Home » *ಹೆಮ್ಮರವಾಗಿ ಬೆಳೆದಿರುವ ಆರ್ ವಿ ಶಿಕ್ಷಣ ಸಮೂಹ: ಉನ್ನತ ಸಚಿವರ ಶ್ಲಾಘನೆ*

*ಹೆಮ್ಮರವಾಗಿ ಬೆಳೆದಿರುವ ಆರ್ ವಿ ಶಿಕ್ಷಣ ಸಮೂಹ: ಉನ್ನತ ಸಚಿವರ ಶ್ಲಾಘನೆ*

by manager manager
ಪೋಟೋ ಕೃಪೆ- ಶ್ರೀಧರ್‌

ಬೆಂಗಳೂರು: ಸಮಾಜದ ಅವಶ್ಯಕತೆಗಳನ್ನು ಮನಗಂಡು ಅವನ್ನು ಪೂರೈಸಲು ಮಾಡಿದ ಪ್ರಯತ್ನದ ಫಲವಾಗಿ ಆರ್ ವಿ ಶಿಕ್ಷಣ ಸಮೂಹವು ಇಂದು ಹೆಮ್ಮರವಾಗಿ ಬೆಳದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಶುಕ್ರವಾರ ಹೇಳಿದ್ದಾರೆ.

ಸಂಸ್ಥೆಯ ಸುವರ್ಣೋತ್ಸವದ ಅಂಗವಾಗಿ ಏರ್ಪಡಿಸಿದ್ದ “ಮೈಲ್ ಸ್ಟೋನ್ ಸೆಲೆಬ್ರೇಶನ್” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜದ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರವಾಗಿದೆ. ಆರ್ ವಿ ಶಿಕ್ಷಣ ಸಮೂಹವು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದೆ ಎಂದು ಅವರು ಮೆಚ್ಚುಗೆಯ ಮಾತುಗಳನ್ನು ನುಡಿದರು.

21ನೇ ಶತಮಾನವು ಜ್ಞಾನಾಧಾರಿತ ಸಮಾಜವಾಗಿದೆ. ಈ ಜ್ಞಾನದ ಮಹತ್ವ ಮನಗಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೊಳಿಸಿದ್ದಾರೆ ಎಂದು ಅವರು ವಿವರಿಸಿದರು.

ಹಿಂದಿನ ಶಿಕ್ಷಣ ನೀತಿಗೆ ಹೋಲಿಸಿದರೆ ಈ ಶಿಕ್ಷಣ ನೀತಿ ಎಷ್ಟು ಉನ್ನತ ಮಟ್ಟದಲ್ಲಿದೆ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಕಲಿಕೆ ಮತ್ತು ಕೌಶಲ್ಯಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಸಡಿಲಿಕೆ ತರಲಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ದೇಶಗಳಿಗೆ ಭೌತಿಕ ಗಡಿ ಇರುತ್ತದೆ. ಆದರೆ ಸ್ಪರ್ಧೆಗೆ ಇಂತಹ ಗಡಿ ಇಲ್ಲ. ನಮ್ಮ ಯುವಕರು ಇಡೀ ಜಗತ್ತಿನೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಇದನ್ನು ಮನವರಿಕೆ ಮಾಡಿಕೊಂಡು ನಾವು ಜ್ಞಾನ ಹಾಗೂ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ಶಾಮ್, ಪದಾಧಿಕಾರಿಗಳಾದ ಹಯಗ್ರೀವ ಮತ್ತಿತರರು ಉಪಸ್ಥಿತರಿದ್ದರು.