Home » ಮಂಡ್ಯ ಜಿಲ್ಲೆ ಜನ ಪ್ರತಿನಿಧಿ ಇತಿಹಾಸ ಎತ್ತ ಸಾಗುತ್ತಿದೆ?

ಮಂಡ್ಯ ಜಿಲ್ಲೆ ಜನ ಪ್ರತಿನಿಧಿ ಇತಿಹಾಸ ಎತ್ತ ಸಾಗುತ್ತಿದೆ?

by manager manager

ಈ ಬಗ್ಗೆ ಹಿಂದೆ, ಈಗ ಮೂಲತಃ ಮಂಡ್ಯದ ಯಾರಾದರೂ ತಮ್ಮಲ್ಲಿ ಪ್ರಶ್ನೆ ಹಾಕಿಕೊಂಡಿರಬಹುದು ಅಥವಾ ಇಲ್ಲದೆಯೂ ಇರಬಹುದು. ಆದರೆ ಯಾರೋಬ್ಬರೂ ಈ ಪ್ರಶ್ನೆಯನ್ನು ತಮಗೆ ತಾವೇ ಅಥವಾ ಸ್ನೇಹಿತರ, ಗುಂಪಿನ ಚರ್ಚೆಯಲ್ಲಿ ಮುನ್ನೆಲೆಗೆ ಈಗಲಾದರೂ ತರದಿದ್ದರೇ ಅದೊಂದು ವಿಪರ್ಯಾಸ ಆಗಬಹುದು. ಆಗದೆಯೂ ಇರಬಹುದು. 17ನೇ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಈ ಪ್ರಶ್ನೆ ಮಂಡ್ಯದ ಜನತೆಗೆ ಅಗತ್ಯವೋ? ಅನಗತ್ಯವೋ? ಎಂಬುದನ್ನು ಸಂಸತ್ತಿನಲ್ಲಿ ತಮ್ಮ ನಾಯಕ ಇವರೇ ಆಗಬೇಕು ಎಂದು ಮತ ಚಲಾಯಿಸುವ ಪ್ರತಿಯೊಬ್ಬರು ಯೋಚಿಸಬೇಕು. ಅಷ್ಟೆ ಅಲ್ಲ ಅವರು ಮೂಲತಃ ಮಂಡ್ಯ ಮಣ್ಣಿನವರೇ? ಈ ಮೊದಲು ಮಂಡ್ಯ ಜಿಲ್ಲೆಯಾದ್ಯಂತ ಸುತ್ತಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದಾರೆಯೇ? ಮಂಡ್ಯದ.. ಅಲ್ಲಲ್ಲಾ.. ಮಂಡ್ಯ ಜಿಲ್ಲೆಯಾದ್ಯಂತ ಸುತ್ತಿ ಜನರ ಕಷ್ಟ ನಷ್ಟಗಳನ್ನು ತಿಳಿದು ಅವುಗಳ ಅಭಿವೃದ್ಧಿ/ಪರಿಹಾರ ನನ್ನದು ಎಂದು ಸ್ಪರ್ಧಿಸುತ್ತಿರುವ ಅಭ್ಯರ್ಥಿಗೆ ನಾನು ಮತಹಾಕಲು ಹೊರಟಿದ್ದೇನೇಯೇ? ಎಂಬುದನ್ನುಎಲ್ಲರೂ ತಮ್ಮ ಅನುಭವಕ್ಕೆ ತೆಗೆದುಕೊಳ್ಳಬಹುದು.

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ’ ಎಂಬಂತೆ ‘ಚುನಾವಣೆ ಬಂದಾಗ ಕಣ್ತೆರೆದು’ ನಾನು ನಾಯಕ, ನಾನು ನಾಯಕಿ ಎಂದು ಬಿಂಬಿಸಿಕೊಳ್ಳುವವರು ಇದ್ದಾರೆ. ಇವರನ್ನು ನಂಬಿ ಹೇಗೆ ಮತಹಾಕುವುದು ಎಂಬುದು ಕಾಡಬೇಕಿದೆ. ಈಗ ಮಂಡ್ಯದ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿರುವ, ಸ್ಪರ್ಧೆಗೆ ಇಳಿಯುತ್ತಿರುವ ಯಾವುದೇ ಪಕ್ಷದ ಅಭ್ಯರ್ಥಿಗಳ ಪೈಕಿ ಯಾರು.. ನಮ್ಮ ಮೂಲತಃ ಮಂಡ್ಯದವರು. ಅವರು ಮೂಲತಃ ಮಂಡ್ಯದವರೇ ಎಂಬುದನ್ನು ಯೋಚಿಸಬೇಕಿದೆ.

ಒಂದು ಪಕ್ಷ ಮಂಡ್ಯದ ಮೂಲತಃ ಪ್ರಜೆ ಆಗದೇ ಇತರೆ ನೆಲೆಯವರಿಗೆ ಅಧಿಕಾರ ಕೊಡುತ್ತಾ ಹೋದರೆ? ಮುಂದೊಂದು ದಿನ ಅಲ್ಲಾ..? ನಮಗೆ ತಿಳಿಯದೇ ನಾವೇ ನಮ್ಮ ಮಂಡ್ಯ ಜನಪ್ರತಿನಿಧಿ ಇತಿಹಾಸವನ್ನು ಯಾರಿಗೆ ಕೊಟ್ಟು ಬಿಟ್ಟೋ? ಎಂಬ ಪ್ರಶ್ನೆ ಕಾಡದೇ ಇರುತ್ತದಾ.. ಈ ರೀತಿ ಎಲ್ಲಾ ಅಲೋಚನೆಗಳು ನಮಗೆ ಏಕೆ ಬೇಕು? ಎಂಬುದಕ್ಕೆ ಒಂದು ಸರಳ ಉದಾಹರಣೆಯನ್ನುನೋಡಬಹುದು..

ಪಂಚಾಯತ್ ರಾಜ್‌ದಲ್ಲಿ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್, ಗ್ರಾಮ ಪಂಚಾಯತ್ ಎಂಬ ವ್ಯವಸ್ಥೆ ಇದೆ. ಇಲ್ಲಿ ಗ್ರಾಮ ಪಂಚಾಯ್ತಿ ಪ್ರತಿ ವ್ಯಕ್ತಿಗೆ, ಪ್ರತಿ ಊರಿಗೆ ಸಮಸ್ಯೆಯ ಮೊದಲ ಸೇವಾ ಪರಿಹಾರ ಕೇಂದ್ರ. ಇದನ್ನು ಸ್ಥಳೀಯ ಮಟ್ಟದ ಸಮಸ್ಯೆಗಳ ಪರಿಹಾರಕ್ಕಾಗಿ ರೂಪಿಸಲಾಗಿದೆ. ಹಾಗೆಯೇ ನಮ್ಮ ಸಮಸ್ಯೆಗಳಿಗೆ, ಕಷ್ಟ-ನಷ್ಟಗಳಿಗೆ ಸ್ಪಂಧಿಸುವ ಉತ್ತಮ ನಾಯಕ ಯಾರು ಎಂಬುದನ್ನು ನಾವು ಸ್ಥಳೀಯವಾಗಿಯೇ ಗುರುತಿಸಲು ಮೊದಲ ಆಧ್ಯತೇ ನೀಡಬೇಕು. ನಂತರ ಅದಕ್ಕೆ ಪರಿಹಾರವೇ ಇಲ್ಲ ಎಂದಾಗ ಮುಂದುವರಿದ ಅಲೋಚನೆ ಅಗತ್ಯ. ಇದನ್ನು ಪ್ರಸ್ತುತಕ್ಕೆ ಸಂಬಂಧಿಸಿದಂತೆಯೂ ಅವಲೋಕನ ಮಾಡಬೇಕಿದೆ.

ಈ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲಿರುವ ಈಗಾಗಲೇ ಕೇಳಿಬಂದಿರುವ ಅಭ್ಯರ್ಥಿಗಳ ಪೈಕಿಗೂ ಈ ಎಲ್ಲಾ ಪ್ರಶ್ನೆಗಳ ತಾಳೆ ಅಗತ್ಯ. ಇವರನ್ನು ಬಿಟ್ಟರೇ ಮತ್ಯಾರು ಮಂಡ್ಯವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಲಿದ್ದಾರೆ? ಎನ್ನುವುದಕ್ಕೆ ಪ್ರತಿ ಪಕ್ಷಗಳಲ್ಲಿ ನಿಷ್ಟೆಯಿಂದ ದುಡಿದ ಮೂಲತಃ ಮಂಡ್ಯದ ಯಾರಾದರೂ ಒಬ್ಬರೂ ಸಿಗಬಹುದು. ಅವರು ಪಕ್ಷವು ಹಾಕಿರುವ ಮೂಗುದಾರಕ್ಕೆ ಶರಣಾಗಿರಬಹುದು. ಅಥವಾ ತಮ್ಮಲ್ಲಿ ಅಷ್ಟು ದೊಡ್ಡಮಟ್ಟದ ನಾಯಕತ್ವ ವಹಿಸಲು ಆಗುವುದಿಲ್ಲ ಎಂದು ಸುಮ್ಮನಾಗಿರಬಹುದು. ಈ ರೀತಿ ಅಂದುಕೊಂಡರೇ? ಅಲ್ಲಿಗೆ ಮೂಲತಃ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳ ಇತಿಹಾಸ ಎತ್ತ ಸಾಗುವುದು? ಎಂಬ ಚಿಂತೆಯೂ ಬರುವುದು.

‘ನಾನು ಪ್ರಮಾಣಿಕನಾಗಿ ಈವರೆಗೆ ನಿಷ್ಟೆಯಿಂದ ಜನತೆಗೆ ಸಹಾಯ ಮಾಡಿದ್ದೇನೆ. ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಮುಂದೆಯೂ ಸಹ. ನಾನು ಮಂಡ್ಯದ ಮಣ್ಣಿನವನು. ಆ ಅಭಿಮಾನ, ಭಕ್ತಿ ಇದ್ದಲ್ಲಿ ಯಾವುದೇ ಪಕ್ಷದಿಂದ ಅಥವಾ ಪಕ್ಷೇತರವಾಗಿ ಆದರೂ ಗೆದ್ದು ಬರುತ್ತೇನೆ ಎನ್ನುವವರು ಮಾತ್ರ ಮೂಲತಃ ಮಂಡ್ಯದ ಜನಪ್ರತಿನಿಧಿಗಳ ಇತಿಹಾಸ ಉಳಿಸಬಹುದು. ಅಂತಹವರು ‘ಸ್ವಾರ್ಥಕ್ಕಾಗಿ ಓಡುತ್ತಿರುವ ಈ ಪ್ರಪಂಚದಲ್ಲಿ ಯಾರು ನಮಗೋಸ್ಕರ ನಿಲ್ಲೋದಿಲ್ಲ. ನಾವೇ ತಡೆದು ನಿಲ್ಲಿಸಬೇಕು’ ಎಂದು ಯೋಚಿಸಿ ಪಕ್ಷದ ಮೂಗುದಾರ ಕಿತ್ತು ಎಸೆದೋ ಅಥವಾ ನಿಷ್ಟೆಯಿಂದ ಕೆಲಸಮಾಡಿದ ಪಕ್ಷದಿಂದಲೇ ಸೀಟು ಗಿಟ್ಟಿಸಿಕೊಂಡು ಸ್ಪರ್ಧಿಸಬೇಕು. ಹಾಗೆ ಮತ ಚಲಾಯಿಸುವವರು ಇಡೀ ಮಂಡ್ಯ ಜಿಲ್ಲೆ ಅಭಿವೃದ್ಧಿಗಾಗಿ ಎಂದು ಒಗ್ಗಟ್ಟು ಪ್ರದರ್ಶಿಸಿ ವೋಟ್ ಮಾಡಬೇಕಿದೆ.

ಇಲ್ಲ.. ನಾವು ನಮಗೆ ರಾತ್ರೋರಾತ್ರಿ ಒಂದು ವೋಟಿಗಾಗಿ 500 ಅಥವಾ 1000 ಅಥವಾ 2000 ರೂ ನೋಟು ಕೊಟ್ಟವರಿಗೆ ಮಾತ್ರ ಮತ ಹಾಕುತ್ತೇನೆ ಎನ್ನುವವರು ಅಷ್ಟಕ್ಕೆ ತೃಪ್ತಿಪಟ್ಟುಕೊಂಡು, ಒಂದು ವಾರದ ಖರ್ಚಿಗೂ ಸಾಲದ ಆ ಹಣಕ್ಕೆ ಖುಷಿ ಪಡೆದು ಚುನಾವಣೆ ನಡೆದುದನ್ನೇ ಮರೆತು ಉಳಿಯಬಹುದು.

ಒಮ್ಮೆ ಯೋಚಿಸಿ..

ನಮ್ಮೂರಲ್ಲಿ ಆಸ್ಪತ್ರೆ ಕಟ್ಟಡವಾಗಿ ಎಷ್ಟೋ ವರ್ಷವಾಗಿದೆ. ಡಾಕ್ಟರ್‌ಗಳೇ ಬಂದಿಲ್ಲ. ನಮ್ಮಲ್ಲಿ ಆಸ್ಪತ್ರೆ ಇದೆ ಆದ್ರೆ ಅಲ್ಲಿ ಮೂಲ ಸೌಕರ್ಯವೇ ಇಲ್ಲ. ಎಷ್ಟೋ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲ್ಲಿ ಪೂಜೆ ಆಗಿದೆ. ಆದ್ರೆ ಕೆಲಸ ಅಲ್ಲಿಗೆ ನಿಂತು ಹೋಯಿತು. ಕೆರೆ ಇದೆ. ನೀರು ತುಂಬಿಸಲು ತಿಂಗಳು ಗಟ್ಟಲೇ ಅಲೆದಾಡಬೇಕು. ಇದ್ದ ಕಾಲುವೇ ಮುಚ್ಚಿದೆ. ನೀರು ಇನ್ನೆಲ್ಲಿಂದ. ಗ್ರಾಮ ಪಂಚಾಯ್ತಿ ಅಧ್ಯಕ್ಷರಿದ್ದಾರೆ ಅವರಿಗೆ ಅವರ ಕರ್ತವ್ಯ, ಅಧಿಕಾರದ ಬಗ್ಗೆ ಅರಿವೇ ಇಲ್ಲ. ವಾಟರ್ ಟ್ಯಾಂಕ್‌ಗಳಿಗೆ ನೀರು ಸಿಗುತ್ತಿಲ್ಲ. ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯಬಹುದು. ಇವುಗಳಿಗೆ ಪರಿಹಾರ ಯಾವಾಗ? ಈ ಸಮಸ್ಯೆಗಳು ಎಲ್ಲೆಲ್ಲಿ ಇನ್ನೂ ಹಾಗೆ ಉಳಿದಿವೆಯೋ? ಇದಕ್ಕೆ ಕಾರಣ ರಾತ್ರೋ ರಾತ್ರಿ ಕೈಗೆ ಬಂದ 500/1000/2000 ರೂ ನೋಟುಗಳನ್ನು ಯಾರು ಕೊಟ್ಟರು ಎಂದಷ್ಟೇ ನೋಡಿ ಹಾಕಿದ ಮತಗಳಿರಬಹುದು..

ಈಗ ಹೇಳಿ ಸ್ಥಳೀಯ ಸಮಸ್ಯೆಗೆ ಯಾರು ಮೊದಲು ಪರಿಹಾರ ನೀಡುವರು? ಚುನಾವಣೆ ಬಂದಾಗ ತರಾತುರಿಯಲ್ಲಿಕಾರ್ಯಕ್ರಮ ಮಾಡಿ ವೇದಿಕೆ ಮುಂದಿನ ಜನರನ್ನು ನೋಡಿದವರೇ? ಅಥವಾ ಈ ಸಂದರ್ಭ ಬಿಟ್ಟು ಆಗಾಗ ಜಿಲ್ಲೆಯಾದ್ಯಂತ ಸುತ್ತಿ ಕಷ್ಟ ನಷ್ಟಗಳಿಗೆ ಸ್ಪಂದಿಸಿದವರೇ?

ಸುನೀಲ್ ಬಿ.ಎನ್

ಬಿಂಡಹಳ್ಳಿ

ಮಂಡ್ಯ ಜಿಲ್ಲೆ

You may also like