Home » ಆದಾಯದಲ್ಲಿ ದಾಖಲೆಯ ಏರಿಕೆ ಕಂಡ ಮೈಸೂರು ಮೃಗಾಲಯ: ಪ್ರವಾಸಿಗರ ಸಂಖ್ಯೆಯು ಹೆಚ್ಚಳ

ಆದಾಯದಲ್ಲಿ ದಾಖಲೆಯ ಏರಿಕೆ ಕಂಡ ಮೈಸೂರು ಮೃಗಾಲಯ: ಪ್ರವಾಸಿಗರ ಸಂಖ್ಯೆಯು ಹೆಚ್ಚಳ

by manager manager

ಮೈಸೂರು: ಪ್ರಸಕ್ತ ಸಾಲಿನಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ (Sri Chamarajendra Zoological Garden) ಭಾರಿ ಪ್ರಮಾಣದಲ್ಲಿ ಆದಾಯ ಹರಿದು ಬಂದಿದ್ದು, ಕಳೆದ ಹಣಕಾಸು ವರ್ಷಕ್ಕಿಂತ ಈ ವರ್ಷ 4 ಕೋಟಿ ರೂ. ಆದಾಯ ಬಂದಿದೆ. ಮೃಗಾಲಯದ ಆದಾಯ ಹೆಚ್ಚಾಗುವುದರ ಜೊತೆಗೆ ಪ್ರವಾಸಿಗರ ಸಂಖ್ಯೆಯಲ್ಲೂ ಕೂಡ ಹೆಚ್ಚಳ ಕಂಡಿದೆ.

2016-17 ಸಾಲಿನ ಹಣಕಾಸು ವರ್ಷದಲ್ಲಿ ಮೃಗಾಲಯ 19 ಕೋಟಿ ಆದಾಯ‌ ಗಳಿಸಿತ್ತು. 2017-18 ಸಾಲಿನ ಹಣಕಾಸು ವರ್ಷದಲ್ಲಿ 23 ಕೋಟಿ 10 ಲಕ್ಷ ಆದಾಯ ಗಳಿಸಿದೆ. ಒಂದೇ ವರ್ಷದಲ್ಲಿ 4 ಕೋಟಿ ರೂ. ಏರಿಕೆ ಕಂಡಿದೆ. ಆದಾಯದ ಜೊತೆ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2016-17 ಸಾಲಿನಲ್ಲಿ 33 ಲಕ್ಷ ಮಂದಿ ಮೃಗಾಲಯ ವೀಕ್ಷಣೆ ಮಾಡಿದ್ದು, 2017-18 ಸಾಲಿನಲ್ಲಿ 35 ಲಕ್ಷ ಮಂದಿ ಪ್ರವಾಸಿಗರು ಮೃಗಾಲಯ ವೀಕ್ಷಿಸಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 1 ಲಕ್ಷದ 30 ಸಾವಿರ ಮಂದಿ ಮೃಗಾಲಯಕ್ಕೆ ಭೇಟಿ ನೀಡಿದ್ದರೆ ಈ ವರ್ಷ ಮಾರ್ಚ್ ತಿಂಗಳಲ್ಲಿ 1 ಲಕ್ಷದ 60 ಸಾವಿರ ಮಂದಿ ಭೇಟಿ ನೀಡಿದ್ದಾರೆ. ಮೇ ತಿಂಗಳ ಪ್ರವಾಸಿಗರ ಸಂಖ್ಯೆಯಲ್ಲೂ ಕಳೆದ ವರ್ಷಕ್ಕಿಂತ 60 ಸಾವಿರ ಹೆಚ್ಚಳವಾಗಿದೆ. 2017-18 ಸಾಲಿನಲ್ಲಿ 35 ಲಕ್ಷ ಮಂದಿ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.

ಇನ್ನು ಮೃಗಾಲಯದ ಆನ್‌ಲೈನ್ ಟಿಕೇಟ್ ಮಾರಾಟದಲ್ಲೂ ಮುಂದಿದ್ದು, ಕಳೆದ ವರ್ಷ 6 ಲಕ್ಷ ಟಿಕೇಟ್ ಆನ್‌ಲೈನ್ ಮೂಲಕ ಮಾರಾಟವಾಗಿತ್ತು. ಮೈಸೂರು ಮೃಗಾಲಯದಲ್ಲಿ ವರ್ಷದಿಂದ ವರ್ಷಕ್ಕೆ ಆದಾಯ ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ದತ್ತು ಯೋಜನೆಯಲ್ಲಿ ಭಾರೀ ಏರಿಕೆ:

ಅಲ್ಲದೇ ಪ್ರಾಣಿ ದತ್ತು ಯೋಜನೆಯಲ್ಲಿ ಭಾರೀ ಏರಿಕೆ ಕಂಡಿದೆ. ಮೃಗಾಲಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಿಗದ ಕಾರಣ 17 ವರ್ಷಗಳಲ್ಲಿ 4,041 ಪ್ರಾಣಿಗಳನ್ನು 3,149 ವ್ಯಕ್ತಿಗಳು ದತ್ತು ಸ್ವೀಕರಿಸಿದ್ದಾರೆ. 17 ವರ್ಷಗಳ ಹಿಂದೆ ಆರ್ಥಿಕ ನಷ್ಟದಿಂದಾಗಿ ಮೈಸೂರು ಮೃಗಾಲಯ ಮುಚ್ಚುವ ಹಂತ ತಲುಪಿತ್ತು. ಹೀಗಾಗಿ, ಅಂದಿನ ಕಾರ್ಯನಿರ್ವಾಹಕ ನಿರ್ದೇಶಕ ಕುಮಾರ ಪುಷ್ಕರ್ ಅವರು ಪ್ರಾಣಿಗಳ ದತ್ತು ಯೋಜನೆ ಆರಂಭಿಸಿದ್ದರು. ಈ ಯೋಜನೆ ಅಸ್ತಿತ್ವಕ್ಕೆ ಬಂದ 2001-02ನೇ ಸಾಲಿನಲ್ಲಿ 40 ಸಾವಿರ ಲಭಿಸಿತ್ತು. ಅಲ್ಲಿಂದ ದತ್ತು ಪಡೆಯುವವರ ಸಂಖ್ಯೆ ಹಾಗೂ ಆದಾಯ ಹೆಚ್ಚಾಗುತ್ತಿದೆ. ಒಂದು ಹುಲಿ ನಿರ್ವಹಣೆಗೆ ವರ್ಷಕ್ಕೆ 4 ಲಕ್ಷ ರೂ. ಖರ್ಚಾಗುತ್ತದೆ.

ಪ್ರವೇಶದ್ವಾರ ಶುಲ್ಕ ಹಾಗೂ ಪ್ರಾಣಿದತ್ತು ಯೋಜನೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಆದಾಯ ಏರಿಕೆಯಿಂದ ಮೃಗಾಲಯದ ಅಧಿಕಾರಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಮುಂದಿನ ವಾರ ಹೊಸ ಅತಿಥಿಗಳ ಆಗಮನ..!

ಮುಂದಿನವಾರ ಮೃಗಾಲಯಕ್ಕೆ ವಿಶೇಷ ಅತಿಥಿಗಳು ಬಂದು ಸೇರಿಕೊಳ್ಳಲಿದ್ದಾರೆ. ಚೆನೈಯಿಂದ ವೈಟ್ ಟೈಗರ್ಸ್, ಇಸ್ರೇಲ್ ನಿಂದ ಜೀಬ್ರಾಗಳು, ಸೇರಿದಂತೆ ಡೆಲ್ಲಿ , ಪುಣೆ ಮೃಗಾಲಯದಿಂದಲೂ ವಿವಿಧ ಪ್ರಾಣಿಗಳು ಆಗಮಿಸಲಿವೆ. ಈಗಾಗಲೇ ಮೈಸೂರು ಮೃಗಾಲಯ, ಐದಾರು ಮೃಗಾಲಯಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ವಾರ ಆಗಮಿಸಲಿವೆ. ಹೀಗಾಗಿ ಮೈಸೂರಿನ ಮೃಗಾಲಯಕ್ಕೆ ಮತ್ತಷ್ಟು, ಮೆರಗು ಬರಲಿದೆ.

On 2016-17 financial year Sri Chamarajendra Zoological Garden has increase’s their revenue. And also Tourist arrivals increased. This year grown by Rs 4 crore. In addition, the number of tourists has also increased more than before.

You may also like