೇಲೆ ಇಟ್ಟೆ ಇಟ್ಟು, ಅರಿಶಿಣಕ್ಕೆ ಹಾಲು ಹಾಕಿ ಅದರಿಂದ ಗೋಪುರ ರೀತಿ ಮಾಡಿ ಇಡಬೇಕು. ಕನ್ನಡಿ, ಕಲಶ ಇಡಬೇಕು, ೩ ರವಿಕೆಯನ್ನು ತ್ರಿಕೋನ ಆಕಾರದಲ್ಲಿ ಮಡಚಿ ಇಡಬೇಕು.

• ಗೌರಿಗೆ ಬಾಗಿನ ತಯಾರಿಸುವುದು ಹೇಗೆ? ಬಿದಿರಿನ ಮೊರವನ್ನು ಸ್ವಚ್ಛ ಮಾಡಬೇಕು, ಅದಕ್ಕೆ ಅರಿಶಿಣ, ಕುಂಕುಮ ಹಚ್ಚಿ ಒಣಗಿಸಿ, ನಂತರ ಅದರ ಮೇಲೆ ಬಾಳೆ ಎಲೆ ಹಾಸಿ, ಅದರಲ್ಲಿ ಧಾನ್ಯಗಳು, ತೆಂಗಿನಕಾಯಿ, ಗಾಜಿನ ಬಳೆ, ಕಿವಿಯೋಲೆ, ೫ ಬಗೆಯ ಹಣ್ಣುಗಳು, ವೀಳ್ಯದೆಲೆ, ಅಡಿಕೆ, ಕರಿಮಣಿ ಹೀಗೆ ಬಾಗಿನ ಸಾಮಗ್ರಿಗಳನ್ನು ಜೋಡಿಸಿ, ನಂತರ ಮತ್ತೊಂದು ಮೊರದಿಂದ ಅದನ್ನು ಮುಚ್ಚಬೇಕು.

• ಗೌರಿ ಮೂರ್ತಿಯನ್ನು ಮಾವಿನ ತಳಿರು ತೋರಣಗಳಿಂದ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಬೇಕು. ನಂತರ ಮುತ್ತೈದೆಯರು ತಮ್ಮ ಮಣಿ ಕಟ್ಟುಗಳಿಗೆ ಹದಿನಾರು ಗಂಟುಗಳಿರುವ ಗೌರಿ ದಾರವನ್ನು ಕಟ್ಟಿಕೊಳ್ಳುತ್ತಾರೆ.

• ಈ ಗೌರಿ ದಾರ ಕಟ್ಟಿದರೆ ಮಗುವನ್ನು ಬಯಸುವ ಮುತ್ತೈದೆಯರಿಗೆ ಮಕ್ಕಳಾಗುವುದು ಎಂಬ ನಂಬಿಕೆ ಇದೆ. ಈ ದಾರ ಕಟ್ಟಿದರೆ ಮುತ್ತೈದೆಯರಿಗೆ ಸೌಭಾಗ್ಯ ಉಂಟಾಗುವುದು ಎಂಬ ನಂಬಿಕೆ ಇದೆ.

• ಈ ಸ್ವರ್ಣಗೌರಿಯನ್ನು ಮನೆಯಲ್ಲಿ ಪೂಜಿಸಿದವರು ಆಕೆಯ ಮಗ ಗಣೇಶ ಬಂದ ಬಳಿಕ, ಆತನನ್ನು ಪೂಜಿಸಿ, ಗಣೇಶನ ಜತೆ ಗೌರಿಯನ್ನು ಕಳುಹಿಸಿಕೊಡಲಾಗುವುದು.

ವಿಷ್ಣು ಮಂತ್ರದಲ್ಲಿನ ಮಹತ್ವವೇನು? ಪಠಿಸುವುದರಿಂದ ಆಗುವ ಪ್ರಯೋಜನಗಳೇನು?