Home » ಯಾರು ಗೆದ್ದರೇ ನಮಗೇನು? ಎಜುಕೇಟೆಡ್‌ಗಳೇ ಹಿಂಗ್ ಅಂದ್ರೆ ಯಂಗ್ ಸ್ವಾಮಿ..

ಯಾರು ಗೆದ್ದರೇ ನಮಗೇನು? ಎಜುಕೇಟೆಡ್‌ಗಳೇ ಹಿಂಗ್ ಅಂದ್ರೆ ಯಂಗ್ ಸ್ವಾಮಿ..

by manager manager

ಮೊನ್ನೆ ಮೊನ್ನೆ ಹೀಗೆ ಸ್ನೇಹಿತರ ಗುಂಪೊಂದು ಪ್ರಸ್ತುತ ಚುನಾವಣೆಯ ಬಗ್ಗೆ ಎಲ್ಲಾ ಮಜಲುಗಳಿಂದಲೂ ಯಾರು ಗೆಲ್ಲಬೇಕು? ಯಾರು ಗೆಲ್ಲಬಹುದು? ಯಾರು? ಯಾಕೆ? ಗೆಲ್ಲಬೇಕು, ಗೆಲ್ಲಬಾರದು. ಇತ್ಯಾದಿ ಚರ್ಚೆಗಳು ನಡೆಯುತ್ತಿದ್ದೋ. ಇದೊಂದು ಸಮಾನ ಮನಸ್ಕರ, ಉತ್ತಮ ಅಲೋಚನೆಗಳು ಉಳ್ಳವರ ಗುಂಪು ಆಗಿತ್ತು. ಆದ್ರೆ ಮಾತಾಡೋ ತನಕ ಮಾತಾಡಿ ಚರ್ಚೆ ಮಾಡೋತನಕ ಮಾಡಿ ಕೊನೆಗೆ ಆ ಗುಂಪಿನಲ್ಲೇ ಇದ್ದ ಎಲ್ಲರಿಗಿಂತ ಹೆಚ್ಚು ಓದಿಗೊಂಡ, ತಿಳಿದುಕೊಂಡ, ಪಿಎಚ್‌ಡಿ ಹೋಲ್ಡರ್‌ ಸಹ ಆದ ಒಬ್ರು ‘ಅಯ್ಯೋ ಯಾರ್ ಗೆದ್ರೆ ನಮಗೇನು ಸರ್? ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ರು. ಅವರು ಹೀಗೆ ಯಾಕೆ ಹೇಳಿದ್ರೆಂದು ಒಮ್ಮೆ ಅಲೋಚಿಸಿದ್ದಕ್ಕೆ ಅದೆಷ್ಟೊ ವಿಷಯಗಳು ಕಣ್ಣಮುಂದೆ ಬಂದು ಹೋದವು.

ಅವರ ಆ ಮಾತಿನಲ್ಲಿ ‘ನಾವು ಈವರೆಗೆ ಗೆಲ್ಲಿಸಿದ ಯಾವೊಬ್ಬ ಪ್ರತಿನಿಧಿಯು ನಾವು ಸಮಾಧಾನ ಆಗುವಷ್ಟು ಆದ್ರು ಕೆಲಸ ಮಾಡಿಲ್ಲ ಅಂತಲೋ, ಈ ರಾಜಕೀಯ ದುಡ್ಡು ಇರುವವರ ಮತ್ತು ದುಡ್ಡು ಮಾಡಲು ಹೊರಡುವವರ ಆಟ ಮಾತ್ರ ಅಂತಲೋ, ನಮ್ಮ ಮತ ನಮ್ಮ ಕ್ಷೇತ್ರದ ಅಭಿವೃದ್ಧಿಯ ಹಾದಿಯನ್ನು ಬದಲಿಸವಲ್ಲ ಎಂಬ ತಾತ್ಸಾರವೋ, ಅಯ್ಯೋ… ರಾಜಕೀಯ ಸಹವಾಸನೆ ಬೇಡ ಸಾಧ್ಯವಾದ್ರೆ ಒಂದು ವೋಟ್ ಹಾಕಿ ಸುಮ್ಮನಿದ್ದು ಬಿಡಣ ಎಂತಲೋ? ಅವರ ಮಾತಿಗೆ ಪುಷ್ಠಿ ನೀಡುವ ನಕರಾತ್ನಕ ಕಾರಣಗಳನ್ನು ಮಾತ್ರ ಪಟ್ಟಿ ಮಾಡುತ್ತಾ ಹೋಗಬಹುದಾದ ಇನ್ನೂ ಹಲವು ವಿಷಯಗಳಿದ್ದವು ಎನಿಸಿತು.

ವಾಸ್ತವವಾಗಿ ಆ ಒಂದು ಮಾತು ಕೇವಲ ಅವರೊಬ್ಬರಿಂದ ನನ್ನ ಕಿವಿಗೆ ಬಿದ್ದುದಲ್ಲ. ಪ್ರತಿ ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಳ್ಳಿಯ ನನ್ನ ಸ್ನೇಹಿತರ ಮನೆಗಳಿಗೆ ಹೋದಾಗ, ಅಂಗಡಿ ಮುಂಗಟ್ಟು, ಟೀ ಅಂಗಡಿ, ಅರಳಿಕಟ್ಟೆ ಮೇಲೆ ಕುಳಿತ ಎಲ್ಲರಿಂದಲೂ ಕೇಳಿಸಿದೆ. ಇವರು ಹಾಗೆ ತಮಗೆ ತೋಚಿದನ್ನು ಮಾತಾಡಿ ಕೊನೆಗೆ ಹೀಗೆ ಅಂದವರು. ಆದರೆ ಯುವ ಜನತೆ, ಅದರಲ್ಲೂ ಹೆಚ್ಚು ಓದಿಕೊಂಡವರೂ, ಸಮಾಜಿಕ ಅರಿವಿರುವವರಿಂದ ಈ ಪ್ರಜಾಪ್ರಭುತ್ವದ ಹಬ್ಬದ ತೀರಾ ಕಡೆಗಣಿಸುವ ಮಾತು ವಿಪರ್ಯಾಸವೇ ಅನಿಸುತ್ತದೆ.

ಇಷ್ಟೇ ಅಲ್ಲ. ರಾಜ್ಯದಲ್ಲಿ ಕಳೆದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ವಾಹಿನಿಯೊಂದು ಬೆಂಗಳೂರಿನ ಕೆಲವು ಕಾಲೇಜು ವಿದ್ಯಾರ್ಥಿಗಳನ್ನು ಮುಖ್ಯಮಮತ್ರಿ ಯಾರು? ಪ್ರಧಾನ ಮಂತ್ರಿ ಯಾರು? ಯಾವ ಪಕ್ಷದ ಸರ್ಕಾರ ಅಧಿಕಾರದಲ್ಲಿದೆ? ಎಂದು ಕೇಳಿದ್ದಕ್ಕೆ ಶೇ.80 ರಷ್ಟು ವಿದ್ಯಾರ್ಥಿಗಳಿಂದ ತಪ್ಪು ಉತ್ತರಗಳೇ ನೀಡಿರುವ ವಿಡಿಯೋ ವೈರಲ್ ಆಗಿತ್ತು. ಇದರಿಂದ ತಿಳಿದ ಒಂದು ಸತ್ಯ ವಿದ್ಯಾರ್ಥಿಗಳು ರಾಜಕೀಯ ಅಂದ್ರೆ ತಾತ್ಸಾರ ತೋರಿಸುತ್ತಿರುವುದು. ಇನ್ನು ರಾಜಕೀಯ, ರಾಜಕಾರಣಿಗಳು ಎರಡರ ಬಗ್ಗೆಯೂ ಎಲ್ಲಾ ಮಜಲುಗಳಿಂದಲೂ ಆಳವಾಗಿ ಅರಿವಿರುವ ಮೋಸ್ಟ್ ಎಜುಕೇಟೆಡ್ ಗಳು ಸಹ ಮೂಗು ಮುರಿಯುತ್ತಿದ್ದಾರೆ. ಹಳ್ಳಿಯಲ್ಲಿ ಮನೆಯ ಸದಸ್ಯರು ಸಹ ಯಾರ್ ಗೆದ್ದರೇ ನಮಗೇನು ಅಂತಿದ್ದಾರೆ? ಆದ್ರು ಸಹ ಇವರೆಲ್ಲರ ಮತಗಳು ಬೀಳುತ್ತಿವೆ. ಹಾಗೆ ಮೂರು ನಾಲ್ಕು ಭಾರಿ ಒಂದೇ ಕ್ಷೇತ್ರದಲ್ಲಿ ಗೆದ್ದ ಶಾಸಕರು ಇದ್ದಾರೆ. ಸಂಸದರು ಇದ್ದಾರೆ. ಆದ್ರೆ ಆಯಾ ಕ್ಷೇತ್ರಗಳಲ್ಲಿಯ ಹಳ್ಳಿಯ, ಪಟ್ಟಣಗಳ ಮೂಲ ಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇಯಿಲ್ಲ. ಅಭಿವೃದ್ಧಿ ಹಾಗಿಯೇಯಿಲ್ಲ. ಹಾಗಿದ್ರು ಸಹ ಇಂತಹ ಕ್ಷೇತ್ರಗಳಲ್ಲಿಯ ಶಾಸಕರ, ಸಂಸದರ ಹ್ಯಾಟ್ರಿಕ್ ಗೆಲುವು “How it is Possible”. ಜನರಿಗೆ ಇನ್ನೂ ಸಹ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ ಎಂದು ಅನಿಸೇ ಇಲ್ಲವೇ?

ಇವರ ಈ ಗೆಲುವಿಗೆ ಆಯಾ ಸ್ಥಳೀಯ ಪ್ರದೇಶಗಳ ಕಾರ್ಯಕರ್ತರು ಕಾರಣಾನಾ?. ಅಭಿವೃದ್ಧಿಗೆ ಮುಂದಾಗದ ಪ್ರತಿನಿಧಿಗಳನ್ನು ಖಂಡಿತಾ ಪದೇ ಪದೇ ಗೆಲ್ಲಿಸಲು ಸ್ಥಳೀಯ ಕಾರ್ಯಕರ್ತರು ಹಾಗೆಲ್ಲಾ ಮುಂದಾಗುವುದಿಲ್ಲ. ಅವರು ಅಷ್ಟೊಂದು ದಡ್ಡರಲ್ಲ ಬಿಡಿ. ಅಥವಾ ಯಾವ ಅಭಿವೃದ್ಧಿ ಆದ್ರೆ ಎಷ್ಟು ಬಿಟ್ಟರೆ ಎಷ್ಟು? ನಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದು ಕಾರ್ಯಕರ್ತರು ಈ ನಾಯಕರ ಗೆಲುವಿಗೆ ಕಾರಣರಾಗಿರಬಹುದಾ..? ಇದಕ್ಕೆಲ್ಲಾ ಉತ್ತರವನ್ನು ಮತ ಹಾಕಿದ ಪ್ರತಿಯೊಬ್ಬರೋ ಅಥವಾ ಪ್ರತಿಯೊಂದು ಮನೆಯಲ್ಲಿ ಆ ಸದಸ್ಯರೆಲ್ಲರ ವೋಟ್‌ ಅನ್ನು ಇವರಿಗೆ ಹಾಕಿ ಎಂದು ಹೇಳಿದ ಒಬ್ಬ ಮುಖ್ಯಸ್ಥನೋ ಹುಡುಕಿಕೊಳ್ಳಬೇಕಾಗಿದೆ.

ನನ್ನ ಅನುಭವಕ್ಕೆ ಬಂದಹಾಗೆ ಹಳ್ಳಿಗಳಲ್ಲಿ ಮತ ಚಲಾವಣೆ ಮಾಡುವ ಬಹುಸಂಖ್ಯಾತರಿಗೆ ಗೆದ್ದ ಜನ ಪತ್ರಿನಿಧಿಯ ಪ್ರಭಾವ ತಮ್ಮ ಜೀವನದ ಮೇಲೆ ಯಾವೆಲ್ಲಾ ರೀತಿ ಬೀರುತ್ತದೆ ಎಂದು ಭಾಗಶಃ ಗೊತ್ತಿಲ್ಲ. ಗೊತ್ತಿದ್ದಿದ್ರೆ ಮೂಲ ಸೌಕರ್ಯವನ್ನೇ ಅಭಿವೃದ್ಧಿ ಪಡಿಸದ ಮುರ್ನಾಲ್ಕು ಭಾರಿ ಗೆದ್ದ ನಾಯಕರು ಆ ಗೆಲುವಿನ ಹಾದಿಯನ್ನೇ ನೋಡಲು ಆಗುತ್ತಿರಲಿಲ್ಲ. ಬಹುಮುಖ್ಯವಾಗಿ ” ಮತ ಹಾಕಿದ ನಾವು ಇನ್ನೂ ಯಾವ ಸ್ಥರದಲ್ಲಿ ಇದ್ದೇವೋ ಅಲ್ಲೇ ಇದ್ದೀವಿ. ಆದರೆ ಗೆದ್ದ ಜನಪ್ರತಿನಿಧಿ ಮಾತ್ರ ಆರ್ಥಿಕವಾಗಿ (ಪ್ರತಿ ಚುನಾವಣೆ ಸಂದರ್ಭದಲ್ಲಿಯ ಆಸ್ತಿ ಗೋಷಣೆಗಳ ಪಟ್ಟಿ ಮಾಡಿ ನೋಡಿ), ಸಾಮಾಜಿಕವಾಗಿ ಮೇಲಿಂದ ಮೇಲೆ ಅಭಿವೃದ್ಧಿ ಹೊಂದುತ್ತಲೇ ಇದ್ದಾನೆ. ಇದು ಹೇಗೆ ಸಾಧ್ಯ” ಎಂಬ ಅಲೋಚನೆ ಅವರಿಕೆ ಇನ್ನೂ ಬಂದಿರಲಿಕ್ಕೆ ಸಾಧ್ಯವೇ ಇಲ್ಲ. ಹಾಗಿದ್ರೆ ಮತದಾರರು ದಾರಿ ತಪ್ಪಿ ಮತಹಾಕುತ್ತಿದ್ದಾರಾ? ಅಥವಾ ಯಾರಾದ್ರು ದಾರಿ ತಪ್ಪಿಸುತ್ತಿದ್ದಾರಾ?.. ಚುನಾವಣೆ, ಜನಪ್ರತಿನಿಧಿಯ ಆಯ್ಕೆಯಲ್ಲಿ ಪ್ರತಿಯೊಬ್ಬ ಮತದಾರನಿಗೂ ಅವರದೇ ಆದ ಸ್ವಂತ ಆಲೋಚನೆಯೇ ಇಲ್ವಾ? ಇದಕ್ಕೂ ಉತ್ತರ ಅವರವರಲ್ಲಿಯೇ ಇದೆ. ಆದ್ರೆ ಈ ಪ್ರಶ್ನೆಗಳೆಲ್ಲಾ ಅವರ ತಲೆಗೆ ಬಂದ್ರೆ ಮಾತ್ರ.

ಇನ್ನೂ ಅಲ್ಲೆಲ್ಲೋ ಕ್ಯಾಟೀನ್‌, ಕಾಫಿ ಶಾಪ್ ನಲ್ಲಿ ಕುಳಿತು ಭಷ್ಟಾಚಾರ, ಪ್ರಮಾಣಿಕತೆ, ಮೂಲ ಸೌಕರ್ಯಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಬಗ್ಗೆ ಬಹುಸಂಖ್ಯಾತ ಎಜುಕೇಟೆಡ್‌ಗಳು. ಚರ್ಚಿಸುತ್ತಿರುತ್ತಾರೆ. ಇವರೆಲ್ಲಾ ತಾವೇ ಜನಪ್ರತಿನಿಧಿ ಆದ್ರೆ ಇವೆಲ್ಲಾ ಸರಿಮಾಡಬಹುದು ಎಂದು ಯೋಚಿಸುತ್ತಲೇ ಇಲ್ವಾ? ಯೋಚಿಸಿದ್ರು, ನಾನು ಸೋತುಬಿಡ್ತೀನಿ ಅನ್ನೋ ಭಯವೋ ಅಥವಾ ಜನ ಪ್ರತಿನಿಧಿ ಆಗೋಕೆ ಧೈರ್ಯವೇ ಇಲ್ಲವೋ?.. ಈ ಎರಡು ನೆಗೆಟಿವ್ ಎನರ್ಜಿಗಳು ನನಗಿಲ್ಲ ಎನ್ನುವವರು ಸೋಲು ಗೆಲುವಿಗೆ ಮೆಟ್ಟಿಲು ಎಂದು ಮುಂದೆ ಬರಬಾರದೇಕೆ?

ಅದನ್ನು ಬಿಟ್ಟು ಜನ ಪ್ರತಿನಿಧಿಯ ಪ್ರಭಾವ ‘ಅ’ ಇಂದ ‘ಳ’ ವರೆಗೆ ಹೇಗೆಲ್ಲಾ ನಮ್ಮ ಮೇಲೆ ಬೀರುತ್ತದೆ ಎಂದು ಗೊತ್ತಿದ್ದು ಸಹ ‘ಯಾರು ಗೆದ್ದರೇ ನಮಗೇನು?’ ಎಂಬ ವಿಪರ್ಯಾಸದ ನುಡಿ ಎಜುಕೇಟೆಡ್‌ಗಳ ಬಾಯಿಂದಲೇ ಬಂದ್ರೆ ಯಂಗ್ ಸ್ವಾಮಿ?..

ಸುನೀಲ್ ಬಿ ಎನ್

ಬಿಂಡಹಳ್ಳಿ

ಮಂಡ್ಯ ಜಿಲ್ಲೆ

You may also like