ಅಮೃತಬಳ್ಳಿ ಅಮೃತಕ್ಕೆ ಸಮಾನ: ಅದರ ಪ್ರಯೋಜನಗಳು, ವಿವಿಧ ಆರೋಗ್ಯ ಸಮಸ್ಯೆಗೆ ಬಳಕೆ ಹೇಗೆ ಗೊತ್ತೇ?
ಅಮೃತಬಳ್ಳಿಯಲ್ಲಿ ಅಮೃತವೇ ಇದೆ ಎಂದರೇ ತಪ್ಪಾಗಲಾರದು. ಏಕೆಂದರೆ ವಿಶಿಷ್ಟವಾದ ಪೊದೆಯ ರೂಪದಲ್ಲಿ ಹಾಗೂ ಮರಕ್ಕೆ ಹಬ್ಬುವುದರ ಮೂಲಕ ಬೆಳೆಯುವ ಇದು, ಬೂದಿ ಮಿಶ್ರಿತ ತೊಗಟೆಯನ್ನು ಹೊಂದಿದ್ದು, ಹಾಲು ಮಿಶ್ರಿತ ಹಳದಿ ಬಣ್ಣದ ಹೂವನ್ನು ಬಿಡುತ್ತದೆ ಹಾಗೂ ಇದರ ಕಾಯಿ ಹಣ್ಣಾದಾಗ ಗಾಢವಾದ ಕೆಂಪು ಬಣ್ಣವನ್ನು ಹೋಲುವ ಇದರ ಕಾಂಡ, ಎಲೆ ಹಾಗೂ ಬೇರುಗಳಿಂದ ಔಷಧಿಯನ್ನು ತಯಾರಿಸಲಾಗುವುದು. ಇದನ್ನು ಗುಡುಚಿ ಎಂತಲೂ ಕರೆಯುತ್ತಾರೆ. ಅಮೃತಬಳ್ಳಿಯ ಎಲೆಗಳಿಗಿಂತ ಕಾಂಡ ಹೆಚ್ಚಿನ ಶಕ್ತಿ ಹೊಂದಿದೆ. ಔಷಧ ತಯಾರಿಕೆಗೆ ಅಥವಾ ಅಮೃತಬಳ್ಳಿಯ ಪುಡಿ ತಯಾರಿಸಲು ಇದರ ಕಾಂಡವನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ. ಇದು ಕಷಾಯ ತಯಾರಿಕೆಗೆ ಸೂಕ್ತ ಚೂರ್ಣ.
ಅಮೃತಬಳ್ಳಿಯ ಪ್ರಯೋಜನಗಳು
ಡೆಂಗೆ ನಿವಾರಣೆಗೂ ಬೆಸ್ಟ್ :– ಕೊರೊನಾ ಜತೆಗೆ ಡೆಂಗೆ ಜ್ವರದ ಪ್ರಮಾಣವೂ ವ್ಯಾಪಕವಾಗಿದ್ದು, ಅಂಥವರು ವೈದ್ಯೋಪಚಾರದ ಜತೆಗೆ ಸೇವನೆ ಮಾಡಬಹುದು.
ಮಾಡುವ ವಿಧಾನ
ಅಮೃತಬಳ್ಳಿಯ ಎಲೆಗಳನ್ನು ಅರೆದು 2 ರಿಂದ 3 ಚಮಚ ರಸವನ್ನು ದಿನಕ್ಕೆರಡು ಬಾರಿ ಕುಡಿಯುವುದರಿಂದ ಜ್ವರದ ತೀವ್ರತೆ ಕಡಿಮೆಯಾಗುವುದು ಮತ್ತು ರಕ್ತದ ಪ್ಲೇಟ್‍ಲೆಟ್ ಪ್ರಮಾಣ ಅಧಿಕಗೊಳ್ಳಲು ಸಹಕಾರಿಯಾಗುತ್ತದೆ.
ಯಕೃತ್ ಸಮಸ್ಯೆ ನಿವಾರಣೆ :- ಯಕೃತ್ತಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಅಮೃತಬಳ್ಳಿ ಗುಣಪಡಿಸುವುದು. ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಣೆ ಮಾಡುವುದು.
ಮಾಡುವ ವಿಧಾನ
ಅಮೃತ ಬಳ್ಳಿಯ ಒಂದು ಹಸಿ ತುಂಡು, ಬೇವಿನ ಚಿಗುರು ಎಲೆ, ಸ್ವಲ್ಪ ಹಿಪ್ಪಲಿಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಹಾಕಿ. ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ. ಮುಂಜಾನೆ ಸಾಮಾಗ್ರಿಗಳನ್ನು ನೀರಿನಿಂದ ಕಿವುಚಿ ತೆಗೆಯಿರಿ. ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು. ನಿತ್ಯ ಮುಂಜಾನೆ ಮತ್ತು ರಾತ್ರಿ ಸೇರಿದಂತೆ ಎರಡು ಬಾರಿ ಸೇವಿಸ ಬೇಕು. 10 ರಿಂದ 15 ದಿನಗಳ ಕಾಲ ಈ ಪ್ರಕ್ರಿಯೆ ಮುಂದುವರಿಸಿದೆ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆ ಹಾಗೂ ಹೊಟ್ಟೆಯಲ್ಲಿ ಉಂಟಾಗುವ ಅನೇಕ ತೊಂದರೆಗಳು ನಿವಾರಣೆಯಾಗುವವು.
ದೃಷ್ಟಿ ದೋಷಕ್ಕೆ ರಾಮಬಾಣ :– ದೃಷ್ಟಿ ದೋಷ ಅಥವಾ ದೃಷ್ಟಿ ಮಾಂದ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿ ಅತ್ಯುತ್ತಮ ಚಿಕಿತ್ಸೆ ನೀಡುವುದು.
ಮಾಡುವವಿಧಾನ
ಅಮೃತ ಬಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ 2 ಲೋಟ ನೀರನ್ನು ಸೇರಿಸಿ. ನೀರಿನ ಪಾತ್ರೆಗೆ ಅಮೃತ ಬಳ್ಳಿಯ ತುಂಡನ್ನು ಸೇರಿಸಿ, ಚೆನ್ನಾಗಿ ಕುದಿಸಿ. ನಂತರ ದ್ರಾವಣವನ್ನು ಸೋಸಿ, ಸ್ವಲ್ಪ ತ್ರಿಫಲ ಚೂರ್ಣ ಹಾಗೂ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದನ್ನು 45 ದಿನಗಳ ಕಾಲ ನಿತ್ಯವೂ ಸೇವಿಸುವುದರಿಂದ ದೃಷ್ಟಿ ದೋಷಗಳನ್ನು ನಿವಾರಿಸಬಹುದು. ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಇರುವವರು ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ಬಹುಬೇಗ ನಿವಾರಣೆಯಾಗುವುದು.
ವಾಕರಿಕೆ/ವಾಂತಿಯನ್ನು ನಿವಾರಣೆಗೊಳಿಸುತ್ತದೆ :- ವಾಂತಿಯನ್ನು ಬಲು ಸುಲಭವಾಗಿ ನಿಯಂತ್ರಿಸುವುದು ಅಮೃತ ಬಳ್ಳಿ.
ಮಾಡುವ ವಿಧಾನ :-
ಸ್ವಲ್ಪ ಅಮೃತ ಬಳ್ಳಿ ತುಂಡುಗಳನ್ನು ತೆಗೆದುಕೊಂಡು, ಚೆನ್ನಾಗಿ ಜಜ್ಜಿ. ಬಳಿಕ ನೀರಲ್ಲಿ ಹಾಕಿ, ಸ್ವಲ್ಪ ಸಮಯ ನೆನೆಯಿಡಿ. ಅಮೃತ ಬಳ್ಳಿಯನ್ನು ಕಿವುಚಿ ತೆಗೆದು, ನೀರನ್ನು ಸೋಸಿ. ಬಳಿಕ ಆ ದ್ರಾವಣವನ್ನು ಸೇವಿಸಿ.
ಕೂದಲು ಸೊಂಪಾಗಿ ಬೆಳೆಯುವುದಕ್ಕೆ :- ಅಮೃತ ಬಳ್ಳಿಯ ಚಪ್ಪರದ ಕೆಳಗೆ ನಿತ್ಯವೂ ಸ್ವಲ್ಪ ಹೊತ್ತು ಕುಳಿತುಕೊಂಡರೂ ಸಾಕು ತಲೆಕೂದಲಿಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ಕೂದಲು ಸೊಂಪಾಗಿ ಬೆಳೆಯುವುದು. ಅಮೃತ ಬಳ್ಳಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಿಸಿಕೊಳ್ಳಬಹುದು.
ಮಾಡುವ ವಿಧಾನ
ಅಮೃತ ಬಳ್ಳಿಯನ್ನು ಜಜ್ಜಿ, ನೀರಿಗೆ ಹಾಕಿ ಕುದಿಸಿದ ನಂತರ ಕಷಾಯ ಸಾಕಷ್ಟು ಇಂಗಿದ ಮೇಲೆ, ಸಮಪ್ರಮಾಣದಲ್ಲಿ ಎಳ್ಳೆಣ್ಣೆಯನ್ನು ಸೇರಿಸಿ. ಪುನಃ ಕುದಿಯಲು ಇಡಿ. ಸ್ವಲ್ಪ ಕುದಿಯಲು ಪ್ರಾರಂಭಿಸಿದ ಬಳಿಕ ಪಚ್ಚ ಕರ್ಪೂರವನ್ನು ಸೇರಿಸಿ. ನೀರಿನಂಶ ಹೋಗುವವರೆಗೆ ಕುದಿಸಬೇಕು. ಸ್ವಲ್ಪ ಸಮಯ ಆರಲು ಬಿಟ್ಟು, ಸೋಸಿಕೊಳ್ಳಿ. ಸೋಸಿದ ಎಣ್ಣೆಯನ್ನು ನಿತ್ಯವೂ ನೆತ್ತಿಗೆ ಅನ್ವಯಿಸಿಕೊಳ್ಳುವುದರಿಂದ ಕೂದಲ ಸಮಸ್ಯೆ ನಿವಾರಣೆಯಾಗುವುದು.
ಹುಳಿ ತೇಗು ಅಥವಾ ಗ್ಯಾಸ್ಟ್ರಿಕ್ ಅನ್ನು ದೂರವಿಡುವಲ್ಲಿ ಸಹಕಾರಿ :- ಅತಿಯಾದ ಹುಳಿ ತೇಗು, ಗಂಟಲು ಉರಿ, ಎದೆ ಉರಿ ಅನುಭವಿಸುವವರಿಗೆ ಈ ಸಮಸ್ಯೆಗೆ ಅಮೃತ ಬಳ್ಳಿ ಉತ್ತಮ ರೀತಿಯಲ್ಲಿ ಆರೈಕೆ ಮಾಡುವುದು ಉತ್ತಮ.
ಮಾಡುವ ವಿಧಾನ
ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ. ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ ಕುದಿಸಿ. ಕುದಿಸಿಕೊಂಡ ಕಷಾಯವನ್ನು ಸೋಸಿ ತೆಗೆದಿಟ್ಟುಕೊಳ್ಳಿ. ಗಣನೀಯವಾಗಿ ಈ ಸೇವಿಸುತ್ತಾ ಬಂದರೆ ಹುಳಿತೇಗು ಅಥವಾ ಗ್ಯಾಸ್ಟ್ರಿಕ್ ಅಂತಹ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು.
ಅಧಿಕ ತೂಕ ಹೊಂದಿದವರಿಗೆ: ತೂಕ ಇಳಿಸಲು ಅಮೃತಬಳಿ ಸಹಕಾರಿ, ಇದರಲ್ಲಿ ಬೊಜ್ಜನ್ನು ಕರಗಿಸುವ ದಿವ್ಯ ಗುಣವಿದೆ.
ಮಾಡುವ ವಿಧಾನ
ಅಮೃತ ಬಳ್ಳಿಯನ್ನು ತುಂಡರಿಸಿಕೊಳ್ಳಿ. ನೀರಿಗೆ ಅಮೃತ ಬಳ್ಳಿಯ ತುಂಡು ಮತ್ತು ತ್ರಿಫಲ ಚೂರ್ಣವನ್ನು ಸೇರಿಸಿ ಕುದಿಸಿ. ನಂತರ ಕುದಿಸಿ ಸೋಸಿಕೊಂಡ ಕಷಾಯಕ್ಕೆ ಲೋಹ ಬಸ್ಮ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ. ಇದು 45 ದಿನಗಳ ಕಾಲ ಗಣನೀಯವಾಗಿ ಕಷಾಯವನ್ನು ಸೇವಿಸುವುದರಿಂದ ದೇಹದ ತೂಕ ಇಳಿಯುವುದು.
ಹೃದಯ ಆರೋಗ್ಯಕ್ಕೆ ಅಮೃತ ಬಳ್ಳಿ ಬೇಕೆಬೇಕು :– ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ನಿವಾರಿಸುವುದು. ಅನಿರೀಕ್ಷಿತವಾಗಿ ಹೆಚ್ಚುವ ಹೃದಯ ಬಡಿತ ಹಾಗೂ ಅನಿರೀಕ್ಷಿತವಾಗಿ ಕಡಿಮೆಯಾಗುವ ಹೃದಯ ಬಡಿತದ ಸಮಸ್ಯೆಗಳಿಗೆ ಸೂಕ್ತ ಆರೈಕೆ ಮಾಡುವುದು.
ಮಾಡುವ ವಿಧಾನ
ಅಮೃತ ಬಳ್ಳಿಯನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ನೆನೆಹಾಕಿ. ರಾತ್ರಿ ನೀರಿನಲ್ಲಿ ನೆನೆಯಲು ಬಿಡಿ. ಮುಂಜಾನೆ ಚೆನ್ನಾಗಿ ಕಿವುಚಿ ತೆಗೆಯಿರಿ, ಸೋಸಿಕೊಂಡ ದ್ರಾವಣಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ, ಕುಡಿಯಬೇಕು. ಇದನ್ನು ನಿತ್ಯವು ಗಣನೀಯವಾಗಿ ಸೇವಿಸಿದರೆ ಸಮಸ್ಯೆ ನಿವಾರಣೆಯಾಗುವುದು.
ಕಿವಿ ನೋವು ನಿವಾರಣೆ ಮಾಡುತ್ತದೆ ಈ ಅಮೃತಬಳ್ಳಿ :- ಕೆಲವರಿಗೆ ಆಗಾಗ ಕಿವಿ ನೋವು ಕಾಣಿಸಿಕೊಳ್ಳುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಬಹುಬೇಗ ಉಪಶಮನ ನೀಡುವುದು ಅಮೃತ ಬಳ್ಳಿ.
ಮಾಡುವ ವಿಧಾನ
ಅಮೃತ ಬಳ್ಳಿಯನ್ನು ಜಜ್ಜಿ ರಸವನ್ನು ತೆಗೆಯಿರಿ.ಸೋಸಿಕೊಂಡ ರಸದ ಒಂದೊಂದು ಹನಿಯನ್ನು ಎರಡು ಕಿವಿಗೆ ಬಿಡಿ, ಇದರಿಂದ ಕಿವಿ ನೋವು ಬಹುಬೇಗ ನಿವಾರಣೆಯಾಗುವುದು.