Home » ರೈತರಿಗೆ ಶಾಕ್: ಹಾಲಿನ ದರ 2 ರೂ. ಕಡಿತ- ಕಾರಣ ಏನು ಗೊತ್ತಾ..?

ರೈತರಿಗೆ ಶಾಕ್: ಹಾಲಿನ ದರ 2 ರೂ. ಕಡಿತ- ಕಾರಣ ಏನು ಗೊತ್ತಾ..?

by manager manager

ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ರೈತರ ಮುಖದಲ್ಲಿ ಮಂದಹಾಸ ಮೂಡುವುದು ಸಹಜ. ಆದರೆ ಈ ಬಾರಿ ಆರಂಭವಾದ ಮಳೆಗಾಲದ ಮೊದಲಿಗೆ ರೈತರಿಗೆ ಶಾಕ್ ನೀಡಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ(KMF)ದ ನಾನಾ ಒಕ್ಕೂಟಗಳು ಹಾಲು ಉತ್ಪಾದಕರಿಂದ ಖರೀದಿಸುವ ದರದಲ್ಲಿ ಕಡಿತ ಮಾಡಿವೆ. ಹಾಲಿನ ಖರೀದಿ ದರವನ್ನು 2 ರೂ. ಕಡಿತಗೊಳಿಸಲಾಗಿದ್ದು, ಜೂನ್ 1ರಿಂದ ಅನ್ವಯವಾಗುವಂತೆ ದರ ಕಡಿತ ಮಾಡಲಾಗಿದೆ.

ರೈತರಿಗೆ ದರ ಕಡಿಮೆಯಾದರೆ ಅದರ ಲಾಭ ಗ್ರಾಹಕರಿಗೂ ಹಸ್ತಾಂತರ ಆಗಬೇಕು. ಆದರೆ ಒಕ್ಕೂಟಗಳು ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ರೈತರಿಗೂ ನಷ್ಟ , ಇತ್ತ ಹಾಲು ಖರೀದಿಸುವವರಿಗೂ ಇದರ ಲಾಭ ಸಿಗುತ್ತಿಲ್ಲ.

KMF cuts 2 rupees for milk producers: Do you know the Reson?

ದರ ಇಳಿಕೆಗೆ ಮಳೆಗಾಲ ಕಾರಣ..!

ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಾಲು ಉತ್ಪಾದನೆ ಹೆಚ್ಚಳವಾಗುತ್ತದೆ. ಮೇ-ಜೂನ್‍’ನಲ್ಲಿ ಅತ್ಯಧಿಕ ಪ್ರಮಾಣದ ಹಾಲು ಉತ್ಪತ್ತಿಯಾಗುವ ಕಾರಣ ಹಾಲು ಒಕ್ಕೂಟಗಳಿಗೆ ಹೆಚ್ಚುವರಿ ಹಾಲು ಮಾರಾಟ ಮಾಡಲು ಆಗುವುದಿಲ್ಲ. ಈ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು, ಇಲ್ಲವೇ ಮಾರಾಟ ಮಾಡಬೇಕು. ಆದರೆ ಹಾಲಿನ ಪುಡಿಗೆ ಬೇಡಿಕೆ ಇಲ್ಲ. ಮುಂಗಾರು ಅವಧಿಯಲ್ಲಿ ಹಸಿರು ಮೇವು ಹೆಚ್ಚಿನ ಪ್ರಮಾಣದಲ್ಲಿ ಸಿಗುವುದರಿಂದ ಹಾಲು ಉತ್ಪಾದನೆಯೂ ಹೆಚ್ಚಳವಾಗಲಿದೆ. ಈ ಕಾರಣಕ್ಕೆ ದರ ಇಳಿಕೆ ಮಾಡಲಾಗಿದೆ ಎಂದು ಕೆಎಂಎಫ್(KMF) ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. ಪ್ರತಿ ವರ್ಷ ಕೆಲವು ತಿಂಗಳು ದರ ಇಳಿಕೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.

ದಾಖಲೆಯ ಪ್ರಮಾಣದ ಹಾಲು ಉತ್ಪಾದನೆ:

ಕೆಎಂಎಫ್’‍ಗೆ ಸೇರಿದ ಹದಿನಾಲ್ಕು ಜಿಲ್ಲಾ ಒಕ್ಕೂಟಗಳಲ್ಲಿ ನಿತ್ಯ ಸರಾಸರಿ 75 ಲಕ್ಷ ಲೀ. ಹಾಲು ಶೇಖರಣೆಯಾಗುತ್ತಿದೆ. ಮೇ ತಿಂಗಳಲ್ಲಿ 77.88 ಲಕ್ಷ ಲೀ. ಹಾಲು ಸಂಗ್ರಹಗೊಂಡಿರುವುದು ಇದೂವರೆಗಿನ ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 80 ಲಕ್ಷ ಲೀ.ಗೆ ಹೆಚ್ಚುವ ನಿರೀಕ್ಷೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಗಿಂತ ಹೈನುಗಾರಿಕೆ ಲಾಭದಾಯಕವಾಗಿರುವ ಕಾರಣ ಹಸು ಸಾಕಣೆಗೆ ಹೆಚ್ಚಿನ ಒಲವು ಕಂಡುಬಂದಿದೆ. ಗ್ರಾ.ಪಂ.ಗಳಲ್ಲಿ ಹಾಲು ಉತ್ಪಾದಕರ ಸಂಘಗಳು ಹೆಚ್ಚು ಸಕ್ರಿಯವಾಗಿರುವ ಕಾರಣ ಬಹುತೇಕ ಎಲ್ಲಾ ಒಕ್ಕೂಟಗಳಲ್ಲಿ ಕ್ಷೀರ ಉತ್ಪಾದನೆ ಏರುಮುಖಗೊಂಡಿದೆ.

ಹಾಲು ಸಂಗ್ರಹ, ಬಳಕೆ ವಿವರ:

ಕೆಎಂಎಫ್ ನಿತ್ಯ ಸರಾಸರಿ 75 ಲಕ್ಷ ಲೀ. ಹಾಲು ಸಂಗ್ರಹಿಸುತ್ತದೆ. ಈ ಪೈಕಿ 34 ಲಕ್ಷ ಲೀ. ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಮೊಸರು ತಯಾರಿಕೆಗೆ 4 ಲಕ್ಷ ಲೀ., ಗುಡ್ ಲೈಫ್ ಹಾಲು ತಯಾರಿಸಲು 5 ಲಕ್ಷ ಲೀ. ಹಾಗೂ ನಂದಿನಿ ಉತ್ಪನ್ನಗಳ ತಯಾರಿಕೆಗೆ 5 ಲಕ್ಷ ಲೀ. ಬಳಸಲಾಗುತ್ತದೆ. ಉಳಿದಿದ್ದನ್ನು ಹಾಲಿನ ಪುಡಿ ಮಾಡಲು ಬಳಸಿಕೊಳ್ಳಲಾಗುತ್ತದೆ. ಆದರೆ, ಉತ್ಪಾದನೆಯಾದ ಪೂರ್ಣ ಹಾಲಿ ಪುಡಿಯನ್ನು ಬಿಕರಿ ಮಾಡಲು ಸಾಧ್ಯವಾಗದಿರುವುದು ಹಾಲು ಉತ್ಪಾದಕರ ದರ ಕಡಿತಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದಾಗಿ ತಿಳಿದುಬಂದಿದೆ.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಮಾಡಬೇಕೆಂದು ಸರಕಾರ ಲೀಟರ್‌ಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಹೆಚ್ಚು ಉತ್ಪಾದನೆಯಾದರೆ ಹಾಲು ನಿರ್ವಹಣೆ ಮಾಡುವುದು ಕಷ್ಟ ಎಂದು ಹಾಲು ಒಕ್ಕೂಟಗಳು ದರ ಇಳಿಕೆ ಮಾಡಿರುವುದು ಹೈನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳಿಗೆ ಹೊಡೆತ ಬಿದ್ದಿದೆ.

karnataka excess production(KMF) cuts 2 rupees for milk producers. Rate reduction is applicable as of June 1. Reason to cuts 2 rupees Was Rainy season.

You may also like