Home » ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಏನೆಲ್ಲಾ ಪ್ರಯೋಜನಗಳಿವೆ?

ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಏನೆಲ್ಲಾ ಪ್ರಯೋಜನಗಳಿವೆ?

by manager manager

ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ್ ಮಂತ್ರಿ ಜನಾರೋಗ್ಯ ಯೋಜನೆ (ಪಿಎಂಜೆಎವೈ) ಅಥವಾ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಮಿಷನ್ ಅಡಿಯಲ್ಲಿ 2018 ರಲ್ಲಿ ಪ್ರಾರಂಭಿಸಲಾಗಿರುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.

ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೈಕೆ ವ್ಯವಸ್ಥೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು, ತಡೆಗಟ್ಟುವ ಮತ್ತು ಉತ್ತೇಜಿಸುವ ಆರೋಗ್ಯ ಒಳಗೊಂಡಂತೆ, ಆರೋಗ್ಯ ರಕ್ಷಣೆಯನ್ನು ಸಮಗ್ರವಾಗಿ ಪರಿಹರಿಸಲು ಈ ಯೋಜನೆಯು ಉದ್ದೇಶಿಸಿದೆ.

ಇದು ಆರೋಗ್ಯ ಹಾಗೂ ಸ್ವಾಸ್ಥ್ಯ ಕೇಂದ್ರಗಳು ಮತ್ತು ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ (ಎನ್‍ಎಚ್‍ಪಿಎಸ್) ಎಂಬ ಎರಡು ಪ್ರಮುಖ ಆರೋಗ್ಯ ಉಪಕ್ರಮಗಳ ಕೆಳಗೆ ಬರುತ್ತದೆ. ಇಂದೂ ಭೂಷಣ್ ರವರು ಆಯುಷ್ಮಾನ್ ಭಾರತ್ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿದ್ದಾರೆ ಮತ್ತು ಉಪ ಸಿಇಒ ಆಗಿ ದಿನೇಶ್ ಅರೋರಾರವರು ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯ ಹಿನ್ನಲೆ

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ, ಹಿರಿಯ ನಾಗರಿಕ ಆರೋಗ್ಯ ವಿಮೆ ಯೋಜನೆ (ಎಸ್‍ಸಿಐಎಸ್), ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‍ಎಸ್), ನೌಕರರ ರಾಜ್ಯ ವಿಮಾ ಯೋಜನೆ (ಇಎಸ್ಐಎಸ್) ಸೇರಿದಂತೆ ಅನೇಕ ಯೋಜನೆಗಳನ್ನು ಒಳಗೊಳ್ಳುವ ಮೂಲಕ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು (ಎನ್‍ಎಚ್‍ಪಿಎಸ್) ರೂಪುಗೊಂಡಿದೆ. ಆರೋಗ್ಯ ನೀತಿ, 2017 ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಭಾರತದ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿ ರೂಪಿಸಿದೆ.

ಆಯುಷ್ಮಾನ್ ಭಾರತ್ ಯೋಜನೆಯು ಎರಡು ಪ್ರಮುಖ ಅಂಶಗಳು

1. ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ

ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯು, 10 ಕೋಟಿ (ನೂರು ಮಿಲಿಯನ್) ಬಡ ಮತ್ತು ದುರ್ಬಲ ಕುಟುಂಬಗಳನ್ನು (ಸರಿಸುಮಾರು 50 ಕೋಟಿ (ಐದು ನೂರು ಮಿಲಿಯನ್) ಫಲಾನುಭವಿಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ನೀಡುವಷ್ಟು ವ್ಯಾಪ್ತಿಯನ್ನು ಹೊಂದಿದೆ ಹಾಗೂ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.

ಇದು ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‍ಸಿಸಿ) ಡೆಟಾಬೇಸ್ ನ ಅಭಾವದ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಲ್ಪಟ್ಟ ಅರ್ಹತೆಯೊಂದಿಗೆ ಆಧಾರಿತ ಯೋಜನೆಯಾಗಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡನ್ನೂ ಒಳಗೊಂಡಿದೆ. ಇತ್ತೀಚಿನ ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‍ಸಿಸಿ) ದತ್ತಾಂಶದ ಪ್ರಕಾರ ಸುಮಾರು 10.74 ಕೋಟಿ ಬಡ, ಅವಕಾಶ ವಂಚಿತ ಗ್ರಾಮೀಣ ಕುಟುಂಬಗಳನ್ನು ಮತ್ತು ನಗರ ಕಾರ್ಮಿಕರ ಕುಟುಂಬಗಳಲ್ಲಿ ಗುರುತಿಸಲಾದ ಉದ್ಯೋಗ ವರ್ಗವನ್ನು ತಲುಪುವ ಗುರಿಯಿರಿಸಿದೆ.

2. ಸ್ವಾಸ್ಥ್ಯ ಕೇಂದ್ರಗಳು

1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ 1200 ಕೋಟಿ ರೂ. ನಿಗದಿಪಡಿಸಲಾಗಿದೆ. ಇದರ ಅಡಿಯಲ್ಲಿ 1.5 ಲಕ್ಷ ಕೇಂದ್ರಗಳನ್ನು ಪ್ರತಿನಿತ್ಯದ ಅಗತ್ಯಗಳಲ್ಲದೆ, ಸಾಂಕ್ರಾಮಿಕವಲ್ಲದ ಕಾಯಿಲೆಗಳು ಮತ್ತು ತಾಯಿಯ ಮತ್ತು ಮಕ್ಕಳ ಆರೋಗ್ಯ ಸೇವೆಗಳನ್ನೂ ಒಳಗೊಂಡಂತೆ ಸಮಗ್ರ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಸ್ಥಾಪಿಸಲಾಗುತ್ತದೆ. ಔಷಧಗಳು ಮತ್ತು ರೋಗನಿರ್ಣಯ ಸೇವೆಗಳನ್ನು ಒದಗಿಸಲಾಗುತ್ತದೆ.

ಆರೋಗ್ಯ ಸಂರಕ್ಷಣಾ ಮತ್ತು ಸ್ವಾಸ್ಥ್ಯ ಕೇಂದ್ರದಲ್ಲಿ ಒದಗಿಸಬೇಕಾದ ಸೇವೆಗಳು

– ಗರ್ಭಧಾರಣೆಯ ಆರೈಕೆ ಮತ್ತು ತಾಯಿಯ ಆರೋಗ್ಯ ಸೇವೆಗಳು

– ನವಜಾತ ಮತ್ತು ಶಿಶು ಆರೋಗ್ಯ ಸೇವೆಗಳು

– ಮಕ್ಕಳ ಆರೋಗ್ಯ

– ದೀರ್ಘಕಾಲದ ಸಾಂಕ್ರಾಮಿಕ ರೋಗಗಳು

– ಸಾಂಕ್ರಾಮಿಕವಲ್ಲದ ರೋಗಗಳು

– ಮಾನಸಿಕ ಅಸ್ವಸ್ಥತೆಯ ನಿರ್ವಹಣೆ

– ಜೆರಿಯಾಟ್ರಿಕ್ ಆರೈಕೆ ಮತ್ತು ತುರ್ತು ಔಷಧ

ವಿಶ್ವದಲ್ಲೇ ಅತಿ ದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂಬ ಕೀರ್ತಿಗೆ ಆಯುಷ್ಮಾನ್ ಭಾರತ್ ಪಾತ್ರವಾಗಿದೆ. ಇದರ ಲಾಭ ಪಡೆಯಲಿರುವ ಜನರ ಸಂಖ್ಯೆಯು ಕೆನಡಾ, ಮೆಕ್ಸಿಕೊ ಮತ್ತು ಅಮೆರಿಕದ ಇಡೀ ಜನಸಂಖ್ಯೆಯನ್ನು ಸೇರಿಸಿದರೆ ಎಷ್ಟಾಗುತ್ತದೆಯೋ ಅದಕ್ಕೆ ಸಮ ಎನ್ನಲಾಗಿದೆ.

ನಮ್ಮ ಆರೋಗ್ಯ ಕರ್ನಾಟಕದಲ್ಲಿ ‘ಆಯುಷ್ಮಾನ್ ಭಾರತ್’ ಹೇಗೆ ಕಾರ್ಯನಿರ್ವಹಿಸುತ್ತಿದೆ?

ಕರ್ನಾಟಕದಲ್ಲಿ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಮತ್ತು ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಗಳೆರಡನ್ನೂ ವಿಲೀನಗೊಳಿಸಲಾಗಿದೆ. ಹೀಗಾಗಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಎಂಬ ಹೆಸರಿನಲ್ಲಿ ಜಾರಿಯಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ ಜಾರಿಯ ಉಸ್ತುವಾರಿ ವಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ 2018ರ ಅ.30ರಂದು ಈ ಒಪ್ಪಂದ ಮಾಡಿಕೊಂಡಿವೆ.

ಚಿಕಿತ್ಸೆ ಪಡೆಯಲು ಅನುಸರಿಸಬೇಕಾದ ಕ್ರಮಗಳು

ಆರೋಗ್ಯ ಕಾರ್ಡ್ ಕಡ್ಡಾಯವೇನಲ್ಲ: ರೋಗಿಗಳಿಗೆ ಮೊದಲ ಸಲ ನೋಂದಣಿಯ ಅಗತ್ಯ ಇದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ವೆಬ್ ಪೋರ್ಟಲ್‍ನಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ನೋಂದಣಿ ದಾಖಲಾಗುತ್ತದೆ. ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇರ್ಪಡೆಯಾಗಿದ್ದಕ್ಕೆ ಎಬಿ-ಎಆರ್‍ಕೆ ಕಾರ್ಡ್ ಎಂಬ ಹೆಲ್ತ್ ಕಾರ್ಡ್, ವಿಶಿಷ್ಟ ಐಡಿ ಕೂಡ ನೀಡಲಾಗುತ್ತದೆ. ಆದರೆ ಸದ್ಯಕ್ಕೆ ಈ ಆರೋಗ್ಯ ಕಾರ್ಡ್ ಇಲ್ಲದಿದ್ದರೂ, ಸೌಲಭ್ಯ ಪಡೆಯಬಹುದು.

ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ: ಪ್ರಸ್ತುತ ರಾಜ್ಯದ 390 ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಾಗಿದ್ದು, ಸಂಖ್ಯೆ ಹೆಚ್ಚುತ್ತಿದೆ. ಈ ಆಸ್ಪತ್ರೆಗಳ ಪಟ್ಟಿಯನ್ನು, ಯಾವೆಲ್ಲ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು ಎಂಬುದನ್ನೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ವೆಬ್‍ಸೈಟ್‍ನಲ್ಲಿ ಮಾಹಿತಿ ಇದೆ. (ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್) ನಿಮಗೆ ಅನುಕೂಲವೆನ್ನಿಸಿದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಯೋಜನೆಯ ಅನುಕೂಲ ಪಡೆಯುವ ಮುನ್ನ..- ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹೊಂದಲು ಮರೆಯದಿರಿ. ರೇಷನ್ ಕಾರ್ಡ್ ಇಲ್ಲದಿದ್ದರೆ, ಕನಿಷ್ಠ ಆಧಾರ್ ಇದ್ದರೂ ಚಿಕಿತ್ಸೆ ವೆಚ್ಚ ಪಡೆಯಬಹುದು. ಆದರೆ ಪಡಿತರ ಚೀಟಿ ಇದ್ದರೆ ಉತ್ತಮ.

– ಯಾವೆಲ್ಲ ಸರಕಾರಿ-ಖಾಸಗಿ ಆಸ್ಪತ್ರೆಯಲ್ಲಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆ ಇದೆ ಎಂಬುದನ್ನು ಪರಿಶೀಲಿಸಿ.

– ಯೋಜನೆಯ ವ್ಯಾಪ್ತಿಯಲ್ಲಿ ಇಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚಗಳಿಗೆ ಅನ್ವಯವಾಗುವುದಿಲ್ಲ.

– ಸಣ್ಣ ಪುಟ್ಟ ಕಾಯಿಲೆಗಳಿಗೂ ಈ ಯೋಜನೆ ಬಳಸಬಹುದು. ಆದರೆ ಅವುಗಳಲ್ಲಿ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಈ ಯೋಜನೆಯಡಿಯಲ್ಲಿ ಸಿಗದು.’

ಕರ್ನಾಟಕದಲ್ಲಿ ಇದರ ಪ್ರಮುಖ ಅಂಶಗಳು :

– ಕರ್ನಾಟಕದಲ್ಲಿ 62 ಲಕ್ಷ ಕುಟುಂಬಗಳು ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆಯಲಿವೆ.

– ಕರ್ನಾಟಕ ಸರಕಾರದಿಂದ 19 ಲಕ್ಷ ಎಪಿಎಲ್ ಕುಟುಂಬಗಳು ಆಯುಷ್ಮಾನ್ ಭಾರತ್ ಸೌಲಭ್ಯ ಪಡೆಯಲಿವೆ.

– ಕರ್ನಾಟಕದ ಫಲಾನುಭವಿಗಳ ಚಿಕಿತ್ಸೆಗೆ ಭರಿಸಿದ ವೆಚ್ಚ 116 ಕೋಟಿ ರೂ.

– ಕರ್ನಾಟಕದಲ್ಲಿ ಇದುವರೆಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಬಳಸಿದ ಫಲಾನುಭವಿಗಳ ಸಂಖ್ಯೆ 28,728

– ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕದಲ್ಲಿ ಒಟ್ಟು 1614 ಬಗೆಯ ಕಾಯಿಲೆಗಳಿಗೆ ಚಿಕಿತ್ಸಾ ವೆಚ್ಚ ಸಿಗಲಿದೆ. ಇದರಲ್ಲಿ 291 ಕಾಯಿಲೆಗಳ ಪ್ಯಾಕೇಜ್ ಪ್ರಾಥಮಿಕ ಹಂತದ್ದು. 254 ಸಂಕೀರ್ಣ ಹಾಗೂ ಎರಡನೇ ಹಂತದ ಚಿಕಿತ್ಸೆ, 169 ತುರ್ತು ಚಿಕಿತ್ಸೆ ಮತ್ತು 900 ಇತರ ಸ್ವರೂಪದ ಚಿಕಿತ್ಸೆಯನ್ನು ಹೊಂದಿರುತ್ತದೆ.

ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಸೇವಿಸಬೇಕಾದ ಆಹಾರ ಪದಾರ್ಥಗಳಿವು..