Home » ಜ್ಞಾನ ಸಮಾಜ, ದೇಶ ಹಾಗೂ ವಿಶ್ವದ ಒಳಿತಿಗೆ ಬಳಕೆಯಾಗಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜ್ಞಾನ ಸಮಾಜ, ದೇಶ ಹಾಗೂ ವಿಶ್ವದ ಒಳಿತಿಗೆ ಬಳಕೆಯಾಗಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

by manager manager

ಬೆಂಗಳೂರು, ಸೆಪ್ಟೆಂಬರ್ 05: ಜ್ಞಾನವು ಸಮಾಜ, ದೇಶ ಹಾಗೂ ವಿಶ್ವದ ಒಳಿತಿಗೆ ಬಳಕೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಉನ್ನತ ಶಿಕ್ಷಣ ಇಲಾಖೆಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಕ್ಕಳಿಂದಲೂ ಕಲಿಯಲು ಬಹಳಷ್ಟಿರುತ್ತದೆ. ಮಕ್ಕಳು, ಶಿಕ್ಷಕರಿಗೆ ತಮ್ಮದೇ ಆದ ಬುದ್ಧಿಮತ್ತೆ ಇರುತ್ತದೆ. ಅವುಗಳನ್ನು ಗೌರವಿಸಬೇಕು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಯಶಸ್ಸಿನಲ್ಲಿ ತಮ್ಮ ಯಶವನ್ನು ಕಾಣಬೇಕು. ಒಳ್ಳೆಯ ಕೆಲಸ ಮಾಡಿದ ನಂತರದ ಚಿಂತನೆ ನಮ್ಮಲ್ಲಿ ಪ್ರೇರಣೆಯನ್ನು ತುಂಬುತ್ತದೆ. ಸ್ವಾಮಿ ವಿವೇಕಾನಂದರು, ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಸಾವಿನ ನಂತರವೂ ಜನರ ಮನಸ್ಸಿನಲ್ಲಿ ನಿಲ್ಲುವವನು ನಿಜವಾದ ಸಾಧಕ. ಯಶಸ್ಸು ಬೇರೆ, ಸಾಧನೆ ಬೇರೆ. ನಿಮ್ಮ ಯಶಸ್ಸು , ಜನರಿಗೆ ಪ್ರಯೋಜನವಾದರೆ ಅದು ನಿಜವಾದ ಸಾಧನೆ. ನಿಮ್ಮ ಜ್ಞಾನ ಸಮಾಜ, ದೇಶ ಹಾಗೂ ವಿಶ್ವದ ಒಳಿತಿಗೆ ಬಳಕೆಯಾಗಬೇಕು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇತಿಹಾಸ ಬರೆದ ಹೊಸ ಶಿಕ್ಷಣ ನೀತಿ :

ಉನ್ನತ ಶಿಕ್ಷಣದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಎನ್ ಇ ಪಿ ಸುಲಭವಾಗಿ ಹೊಂದಿಕೊಳ್ಳುವ ಕಾರ್ಯಸಾಧ್ಯವಾಗುವ, ಜೀವನದ ಪಾಠಗಳನ್ನು ಕಲಿಸುವ ಶಿಕ್ಷಣ ನೀತಿಯಾಗಿದೆ. ಸಮಗ್ರ ಆಧ್ಯಯನದ ನಂತರ ಆಗಿರುವ ಪರಿಣಾಮಕಾರಿಯಾದ ಶಿಕ್ಷಣ ನೀತಿಯಿದು. ರಾಜ್ಯದ ವಿದ್ಯಾರ್ಥಿಗಳು ಇದನ್ನು ಯಶಸ್ವಿಗೊಳಿಸಿದ್ದಾರೆ. ಹೊಸ ಶಿಕ್ಷಣ ನೀತಿಯ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲಾಗಿದೆ ಎಂದರು.

ಮಕ್ಕಳಲ್ಲಿ ಕುತೂಹಲ ಉಳಿಸಿ

ನಿರಂತರ ಮತ್ತು ಸಂರಚಿತ ಅಭಿವೃದ್ಧಿ ಸಾಧ್ಯವಾಗಿರುವುದು ಗುರುಗಳಿಂದ. ಶಿಸ್ತನ್ನು ರೂಢಿಸಿರುವವರು ಶಿಕ್ಷಕರು. ಶಿಕ್ಷಣದ ಜೀವಾಳ ಶಿಕ್ಷಕರು. ಕುತೂಹಲವನ್ನು ಉಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ತಾರ್ತಿಕ, ತಾತ್ವಿಕ ಅರ್ಥವನ್ನು ಹುಡುಕಲು ಪ್ರಶ್ನೆ ಹಾಕುವುದು ಅಗತ್ಯ. ಪ್ರಶ್ನೆ ಕೇಳುವ ಹಕ್ಕು ಶಿಕ್ಷಕರಿಗಿಂತ ವಿದ್ಯಾರ್ಥಿಗಳಿಗಿದೆ. ಯಾವಾಗ ಈ ವ್ಯವಸ್ಥೆ ಜಾರಿಗೆ ಬರುತ್ತದೋ ಆಗ ದೊಡ್ಡ ವಿಕಾಸ ಜಗತ್ತಿನಲ್ಲಿ ಕಾಣಲು ಸಾಧ್ಯ. ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯ ಎರಡು ಮುಖಗಳು ಎಂದರು.

ಶಿಕ್ಷಕರ ಸ್ವಾಸ್ಥ್ಯ ಸಮಾಜದ ಸ್ವಾಸ್ಥ್ಯಕ್ಕೆ ಅತ್ಯಗತ್ಯ.

ಶಿಕ್ಷಕರ ಸ್ವಾಸ್ಥ್ಯ ಸಮಾಜದ ಸ್ವಾಸ್ಥ್ಯಕ್ಕೆ ಅತ್ಯಗತ್ಯ. ಸಮಾಜದಲ್ಲಿ ಸ್ವಾಸ್ಥ್ಯವನ್ನು, ನೈತಿಕತೆಯ ಸ್ವಾಸ್ಥ್ಯವನ್ನು ಶಿಕ್ಷಕರು ಮಾತ್ರ ಕಾಪಾಡಲು ಸಾಧ್ಯ. ಪೋಷಕರು ಮಕ್ಕಳನ್ನು ಶಿಕ್ಷಕರ ಕೈಗೆ ಒಪ್ಪಿಸಿರುತ್ತಾರೆ. ಶಿಕ್ಷಕರು ಅವರನ್ನು ಹೇಗೆ ರೂಪಿಸುತ್ತಾರೊ ಹಾಗೇ ಮಕ್ಕಳು ರೂಪುಗೊಳ್ಳುತ್ತಾರೆ. ಮಕ್ಕಳಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಹರಿಸಬೇಕು. ಮಕ್ಕಳೊಂದಿಗೆ ಸಂಪರ್ಕ ಸಾಧಿಸುವ, ಸ್ಪೂರ್ತಿ ತುಂಬುವ, ಉದಾಹರಣೆಯಾಗುವ ಶಿಕ್ಷಕರ ಬಗ್ಗೆ ಗೌರವವಿದೆ. ಇಂದಿನ ಶಿಕ್ಷಕರಿಗೆ ಸ್ಪರ್ಧೆ ಇರುವುದು ಗೂಗಲ್ ಜೊತೆಗೆ. ತಂತ್ರಜ್ಞಾನ ಜೀವನವನ್ನು ಮುನ್ನಡೆಸುವಂಥ ವಾತಾವರಣವಿದೆ. ನೈತಿಕತೆಯೂ ತಾಂತ್ರಿಕತೆಯ ಮೂಲಕ ಬರುತ್ತಿದೆ. ಮಕ್ಕಳ ಭವಿಷ್ಯವೇನು ಎಂಬುದೇ ಈಗ ಸವಾಲು ಎಂದರು.

ಆಲೋಚನೆಗಳಲ್ಲಿ ಸ್ಪಷ್ಟತೆ ಇರಬೇಕು.

ಸ್ವಾಮಿ ವಿವೇಕಾನಂದರ ಆಲೋಚನೆಗಳಲ್ಲಿ ಸಂಶಯಕ್ಕೆ ಆಸ್ಪದವಿರಲಿಲ್ಲ. ಹಾಗೆಯೇ ಶಿಕ್ಷಕರೂ ಇರಬೇಕು. ಆಲೋಚನೆಗಳಲ್ಲಿ ಸ್ಪಷ್ಟತೆ ಇರಬೇಕು. ಆಗ ವಿದ್ಯಾರ್ಥಿಗಳು ನಂಬುತ್ತಾರೆ. ಬದುಕಿಗೆ ಹತ್ತಿರವಿರಬೇಕು. ತಾರ್ತಿಕವಾಗಿ ಆಲೋಚನೆ ಮಾಡುವುದನ್ನು ಕಲಿಸಬೇಕು. ಆಗ ವಿದ್ಯಾರ್ಥಿಗಳು ಶಿಕ್ಷಕರನ್ನೂ ಸದಾ ನೆನಪಿನಲ್ಲಿಡುತ್ತಾರೆ ಎಂದರು