ತಮ್ಮ ತ್ವಚೆ ಅತಿ ಕೋಮಲವಾಗಿರಬೇಕೆಂಬುದು ಪ್ರತಿಯೊಬ್ಬರ ಅಭಿಲಾಷೆ. ಆದರೆ ಇಂದು ಬಿಸಿಲಿನ ತಾಪ, ಧೂಳು, ಮಾಲಿನ್ಯದಿಂದಾಗಿ ಚರ್ಮದ ಕಾಂತಿ ಹಾಳಾಗುತ್ತಿದೆ. ಹೀಗಾಗಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಸತತ ಆರೈಕೆ ಮತ್ತು ಪೋಷಣೆ ಅಗತ್ಯ. ಅಲ್ಲದೆ ಅತಿಯಾದ ಒತ್ತಡದಿಂದಾಗಿಯೇ ಹೆಚ್ಚು ವಯಸ್ಸಾದ ಲಕ್ಷಣಗಳು ಚಿಕ್ಕ ವಯಸ್ಸಿನವರಲ್ಲೇ ಕಾಣುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹೀಗಾಗಿ ಮುಖದಲ್ಲಿ ನೆರಿಗೆ, ಸುಕ್ಕು ಕಾಣಿಸಿಕೊಂಡರೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ(Face care tips).
ಇದಕ್ಕಾಗಿ ಮನೆಯಲ್ಲೇ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು. ನಿಮ್ಮ ಚರ್ಮ ಶೀಘ್ರ ಹೊಳೆಯುವಂತೆ ಮಾಡಲು ಇಂದು ಕನ್ನಡ ಅಡ್ವೈಜರ್ ಪರಿಣಾಮಕಾರಿಯಾದ ಉಪಾಯಗಳನ್ನು ನಿಮ್ಮ ಮುಂದೆ ಇಡುತ್ತಿದೆ. ಆ ಸರಳ ಮಾರ್ಗೋಪಾಯಗಳು ಈ ಕೆಳಗಿನಂತಿವೆ ನೋಡಿ..

ಬಾದಾಮಿ ಎಣ್ಣೆ, ಆಲೀವ್ ಎಣ್ಣೆಗಳು ಚರ್ಮಕ್ಕೆ ಬೇಕಾದ ನೈಸರ್ಗಿಕ ತೈಲವನ್ನು ಒದಗಿಸುತ್ತವೆ. ಜೊತೆಗೆ ಇತರ ಸಮಸ್ಯೆಗಳಿಗೆ ತಡೆಯೊಡ್ಡುತ್ತವೆ. ಹೀಗಾಗಿ ಇವುಗಳನ್ನು ಚರ್ಮ ಸಂರಕ್ಷಣೆಯ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬೇಕು.

ಮಾವಿನ ಹಣ್ಣನ್ನು ಪ್ರತಿದಿನ ಮಿತವಾಗಿ ಸೇವಿಸುವುದರಿಂದ ದೇಹದ ಸೌಂದರ್ಯ ಹೆಚ್ಚುವುದಲ್ಲದೆ ಶರೀರದ ಬಣ್ಣದಲ್ಲಿ ಹೊಳಪು ಕಾಣುವುದು.

ಬೆಟ್ಟದ ನೆಲ್ಲಿಕಾಯಿ ರಸವನ್ನು ಅಂಗೈಗೆ ಹಚ್ಚಿಕೊಂಡರೆ ಬೆವರುವುದು ಕಡಿಮೆಯಾಗುವುದು.

ಹಸಿ ಕೊಬ್ಬರಿ ಹಾಲಿಗೆ ಗ್ಲಿಸರಿನ್ ಬೆರೆಸಿ ಚರ್ಮಕ್ಕೆ ಹಚ್ಚುತ್ತಿದ್ದರೆ ಚರ್ಮ ಮೃದುವಾಗುವುದಲ್ಲದೇ ಹೊಳಪು ಹೆಚ್ಚುವುದು.

ಕಡಲೆಹಿಟ್ಟನ್ನು ದಿನವೂ ಸ್ನಾನ ಮಾಡುವಾಗ ಸೋಪಿಗೆ ಬದಲಾಗಿ ಉಪಯೋಗಿಸಿದರೆ ಚರ್ಮ ಮೃದುವಾಗುವುದಲ್ಲದೆ ಕಲೆ ಕಡಿಮೆ ಆಗುವುದು.

ಸೌತೆಕಾಯಿ ಚೂರುಗಳಿಂದ ಮುಖ ಉಜ್ಜಿಕೊಳ್ಳುತ್ತಿದ್ದರೆ ಕಾಂತಿ ವೃದ್ದಿಸುವುದರ ಜೊತೆ ಚರ್ಮ ಒಡೆಯುವುದು ಕಡಿಮೆಯಾಗುವುದು.

ಚೆನ್ನಾಗಿ ನಿದ್ರೆ ಮಾಡುವುದರಿಂದ ಹೊಸ ಕೋಶಗಳು ಬೆಳೆಯುತ್ತವೆ. ನಿದ್ರೆಯಿಂದ ಚರ್ಮವನ್ನು ಆರೋಗ್ಯಕರವಾಗಿಡುವ ಕೊಲೆಗನ್ ಉತ್ಪಾದನೆ ಹೆಚ್ಚುತ್ತದೆ.

ದಿನಕ್ಕೆ ಅರ್ಧ ಗಂಟೆ ವ್ಯಾಯಾಮ ಮಾಡುವುದು ಉತ್ತಮ. ಇದರ ಫಲವಾಗಿ ರಕ್ತದ ಪರಿಚಲನೆ ಸುಧಾರಣೆಯಾಗುತ್ತದೆ. ಹೀಗಾಗಿ ಚರ್ಮದ ಕೋಶಗಳು ಆರೋಗ್ಯಕರವಾಗಿರುತ್ತವೆ.

ಅರಿಶಿನ ಪುಡಿಯನ್ನು ಮೈಗೆ ತಿಕ್ಕಿ ಸ್ನಾನ ಮಾಡುತ್ತಿದ್ದರೆ ಮೈಕಾಂತಿ ಹೆಚ್ಚುವುದು. ಅರಿಶಿನ ಮತ್ತು ಶ್ರೀಗಂಧವನ್ನು ಹಾಲಿನ ಕೆನೆಯೊಂದಿಗೆ ಮಿಶ್ರಮಾಡಿ ಹಚ್ಚಿಕೊಂಡರೆ ಮೊಡವೆಗಳು ಮಾಗುತ್ತವೆ ಹಾಗೂ ಚರ್ಮದ ಕಾಂತಿ ಹೆಚ್ಚುತ್ತದೆ.