
ದೀರ್ಘಾವಧಿ ಕಲುಷಿತ ಗಾಳಿ ಸೇವಿಸಿದ್ದರಿಂದ ಹೃದಯಘಾತ, ಶ್ವಾಸಕೋಶದ ಕ್ಯಾನ್ಸರ್, ಮಧುಮೇಹಕ್ಕೆ ಗುರಿಯಾಗಿ ಸಂಭವಿಸಿದ ಜನರ ಸಾವು 50 ಲಕ್ಷ. ಭಾರತ ಮತ್ತು ಚೀನಾದಲ್ಲಿ ಪಿ.ಎಂ 2.5 ಮಟ್ಟಕ್ಕಿಂತ ಹೆಚ್ಚು ಪ್ರಮಾಣದ ಮಾಲಿನ್ಯಕಾರಕ ಕಣಗಳಿಂದಾಗಿ ಸಂಭವಿಸಿದ ಸಾವು 30 ಲಕ್ಷ.
ಅಮೆರಿಕದ ಆರೋಗ್ಯ ಪರಿಣಾಮ ಸಂಸ್ಥೆ ವಾಯುಮಾಲಿನ್ಯ ಕುರಿತು ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಗ್ಲೋಬಲ್ ಏರ್ 2019’ ಜಾಗತಿಕ ವರದಿಯಿಂದ ಮೇಲಿನ ಅಂಕಿ ಅಂಶಗಳು ದೊರೆತಿವೆ. ಅಲ್ಲದೇ ‘ಭಾರತದಲ್ಲಿ ಸಾವುಗಳು ಹೆಚ್ಚಾಗಲು ಕಾರಣವಾಗುವ ಅಂಶಗಳಲ್ಲಿ ವಾಯುಮಾಲಿನ್ಯ ಮೂರನೇ ಸ್ಥಾನದಲ್ಲಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.
ಭಾರತದಲ್ಲಿ 2017 ಒಂದೇ ವರ್ಷದಲ್ಲಿ 12 ಲಕ್ಷಕ್ಕೂ ಹೆಚ್ಚು ಜನತೆ ವಾಯುಮಾಲಿನ್ಯದಿಂದ ಉಂಟಾಗುವ ರೋಗಗಳಿಗೆ ತುತ್ತಾಗಿ ಸಾವಿಗೀಡಾಗಿದ್ದಾರೆ. ವಾಯುಮಾಲಿನ್ಯದಿಂದ ಸಂಭವಿಸಿದ ಸಾವುಗಳಲ್ಲಿ ಪ್ರಪಂಚದಾದ್ಯಂತ ಶೇಕಡ ಅರ್ಧಕ್ಕಿಂತ ಹೆಚ್ಚು ಭಾರತ ಮತ್ತು ಚೀನಾದಲ್ಲಿಯ ಜನರು ಎನ್ನುವುದು ಗಮನಾರ್ಹ.
ಅಪೌಷ್ಟಿಕತೆ, ಮದ್ಯಸೇವನೆ, ದೈಹಿಕ ಜಡತ್ವ ಹೆಚ್ಚಾಗಿ ಸಾವಿನ ಅಪಾಯ ಒಡ್ಡುತ್ತವೆ. ಆದರೆ ಇವುಗಳಿಗಿಂತ ಹೆಚ್ಚು ಅಪಾಯ ಮತ್ತು ತೊಂದರೆ ಒಡ್ಡುವುದು ವಾಯುಮಾಲಿನ್ಯ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.
ವಾಯುಮಾಲಿನ್ಯ ಕಡಿಮೆಗೆ ಭರವಸೆ ನೀಡಲಿರುವ ಅಂಶಗಳು
ದೇಶದಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉಜ್ವಲ, ಅಡುಗೆ ಅನಿಲ ಯೋಜನೆ, ರಾಷ್ಟ್ರೀಯ ವಾಯು ಶುದ್ಧೀಕರಣ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದರೆ ಮುಂದಿನ ವರ್ಷಗಳಲ್ಲಿ ವಾಯುಮಾಲಿನ್ಯ ಪ್ರಮಾಣವನ್ನು ನಿಧಾನವಾಗಿಯಾದರೂ ತಗ್ಗಿಸಬಹುದು. ಹಾಗೂ ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡಬಹುದು ಎಂದು ಅಮೆರಿಕದ ಆರೋಗ್ಯ ಪರಿಣಾಮ ಸಂಸ್ಥೆ ಉಪಾಧ್ಯಕ್ಷ ರಾಬರ್ಟ್ ಒ ಕೀಪ್ ಹೇಳಿದ್ದಾರೆ.
