ಬೆಂಗಳೂರು: ಯಾವುದೇ ಒಂದು ದೇಶದ ನಿಜವಾದ ಸಂಪತ್ತು ಆದೇಶದ ಆರೋಗ್ಯವಂತ ಪ್ರಜೆಗಳು. ಅದರಲ್ಲೂ ಯುವಕರು. ಹಾಗಾಗಿ ಚೈತನ್ಯದಾಯಕ ಕ್ರಿಯಾಶೀಲ ಯುವಶಕ್ತಿಯೇ ದೇಶದ ಶಕ್ತಿ ಎಂದು ಬಲ್ಲೇನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ತಿಳಿಸಿದರು.
ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಯುವಕರನ್ನು ಸದೃಢ ಪ್ರಜೆಗಳನ್ನಾಗಿ ರೂಪಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಹಾಗಾಗಿ ಯುವಕರು ವಿದ್ಯಾರ್ಜನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆಯ ಮಂತ್ರಕ್ಕೆ ಬದ್ಧರಾಗಿ ಎಲ್ಲರೊಡನೆ ಬೆರೆಯಬೇಕು. ಸಂಕುಚಿತ ಭಾವನೆಗಳಿಗೆ ಯಾವುದೇ ಕಾರಣಕ್ಕೂ ಒಳಗಾಗಬಾರದು. ಚುನಾವಣೆಯಲ್ಲಿ ಸಚ್ಚಾರಿತ್ರ್ಯದ ಅಭ್ಯರ್ಥಿಯನ್ನು ಯಾವುದೇ ಆಮಿಷಗಳಿಗೆ ಒಳಗಾಗದೇ ಆಯ್ಕೆ ಮಾಡಬೇಕು. ಅಭ್ಯರ್ಥಿಗಳೇ ಆಗುವ ಅವಕಾಶ ಸಿಕ್ಕಾಗ ನೈತಿಕ ನಿಷ್ಠೆಯಿಂದ ಮುನ್ನಡೆಯಬೇಕು. ಭೋಗಜೀವನಕ್ಕೆ ಪಕ್ಕಾಗದೆ ಇತರರಿಗೆ ಮಾದರಿಯಾಗಬೇಕು. ನಮ್ಮ ದೇಶವನ್ನು ಕಟ್ಟಿದ ಹಿರಿಯ ಚೇತನಗಳಾದ ಕಡುಗಲಿಗಳ, ಶಾಂತಿಪ್ರಿಯರ, ಧರ್ಮ ಸಹಿಷ್ಣುಗಳ ಇತಿಹಾಸವನ್ನು ಅರಿತು ಆ ಗುಣಗಳನ್ನು ಅಳವಡಿಸಿಕೊಂಡು ಅವರ ಕನಸಿನ ನನಸಾಗಬೇಕು. ಕಾಯಕಕ್ಕಾಗಿ ಆಯ್ದುಕೊಳ್ಳುವ ಕ್ಷೇತ್ರ ಯಾವುದೇ ಆಗಿರಲಿ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಗಳನ್ನು ಮೈಗೂಡಿಸಿಕೊಳ್ಳಬೇಕು. ಧಾರ್ಮಿಕವಾಗಿ ಒಡಕುಗಳು ಮೂಡಿದಾಗ ಸಾಮರಸ್ಯದಿಂದ ಬಗೆಹರಿಸಿಕೊಳ್ಳಬೇಕು. ದುಡುಕಬಾರದು. ಇದೇ ಭಾರತೀಯರೆಲ್ಲರ ಪ್ರಮುಖ ಹಾಗೂ ಅನಿವಾರ್ಯ ಲಕ್ಷಣವಾಗಿದೆ. ಹನಿಹನಿಗೂಡಿದರೆ ಹಳ್ಳವೆಂಬಂತೆ ಒಬ್ಬೊಬ್ಬರೂ ಸರಿ ಹೋದಾಗ ಸಮುದಾಯವೇ ಸಬಲಗೊಳ್ಳುತ್ತದೆ. ಪ್ರಧಾನಿಯವರ ಆಶಯದಂತೆ ಸೈನ್ಯದಲ್ಲಷ್ಟೇ ಅಲ್ಲದೆ ಎಲ್ಲೆಡೆಯೂ ಅಗ್ನಿವೀರರಾಗಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಉಪನ್ಯಾಸಕರಾದ ಶಿವಪ್ರಕಾಶ್ ರವರು ಜೀವನ ಮೌಲ್ಯಗಳು ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು .ರಾ.ಸೇ.ಯೋಜನೆಯ ರಾಜ್ಯ ಸಂಯೋಜನಾಧಿಕಾರಿ ಡಾ ಗುಬ್ಬಿಗೂಡು ರಮೇಶ್ ರವರು ಮಾತನಾಡಿ ಇಂತಹಾ ಯುವಜನೋತ್ಸವ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವುದು ಎಂದರು.ಅಧ್ಯಕ್ಷತೆಯನ್ನು ಪ ಪೂ ಶಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ವಹಿಸಿದ್ದರು .ರಾಜ್ಯದ ವಿವಿಧ ಜಿಲ್ಲೆಯಿಂದ ಸುಮಾರು ೨೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು .