Home » ಬುಕ್ ಬ್ಯಾಂಕ್ ವಿದ್ಯಾರ್ಥಿಸ್ನೇಹಿಯಾಗಿದೆ: ಹಾಲಪ್ಪ

ಬುಕ್ ಬ್ಯಾಂಕ್ ವಿದ್ಯಾರ್ಥಿಸ್ನೇಹಿಯಾಗಿದೆ: ಹಾಲಪ್ಪ

by manager manager

ಕೆ.ಆರ್.ಪೇಟೆ: ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಬುಕ್ ಬ್ಯಾಂಕು ವಿದ್ಯಾರ್ಥಿ ಸ್ನೇಹಿಯಾಗಿದೆ ಎಂದು ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತ್ರದ ಉಪನ್ಯಾಸಕರಾದ ಹಾಲಪ್ಪ ಅಭಿಪ್ರಾಯ ಪಟ್ಟರು.


ಬಲ್ಲೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬುಕ್ ಬ್ಯಾಂಕ್ ಯೋಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೆಚ್ಚುವರಿಯಾಗಿ ಗ್ರಂಥಾಲಯ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹಾಲಪ್ಪನವರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷ ಹೊಂದಾಣಿಕೆಯಿಂದ ಕೂಡಿತ್ತು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಜ್ಞಾನವು ಜಗತ್ತನ್ನು ಆಳುತ್ತದೆ. ಅಂಥ ಜ್ಞಾನವನ್ನು ಪಡೆಯುವುದು ಶಿಕ್ಷಕರು ಮತ್ತು ಪಠ್ಯಪುಸ್ತಕಗಳಿಂದ. ವಿದ್ಯಾರ್ಥಿಗಳು ಈ ಪಠ್ಯಪುಸ್ತಕಗಳನ್ನು ಓದಿ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ಪ್ರಾಂಶುಪಾಲರ ಆಶಯವನ್ನು ಸಾರ್ಥಕಗೊಳಿಸಿರೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ .ದಿನೇಶ್ ರವರು ಗ್ರಂಥಾಲಯದಲ್ಲಿ ಪಠ್ಯೇತರ ಪುಸ್ತಕಗಳು ದೊರೆಯಲಿದ್ದು ಅವು ಪಠ್ಯಕ್ಕೆ ಪೂರಕವಾದ ಮಾಹಿತಿಗಳ ಮೂಲಕ ಜ್ಞಾನದ ಕಣಜವನ್ನು ತುಂಬಿದರೆ ಬುಕ್ ಬ್ಯಾಂಕ್ ಎಂಬುದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಒದಗಿಸುವಂಥ ಯೋಜನೆಯಾಗಿದೆ. ಅದಕ್ಕಾಗಿ ಆಸ್ಟ್ರೇಲಿಯಾ ನಿವಾಸಿಯಾದ ಎಂ.ಎ.ಶ್ರೀನಿವಾಸನ್ ರವರಿಂದ 8000 ರೂಪಾಯಿಗಳನ್ನು ಪಡೆದು ಪ್ರತ್ಯೇಕವಾದ ಬೀರನ್ನು ಹಾಗೂ ಮೈಸೂರಿನ ಎನ್.ಜೆ.ಎಸ್.ಚಾರಿಟಬಲ್ ಟ್ರಸ್ಟ್, ಹೆಚ್.ವಿ.ಮಂಜುನಾಥ್, ಶಂಕರ್ ಸಿಂಗ್ ಹಾಗೂ ಜ್ಯೋತಿ ಎಂಬ ಕೊಡುಗೈ ದಾನಿಗಳಿಂದ 7500 ರೂಗಳ ಪಠ್ಯಪುಸ್ತಕಗಳನ್ನು ಖರೀದಿಸಲಾಗಿರುವ ವಿಷಯವನ್ನು ತಿಳಿಸಿ ಆ ಮಹನೀಯರಿಗೆ ಈ ಸುಸಂದರ್ಭದಲ್ಲಿ ಕಾಲೇಜಿನ ಪರವಾಗಿ ವಂದನೆಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು, ನಾವು ಜ್ಞಾನವಂತರಾದರೆ ಮಾತ್ರ ಬೇರೆಯವರನ್ನು ಜ್ಞಾನವಂತರನ್ನಾಗಿ ಮಾಡಬಹುದು. ಅದಕ್ಕಾಗಿ ಆಳವಾದ ಅಧ್ಯಯನದಲ್ಲಿ ತೊಡಗಿರೆಂದು ಕರೆ ನೀಡಿದರು.
ವರ್ಗಾವಣೆಯಾದ ಉಪನ್ಯಾಸಕರಾದ ಬಿ.ಜಗದೀಶ್ ಮತ್ತು ಚಿಕ್ಕಣ್ಣಯ್ಯ ರವರಿಗೆ ಬೀಳ್ಕೊಡಗೆಯನ್ನು ಸಹಾ ನೀಡಲಾಯಿತು .

ಕಾರ್ಯಕ್ರಮದಲ್ಲಿ ಸಿ ಡಿ ಸಿ ಉಪಾಧ್ಯಕ್ಷರಾದ ಬಿ.ಟಿ. ಪ್ರಕಾಶ್, ಸದಸ್ಯರಾದ ರಾಮಕೃಷ್ಣ, ಹಿರಿಯ ಉಪನ್ಯಾಸಕರಾದ ಹೆಚ್ ಎನ್ ರಂಗರಾಜು, ಜೆ.ಜಿ.ರಾಜೇಗೌಡ, ಆರ್.ಬೃಂದವೀಣಾ, ಚೈತ್ರ, ಅನಿಲ್ ಕುಮಾರ್, ಶ್ರೀಕಾಂತ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮನಸ್ವಿ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಅಂಕಿತಾ ಸ್ವಾಗತಿಸಿದರೆ, ಅಮೃತ ವಂದಿಸಿದರು. ಭಾಗ್ಯ ನಿರೂಪಿಸಿದರು.

You may also like