Home » ಸೈಬರ್ ಸೆಕ್ಯುರಿಟಿ: ಡೆಲ್‌ ಜತೆ ಒಡಂಬಡಿಕೆಗೆ ಸರಕಾರದ ಅಂಕಿತ

ಸೈಬರ್ ಸೆಕ್ಯುರಿಟಿ: ಡೆಲ್‌ ಜತೆ ಒಡಂಬಡಿಕೆಗೆ ಸರಕಾರದ ಅಂಕಿತ

by manager manager

ವಿದ್ಯಾರ್ಥಿಗಳು, ನವೋದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಸೈಬರ್ ತಿಳಿವಳಿಕೆಗೆ ಅವಕಾಶ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳು, ನವೋದ್ಯಮ ವಲಯ ಮತ್ತು ಸರಕಾರಿ ಕಚೇರಿಗಳಲ್ಲಿ ಸೈಬರ್ ಸೆಕ್ಯುರಿಟಿ ಕುರಿತು ಅರಿವು ಮೂಡಿಸುವ ಉದ್ದೇಶದ ಒಡಂಬಡಿಕೆಗೆ ಡೆಲ್ ಟೆಕ್ನಾಲಜೀಸ್ ಮತ್ತು ರಾಜ್ಯ ಸರಕಾರದ ‘ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರ’ (ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸೈಬರ್ ಸೆಕ್ಯುರಿಟಿ)ಗಳು ಐಟಿ-ಬಿಟಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಸೋಮವಾರ ಒಡಂಬಡಿಕೆಗೆ ಸಹಿ ಹಾಕಿದವು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಈ ಒಡಂಬಡಿಕೆಯು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳು, ನವೋದ್ಯಮಗಳು ಮತ್ತು ಸರಕಾರಿ ಕಚೇರಿಗಳಿಗೆ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ಕಲಿಕೆ ಸಾಧ್ಯವಾಗಲಿದೆ. ಡೆಲ್ ಟೆಕ್ನಾಲಜೀಸ್ ಸಂಸ್ಥೆಯು ಇಷ್ಟೂ ಕ್ಷೇತ್ರಗಳಿಗೆ ತನ್ನ ಇಂಟರ್- ಆಕ್ಟೀವ್ ಕೋರ್ಸುಗಳನ್ನು ಒದಗಿಸಲಿದೆ. ವಿದ್ಯಾರ್ಥಿಗಳ ಪ್ರಯೋಜನಕ್ಕೆ ರೂಪಿಸಿರುವ ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದ ವಸ್ತುವಿಷಯಗಳು ಇಂಗ್ಲೀಷಿನ ಜೊತೆಗೆ ಕನ್ನಡದಲ್ಲೂ ಇರಲಿವೆ’ ಎಂದರು.

ಸಂಸ್ಥೆಯು ತನ್ನ ‘ಅಸೆಂಡ್’ ವ್ಯವಸ್ಥೆಯ ಮೂಲಕ ರಾಜ್ಯದ ನವೋದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸಲಿದ್ದು, ಅಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಮರ್ಥ ಪರಿಹಾರಗಳನ್ನು ನೀಡಲಿದೆ. ಇದರಿಂದಾಗಿ ನವೋದ್ಯಮಗಳ ಮಾರುಕಟ್ಟೆ ಹಿಗ್ಗಲಿದ್ದು, ಇವುಗಳ ಉತ್ಪನ್ನಗಳು ಮತ್ತು ಸೇವೆಗಳ ಮೌಲ್ಯವರ್ಧನೆಯೂ ಆಗಲಿದೆ ಎಂದು ಅವರು ನುಡಿದರು.

ರಾಜ್ಯವು 2025ರ ಹೊತ್ತಿಗೆ 300 ಶತಕೋಟಿ ಡಾಲರ್ ಮೌಲ್ಯದ ಡಿಜಿಟಲ್ ಆರ್ಥಿಕತೆಯನ್ನು ಬೆಳೆಸುವ ಗುರಿ ಹೊಂದಿದೆ. ಇಂಥ ಡಿಜಿಟಲೀಕರಣ ಸಾಧ್ಯವಾಗಬೇಕು ಎಂದರೆ ಅತ್ಯಂತ ದಕ್ಷವಾದ ಸೈಬರ್ ಸೆಕ್ಯುರಿಟಿ ವ್ಯವಸ್ಥೆ ಇರಬೇಕಾಗುತ್ತದೆ. ಇದನ್ನು ಮುಖ್ಯವಾಗಿ ಇಟ್ಟುಕೊಂಡೇ ಸರಕಾರವು ಐದು ವರ್ಷಗಳ ಹಿಂದೆಯೇ ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಿದೆ. ಡಿಜಿಟಲ್ ಆರ್ಥಿಕತೆಯ ಈ ಕಾಲಘಟ್ಟದಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ ಎಂದು ಅವರು ಪ್ರತಿಪಾದಿಸಿದರು.

ಡೆಲ್ ಸಂಸ್ಥೆಯು ತಾನು ಅಭಿವೃದ್ಧಿ ಪಡಿಸಿರುವ ‘ಟೆಕ್‌ ಟಿಯರ್‍‌ಡೌನ್’ ವ್ಯವಸ್ಥೆಯಡಿ ಆಯ್ದ ನವೋದ್ಯಮಗಳಿಗೆ ನಿರ್ದಿಷ್ಟವಾಗಿ ತಂತ್ರಜ್ಞಾನ ಮತ್ತು ಸೈಬರ್ ಸೆಕ್ಯುರಿಟಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಿದ್ದು, ಅವುಗಳ ಆರ್ಥಿಕ ಬೆಳವಣಿಗೆಗೆ ಮಾರ್ಗದರ್ಶನ ಮಾಡಲಿದೆ. ಇದಲ್ಲದೆ, ಕಂಪನಿಯು ರಾಜ್ಯದ ಸರಕಾರಿ ಮತ್ತು ಖಾಸಗಿ ವಲಯಗಳ ಜತೆಗೂಡಿ ಸೈಬರ್ ರಿಕವರಿ ಕುರಿತಂತೆ ತಿಳಿವಳಿಕೆ ಮೂಡಿಸಲಿವೆ ಎಂದು ಅವರು ವಿವರಿಸಿದರು.

ಸೈಬರ್ ಸೆಕ್ಯುರಿಟಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಹತ್ವದ ಕ್ಷೇತ್ರವಾಗಿದೆ. ನಮ್ಮ ಸಾರ್ವಜನಿಕ ವಲಯವು ಇದಕ್ಕೆ ಸಂಬಂಧಿಸಿದಂತೆ ಐಟಿ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದುವುದು ಮುಂಬರುವ ದಿನಗಳಲ್ಲಿ ಮುಖ್ಯವಾಗಲಿದೆ. ಸೈಬರ್ ಬೆದರಿಕೆಯ ಈ ಯುಗದಲ್ಲಿ ಅಂಕಿಅಂಶ ಮತ್ತು ವಿವರಗಳ ಸುರಕ್ಷಿತ ಸಂರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನಗಳು ಅನಿವಾರ್ಯವಾಗಿವೆ. ಈ ಒಡಂಬಡಿಕೆಯು ಆಡಳಿತದ ಅಪರಿಮಿತ ಶಕ್ತಿಯ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಸೈಬರ್ ಸೆಕ್ಯುರಿಟಿ ಉತ್ಕೃಷ್ಟತಾ ಕೇಂದ್ರದ ಮುಖ್ಯಸ್ಥ ಡಾ.ಕಾರ್ತೀಕ್ ರಾವ್ ಬಪ್ಪನಾಡು ಮಾತನಾಡಿ, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿರುವ ಕಾರ್ಯ ಪರಿಸರವು ಯಾವುದೇ ಬಗೆಯ ಸೈಬರ್ ದಾಳಿಯನ್ನು ಎದುರಿಸುವಷ್ಟು ಸಮರ್ಥವಾಗಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಕೂಡ ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಉತ್ಕೃಷ್ಟತಾ ಕೇಂದ್ರವು ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಡೆಲ್‌ ಟೆಕ್ನಾಲಜೀಸ್‌ನ ಉಪಾಧ್ಯಕ್ಷ ಮನೀಶ್‌ ಗುಪ್ತ, ನಿರ್ದೇಶಕ ಮತ್ತು ಪ್ರಧಾನ ವ್ಯವಸ್ಥಾಪಕ ರಿಪು ಬಾಜ್ವಾ ಉಪಸ್ಥಿತರಿದ್ದರು.

You may also like