Home » ಧಾರವಾಡದಲ್ಲಿ ಎನ್ ಡಿ ಎ ಮಾದರಿಯ ಪೊಲೀಸ್ ತರಬೇತಿ ಕೇಂದ್ರ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಧಾರವಾಡದಲ್ಲಿ ಎನ್ ಡಿ ಎ ಮಾದರಿಯ ಪೊಲೀಸ್ ತರಬೇತಿ ಕೇಂದ್ರ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by manager manager

ಹುಬ್ಬಳ್ಳಿ(ಕರ್ನಾಟಕ ವಾರ್ತೆ) ಸೆ.04:

ಧಾರವಾಡದಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಪುಣೆಯ ಖಡಕ್‌ವಾಸ್ಲಾದ ಎನ್.ಡಿ.ಎ.ಮಾದರಿಯ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು.ತಂತ್ರಜ್ಞಾನ,ವಿಜ್ಞಾನ ಆಧರಿಸಿ ಸೈಬರ್ ಅಪರಾಧಗಳ ತ್ವರಿತ ಪತ್ತೆ ಮಾಡುವ ಕೌಶಲ್ಯವನ್ನು ಪೊಲೀಸರು ಬೆಳೆಸಿಕೊಳ್ಳಬೇಕು.ಈ ನಿಟ್ಟಿನಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಸಬಾಪೇಟ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ಉದ್ಘಾಟನೆ ಮತ್ತು ಗೋಕುಲ ರಸ್ತೆ,ವಿದ್ಯಾನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮಧ್ಯಮ ಕ್ರಮಾಂಕದ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲು ಪುಣೆಯ ಖಡಕ್‌ವಾಸ್ಲಾದಲ್ಲಿರುವ ಎನ್ ಡಿ ಎ ಮಾದರಿಯ ತರಬೇತಿ ಕೇಂದ್ರವನ್ನು ಧಾರವಾಡದಲ್ಲಿ ಸ್ಥಾಪಿಸಲಾಗುವುದು.ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಕಮಾಂಡ್ ಸೆಂಟರ್ ಸ್ಥಾಪನೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಹಣ ಒದಗಿಸಬಹುದು.ಸೂಕ್ತ ಪ್ರಸ್ತಾವನೆ ಬಂದರೆ ರಾಜ್ಯ ಸರ್ಕಾರದಿಂದ ಹಣ ಒದಗಿಸಲಿದೆ .ತಂತ್ರಜ್ಞಾನದ ದುರುಪಯೋಗ ತಡೆಯಬೇಕು.ಡಿಜಿಟಲ್ ಹಾಗೂ ಸೈಬರ್ ಅಪರಾಧಗಳ ಪತ್ತೆ ಕಾರ್ಯದಲ್ಲಿ ಇನ್ನೂ ಸುಧಾರಣೆ ತರಲಾಗುವುದು.ಪೊಲೀಸ್ ಠಾಣೆಗಳು ಸಮಾಜದ ಭದ್ರತೆಗೆ ಅತ್ಯಗತ್ಯ.ದಕ್ಷವಾದ ಸೇನೆ ಹಾಗೂ ಪೊಲೀಸರು ಇರುವಲ್ಲಿ ಶಾಂತಿ ನೆಲೆಸಿರುತ್ತದೆ.ಶಾಂತಿ ಇದ್ದಲ್ಲಿ ಅಭಿವೃದ್ಧಿಯಾಗುತ್ತದೆ.ಕರ್ನಾಟಕ ಪೊಲೀಸರು ದಕ್ಷತೆಗೆ ಹೆಸರಾಗಿದ್ದಾರೆ.ಹುಬ್ಬಳ್ಳಿಯ ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕೆ ಸಂಚಾರ ಪೊಲೀಸ್ ಠಾಣೆಗಳ ಅಗತ್ಯತೆ ಮನಗಂಡು ಅಲ್ಲಿ ಠಾಣೆ ಸ್ಥಾಪಿಸಲಾಗಿದೆ.ಅಭಿವೃದ್ಧಿಯ ವಿಷಯದಲ್ಲಿ ಅಧಿಕಾರಿಗಳು ಸಕಾರಾತ್ಮಕವಾಗಿ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಬೇಕು.ಕಾನೂನು ಚೌಕಟ್ಟಿನಲ್ಲಿ ಜನರಿಗೆ ನೆರವು ನೀಡಲು ಅಧಿಕಾರಿಗಳು ಹಿಂದೇಟು ಹಾಕಬಾರದು. 2025 ರೊಳಗೆ 11 ಸಾವಿರ ಪೊಲೀಸ್ ವಸತಿ ಗೃಹಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 2 ಸಾವಿರ ವಸತಿ ಗೃಹಗಳು ತಲೆ ಎತ್ತಲಿವೆ.ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಒಂದೇ ವರ್ಷದ ಅವಧಿಯಲ್ಲಿ 117 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. 8101 ಶಾಲೆಗಳ ಕಟ್ಟಡಗಳನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ತಲಾ 7 ಕೋಟಿ ರೂ.ವೆಚ್ಚದಲ್ಲಿ ರಾಜ್ಯದಲ್ಲಿ 81 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ.ಬಿಯಾಂಡ್ ಬೆಂಗಳೂರು ಕಾರ್ಯಕ್ರಮದಡಿ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳೂ ಸೇರಿ ಎರಡನೇ ಹಂತದ ಒಟ್ಟು ಆರು ನಗರಗಳಿಗೆ ಹೊಂದಿಕೊಂಡು ವಿಸ್ತೃತ ಹೊಸ ನಗರಗಳನ್ನು ನಿರ್ಮಿಸಲಾಗುವುದು.ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಪ್ರಾದೇಶಿಕ ಕೇಂದ್ರದ ಸ್ಥಾಪನೆಗೆ ಶೀಘ್ರ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ ಮಾತನಾಡಿ,ವರ್ಷದಲ್ಲಿ 117 ಪೊಲೀಸ್ ಠಾಣೆಗಳನ್ನು ನಿರ್ಮಿಸಿರುವುದು ದಾಖಲೆಯ ಕಾರ್ಯವಾಗಿದೆ.ಈ ಬಾರಿ ಬಜೆಟ್‌ನಲ್ಲಿ ಮುಖ್ಯಮಂತ್ರಿಯವರು ಪೊಲೀಸ್ ವಸತಿ ಗೃಹ ಹಾಗೂ ಠಾಣೆಗಳಿಗೆ ಸುಮಾರು ಒಂದು ಸಾವಿರ ಕೋಟಿ ರೂ.ನೀಡಿರುವುದು.ಪೊಲೀಸ್ ವಿದ್ಯಾನಿಧಿ ಮೂಲಕ ಪೊಲೀಸರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹವಾಗಿದೆ.ತಂತ್ರಜ್ಞಾನ ಮತ್ತು ವಿಜ್ಞಾನ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಅಳವಡಿಕೆಯಾಗಬೇಕು ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಿ,ಎಲ್ಲೆಡೆ ಸುಲಭವಾಗಿ ಹಂಚಿಕೆ ಮಾಡಿಕೊಳ್ಳಬಹುದಾದಂತಹ ವ್ಯವಸ್ಥೆ ಜಾರಿಗೊಳ್ಳಬೇಕು.ಆಧುನಿಕತೆ ಮತ್ತು ಪೊಲೀಸರ ಮಾನವೀಯತೆ ಜೊತೆ ಜೊತೆಯಾಗಿ ಸಾಗಬೇಕು ಎಂದರು.

ಗೃಹಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಎಂಟು ತಿಂಗಳ ಹಿಂದೆಯಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದ ಎರಡು ಪೊಲೀಸ್ ಠಾಣೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟಿಸಿರುವುದು‌ ಅನುಕರಣೀಯ ಸಂಗತಿಯಾಗಿದೆ.ಈ ಹಿಂದೆ ವರ್ಷಕ್ಕೆ ರಾಜ್ಯದಲ್ಲಿ 2 ರಿಂದ 3 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು.ಈಗ ವಾರ್ಷಿಕ‌ 100 ಕ್ಕೂ ಹೆಚ್ಚು ಠಾಣೆಗಳನ್ನು ನಿರ್ಮಿಸಲಾಗುತ್ತಿದೆ.ಶೇ.35 ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ.12 ಕ್ಕೆ ಇಳಿಕೆ ಮಾಡಲಾಗಿದೆ.ಶೀಘ್ರದಲ್ಲಿಯೇ 900 ಪಿಎಸ್‌ಐಗಳ ನೇಮಕಾತಿ ನಡೆಯಲಿದೆ.ನೇಮಕಾತಿಯಲ್ಲಿ ಶೇ.20 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.ಪೊಲೀಸ್ ಇಲಾಖೆಗೆ ಈ ವರ್ಷ ಅತ್ಯಂತ ಸವಾಲಿನದಾಗಿತ್ತು.ಹುಬ್ಬಳ್ಳಿ ಗಲಭೆಯನ್ನು ಇಲ್ಲಿನ ಪೊಲೀಸ್ ಆಯುಕ್ತ ಲಾಭೂರಾಮ್ ನೇತೃತ್ವದ ತಂಡ ಅತ್ಯಂತ ಸಮರ್ಥವಾಗಿ ಹಾಗೂ ಕ್ಷಿಪ್ರವಾಗಿ ತಹಬಂದಿಗೆ ತರುವ ಮೂಲಕ ಇಲ್ಲಿನ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು‌.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ,ಪೊಲೀಸರ ಕಾರ್ಯದಕ್ಷತೆ ಹೆಚ್ಚಳಕ್ಕೆ ,ಮೂಲಭೂತ ಸೌಕರ್ಯಗಳುಳ್ಳ ಠಾಣೆಗಳು,ತರಬೇತಿ ಕೇಂದ್ರಗಳು‌ ಅಗತ್ಯ.ಬೆಂಗಳೂರಿನ‌ ನಂತರ ರಾಜ್ಯದ ಎರಡನೇ ಅತಿದೊಡ್ಡ ಶಹರಗಳೆನಿಸಿರುವ ಹುಬ್ಬಳ್ಳಿ ಧಾರವಾಡ ಅವಳಿನಗರದ ಸಂಚಾರ ನಿರ್ವಹಣೆಗೆ ಸ್ಥಾಪಿಸಲು ಉದ್ದೇಶಿಸಿರುವ ಟ್ರಾಫಿಕ್ ಕಮಾಂಡ್ ಕಂಟ್ರೋಲ್ ಸೆಂಟರ್ 3.93 ಕೋಟಿ ರೂ.ಬಿಡುಗಡೆಯಾಗಿದೆ.ಇನ್ನು 4 ಕೋಟಿ ರೂ.ಗಳ ಅಗತ್ಯವಿದೆ.ರಾಜ್ಯ ಸರ್ಕಾರ ಕೂಡಲೇ ಅನುದಾನ ಒದಗಿಸಿ ತ್ವರಿತವಾಗಿ ಈ ಕೇಂದ್ರ ಸ್ಥಾಪಿಸಬೇಕು.ಬಾಂಬ್ ನಿಷ್ಕ್ರಿಯ ಘಟಕವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಬೇಕು.ಸರದಿಯಾಧಾರದಲ್ಲಿ ಪೊಲೀಸರಿಗೆ ಕರ್ತವ್ಯ ವಹಿಸಿ ಅವರ ಹಿತ ಕಾಯಬೇಕು ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ,ಹುಬ್ಬಳ್ಳಿ ಧಾರವಾಡ ಅವಳಿ ನಗರದ ರಸ್ತೆ ಸುಧಾರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ನೆರವು ನೀಡಿದ್ದಾರೆ.ಹುಬ್ಬಳ್ಳಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಾದೇಶಿಕ‌ ಕೇಂದ್ರದ ಸ್ಥಾಪನೆಗೆ ಮುಖ್ಯಮಂತ್ರಿಯವರು ಮುತುವರ್ಜಿ ವಹಿಸಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್ ಮಾತನಾಡಿ,ಹುಬ್ಬಳ್ಳಿಯಲ್ಲಿ ಈಗಾಗಲೇ ಎಂಟು ತಿಂಗಳ ಅವಧಿಯಲ್ಲಿ ಎರಡು ಪೊಲೀಸ್ ಠಾಣೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ.ಇಂದು ಶಂಕುಸ್ಥಾಪನೆಯಾಗಿರುವ ಮೂರು ಠಾಣೆಗಳನ್ನೂ ಕೂಡ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು.ಕೋರ್ಟಿನಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಶೇ.8 ರಿಂದ 10 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗುತ್ತಿವೆ.ಸೂಕ್ತ ಸಾಕ್ಷ್ಯಾಧರಗಳನ್ನು ಒದಗಿಸಿ ಶಿಕ್ಷೆಯ ಪ್ರಮಾಣವನ್ನು ಶೇ.60 ರಿಂದ 70 ಕ್ಕೆ ಏರಿಸಬೇಕು.ಈ ಹಿಂದೆ ವಿವಿಧ ಹೋರಾಟಗಳಲ್ಲಿ ಭಾಗವಹಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಆರೋಪಮುಕ್ತರಾಗಿರುವವರು ಈವರೆಗೂ ರೌಡಿಶೀಟರ್‌ಗಳಾಗಿ ಮುಂದುವರೆದಿದ್ದಾರೆ.ಅದನ್ನು ಪರಿಶೀಲಿಸಿ ಪಟ್ಟಿಯಿಂದ ಅಂತಹ ವ್ಯಕ್ತಿಗಳನ್ನು ಕೈ ಬಿಡಬೇಕು ಎಂದರು.

ಗಣಿ,ಭೂವಿಜ್ಞಾನ ,ಮಹಿಳಾ,ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ,ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ,ಪ್ರದೀಪ ಶೆಟ್ಟರ್,ಎಸ್.ವಿ.ಸಂಕನೂರ,ಶಾಸಕರಾದ ಅಮೃತ ದೇಸಾಯಿ,ಸಿ.ಎಂ.ನಿಂಬಣ್ಣವರ,ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ,ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ರಾಜೇಶ ಕೋಟೆಣ್ಣವರ,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮೇಯರ್ ಈರೇಶ ಅಂಚಟಗೇರಿ,ಉಪಮೇಯರ್ ಉಮಾ ಮುಕುಂದ್,ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್,ಎಡಿಜಿಪಿ ಅರುಣ ಚಕ್ರವರ್ತಿ, ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕ,ಎನ್.ಸತೀಶಕುಮಾರ,ಜಿಲ್ಲಾಧಿಕಾರಿ ಗುರುದತ್ತ ಹೆಗಡೆ,ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಬಿ.ಜಗಲಾಸರ್,ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್,ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ,ಜಿಪಂ‌ ಸಿಇಓ ಡಾ.ಸುರೇಶ ಇಟ್ನಾಳ,ಕೆಎಸ್‌ಪಿಹೆಚ್ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಬಿ.ಎಸ್.ಮತ್ತಿತರರು ವೇದಿಕೆಯಲ್ಲಿದ್ದರು.

ನೂತನ ಪೊಲೀಸ್ ಠಾಣೆಗಳ ಉದ್ಘಾಟನೆ

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮವು 2.12 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಕಸಬಾ ಪೇಟ ಪೊಲೀಸ್ ಠಾಣೆ,1.94 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳನ್ನು ಮುಖ್ಯಮಂತ್ರಿಯವರು ಉದ್ಘಾಟಿಸಿದರು‌. ಕಂಪ್ಯೂಟರ್ ,ಆಯುಧ,ವರದಿ,ವಿಚಾರಣಾ ಕೊಠಡಿಗಳು,ಪುರುಷ ಮತ್ತು ಮಹಿಳಾ ಲಾಕ್ ಅಪ್,ಪ್ಯಾಂಟ್ರಿ,ದಾಖಲೆಗಳ ಕೊಠಡಿ ,ಸಭಾಂಗಣ ,ಶೌಚಾಲಯ ಮತ್ತಿತರ ಸೌಕರ್ಯಗಳನ್ನು ಹೊಂದಿವೆ.

7.49 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಗೋಕುಲ ರಸ್ತೆ,ವಿದ್ಯಾನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.