ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನೀಡಲಾಗುವ ‘ಇನ್‌ಸ್ಪೈರ್’ (INSPIRE) ಪ್ರಶಸ್ತಿ-2022 ಪುರಸ್ಕೃತ ರಾಜ್ಯದ 9 ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಅಭಿನಂದಿಸಿದ್ದಾರೆ.
10ರಿಂದ 15 ವರ್ಷ ವಯೋಮಾನದ ಮಕ್ಕಳಲ್ಲಿನ ನವೀನ ಆಲೋಚನೆಗಳಿಗೆ ಒಂದು ರೂಪವನ್ನು ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಇನ್‌ಸ್ಪೈರ್ ಪ್ರಶಸ್ತಿ ನೀಡಲಾಗುತ್ತದೆ. ದೇಶದ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ನವೀನ ಆಲೋಚನೆಗಳ ವಸ್ತು ಮಾದರಿಗಳ 6.53 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ 60 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪೈಕಿ ಕರ್ನಾಟಕ ರಾಜ್ಯದಿಂದಲೇ 9 ವಿದ್ಯಾರ್ಥಿಗಳ ಯೋಜನೆಗಳು ಪ್ರಶಸ್ತಿಗೆ ಭಾಜನವಾಗಿವೆ.
ಪ್ರಶಸ್ತಿ ಪುರಸ್ಕೃತ ಸುಗಲಿ ಯಶಸ್ ಕುಮಾರ್, ಪುಟ್ಟವ್ವ ರಮೇಶ್, ರಿತೇಶ್.ಎಂ, ಮಲ್ಲಿಕಾ, ಧನ್ಯ ಚಂದ್ರಶೇಖರ್ ಹಾಗೂ ಸಾಯಿ ನಾಥ್ ಮಲ್ಡಾಕರ್, ಕೀರ್ತಿ ಪಟೇಲ್, ಲಾಸ್ಯ ಚಂದ್ರಶೇಖರ್ ತಾವರೆ, ರೋಹಿಣಿ ಗಂಗಾರಾಂ ದೊಡ್ಡಮನಿ ಅವರು ಸಿದ್ದಪಡಿಸಿದ ಯೋಜನೆಗಳಿಗೆ ಪ್ರಶಸ್ತಿ ಲಭಿಸಿದೆ.
ವಿದ್ಯಾರ್ಥಿಗಳ ಆಸಕ್ತಿ, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ ಶಿಕ್ಷಕರು, ಮಾರ್ಗದರ್ಶಕರು, ಪೋಷಕರು, ಡಿಎಸ್ಇಆರ್‌ಟಿ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಸೇರಿದಂತೆ ಈ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಸಚಿವ ನಾಗೇಶ್ ಅವರು ಅಭಿನಂದನೆ ತಿಳಿಸಿದ್ದಾರೆ.