ಮಲ್ಲೇಶ್ವರಂ ವೈಟ್ ಟಾಪಿಂಗ್ ಕಾಮಗಾರಿ ಅತ್ಯಂತ ವೈಜ್ಞಾನಿಕ: ಅಶ್ವತ್ಥ ನಾರಾಯಣ
ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವಂತಹ ವೈಟ್ ಟಾಪಿಂಗ್ ಕಾಮಗಾರಿ ಅತ್ಯಂತ ವೈಜ್ಞಾನಿಕವಾಗಿದೆ. ಇದು ಇಡೀ ಬೆಂಗಳೂರಿಗೆ ಮಾದರಿಯಾಗಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಶನಿವಾರ ಇಲ್ಲಿ ಚಾಲನೆ ಪಡೆದ ‘ಮಲ್ಲೇಶ್ವರಂ ಸ್ವಾಭಿಮಾನ ಅಸೋಸಿಯೇಷನ್’ ನಾಗರಿಕ ಸಂಘಟನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪಿಗೆ ರಸ್ತೆಯಲ್ಲಿ ಅಭಿವೃದ್ಧಿ ಪಡಿಸಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ದಾಖಲೆಯ ಸಮಯದಲ್ಲಿ ಮುಗಿಸಲಾಗುತ್ತಿದೆ. ಈ ಕಾಮಗಾರಿ ಅಕ್ಟೋಬರ್ ಮಧ್ಯ ಭಾಗದ ಹೊತ್ತಿಗೆ ಮುಕ್ತಾಯವಾಗಲಿದೆ ಎಂದು ಅವರು ಭರವಸೆ ನೀಡಿದರು.
ಕ್ಷೇತ್ರದಲ್ಲಿ 150 ಕಿ.ಮೀ. ಉದ್ದ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ. ಇಲ್ಲಿ ಇಂಟರ್ನೆಟ್ ಕೂಡ ವೇಗವಾಗಿ ಕೆಲಸ ಮಾಡುವಂತೆ ಸೌಲಭ್ಯ ಒದಗಿಸಲಾಗಿದೆ ಎಂದು
ಅವರು ನುಡಿದರು.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 250 ಕಿ.ಮೀ. ಉದ್ದದಲ್ಲಿ ಹೊಸ ಕುಡಿಯುವ ನೀರು ಪೂರೈಕೆ ಕೊಳವೆಗಳನ್ನು ಅಳವಡಿಸಲಾಗಿದೆ. ಜತೆಗೆ ಕ್ಷೇತ್ರ ವ್ಯಾಪ್ತಿಯ 32 ಸಾವಿರ
ಮನೆಗಳಿಗೆ ಹೊಸದಾಗಿ ಕೊಳಾಯಿ ಸಂಪರ್ಕ ಕೊಡಲಾಗಿದೆ ಎಂದು ಅವರು ಹೇಳಿದರು.
110 ಕಿ.ಮೀ. ದೂರದ ತೊರೆಕಾಡನಹಳ್ಳಿಯಿಂದ ಬೆಂಗಳೂರಿಗೆ ಕಾವೇರಿ ನೀರು ಬರುತ್ತದೆ. ಆದರೆ ಇದರಲ್ಲಿ ಹೆಚ್ಚು ಪೋಲಾಗುತ್ತಿದೆ. ಇದನ್ನು ತಡೆಯಲು ವೈಜ್ಞಾನಿಕ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕ್ಷೇತ್ರದಲ್ಲಿ ಡಿಜಿಟಲ್ ಮಾದರಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಇವು ದೇಶಕ್ಕೇ ಮಾದರಿ ಆಗಲಿವೆ. ಈಗಾಗಲೇ ಸರಕಾರಿ ಶಾಲೆಗಳನ್ನು ಹೀಗೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಸರಕಾರದ ನಿವೃತ್ತ ಕಾರ್ಯದರ್ಶಿ ಎ.ರವೀಂದ್ರ, ಪ್ರಭಾವತಿ, ಪಾಲಿಕೆ ಮಾಜಿ ಸದಸ್ಯ, ಮಂಜುನಾಥ ರಾಜು, ನವೀನ್ ಮುಂತಾದವರು ಇದ್ದರು.